Advertisement

ಮೇಲ್ಮನೆಯಲ್ಲಿ ರಾಮಾಯಣ, ಮಹಾಭಾರತ

11:45 PM Mar 11, 2020 | Lakshmi GovindaRaj |

ವಿಧಾನ ಪರಿಷತ್ತು: ಮೇಲ್ಮನೆಯಲ್ಲಿ ಒಂದರ ಹಿಂದೊಂದು ರಾಮಾಯಣ-ಮಹಾಭಾರತ ಪ್ರಸಂಗಗಳು ಮೂಡಿಬಂದವು! ಪ್ರಜಾಪ್ರಭುತ್ವದ ರಕ್ಷಣೆ ಮತ್ತು ರಾಜಕೀಯ ವ್ಯವಸ್ಥೆಗೆ ಮೇಲ್ಮನೆ ಸದಸ್ಯರು ಉದಾಹರಣೆಯಾಗಿ ರಾಮಾಯಣ ಮತ್ತು ಮಹಾಭಾರತದ ವಿವಿಧ ಘಟನೆಗಳ ಮೂಲಕ ಮಾರ್ಮಿಕವಾಗಿ ಕನ್ನಡಿ ಹಿಡಿಯುವ ಪ್ರಯತ್ನ ಮಾಡಿದರು. ಇದರಲ್ಲಿ ರಾಮರಾಜ್ಯ, ಸೀತೆಯ ವನವಾಸ, ಕರ್ಣನ ಸ್ವಾಮಿನಿಷ್ಠೆ, ಕೃಷ್ಣನ ನಿಷ್ಠುರವಾದದಂತಹ ವಿಷಯಗಳು ವಸ್ತುವಾದವು.

Advertisement

ಸಂವಿಧಾನದ ಮೇಲಿನ ವಿಶೇಷ ಚರ್ಚೆಯಲ್ಲಿ ಆಡಳಿತ ಪಕ್ಷದ ಸದಸ್ಯೆ ತೇಜಸ್ವಿನಿಗೌಡ ಮಾತನಾಡಿ, “ಒಬ್ಬ ಅಗಸನ ಮಾತು ಕೇಳಿ ರಾಮ, ಸೀತೆಯನ್ನು ಕಾಡಿಗಟ್ಟುತ್ತಾನೆ. ಇದು ರಾಮ ರಾಜ್ಯದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಇದ್ದ ಮಹತ್ವ. ಮಹಾತ್ಮ ಗಾಂಧೀಜಿಗೆ ಕೂಡ ಇದೇ ಕಾರಣಕ್ಕೆ ರಾಮನು ಪ್ರೇರಣೆಯಾಗಿದ್ದ. ಇದುವರೆಗೂ ಆ ರಾಮರಾಜ್ಯವನ್ನು ಕಾಣಲು ನಮಗೆ ಸಾಧ್ಯವಾಗಿಲ್ಲ.

ರಾಮನಂತಹ ನಿಷ್ಠೆ ಪ್ರಜಾಪ್ರಭುತ್ವದಲ್ಲಿ ಸಾಧ್ಯವೇ ಎಂದರು. ಇದಕ್ಕೆ ಪೂರಕವಾಗಿ ಮಾತನಾಡಿದ ಜೆಡಿಎಸ್‌ನ ಬೋಜೇಗೌಡ, ಲಕ್ಷ್ಮಣನು ಸೀತೆಯನ್ನು ಕಾಡಿಗೆ ಬಿಡಲು ಕರೆದೊಯ್ಯುತ್ತಾನೆ. ಇದರ ಮಾಹಿತಿ ತುಂಬು ಗರ್ಭಿಣಿ ಸೀತೆಗೆ ಇರುವುದಿಲ್ಲ ಎಂಬ ಪ್ರಸಂಗವನ್ನು ಸಂಸ್ಕೃತ ಶ್ಲೋಕಗಳ ಮೂಲಕ ವರ್ಣಿಸಿದರು.

ಕರ್ಣನ ಸ್ವಾಮಿನಿಷ್ಠೆ ಈಗ ಸಾಧ್ಯವೇ?: ಮಹಾಭಾರತದ ಪ್ರಸಂಗಗಳನ್ನೂ ಉಲ್ಲೇಖೀಸಿದ ಬೋಜೇಗೌಡ, “ಕರ್ಣನಿಗೆ ಕೃಷ್ಣನು ದುರ್ಯೋ ಧನನ್ನು ಬಿಟ್ಟು ಬಾ. ಇಡೀ ರಾಜ್ಯವೇ ನಿನ್ನದಾಗು ತ್ತದೆ ಎಂದು ಹೇಳುತ್ತಾನೆ. ಆದರೆ, ಇದಕ್ಕೆ ಕರ್ಣ ಒಪ್ಪುವುದಿಲ್ಲ. ಕರ್ಣನಲ್ಲಿ ದುರ್ಯೋಧನನ ಬಗ್ಗೆ ಇರುವ ಸ್ವಾಮಿನಿಷ್ಠೆ. ಈಗಿರುವ ರಾಜಕಾರಣಿಗ ಲ್ಲಿ ಕಾಣಲು ಸಾಧ್ಯವೇ? ಎಂದು ಎದುರಿಗಿದ್ದ ಸಚಿವ ಬಿ.ಸಿ. ಪಾಟೀಲ ಅವರನ್ನು ನೋಡಿದರು.

ಅಸ್ತ್ರಕ್ಕೆ ಪ್ರತ್ಯಸ್ತ್ರ: ಚುನಾವಣೆಯಲ್ಲಿನ ಭ್ರಷ್ಟಾಚಾರ ಕುರಿತ ಚರ್ಚೆ ವೇಳೆ ಮಧ್ಯಪ್ರವೇಶಿಸಿದ ಸಚಿವ ಸಿ.ಟಿ. ರವಿ, “ಮಹಾಭಾರತ ಯುದ್ಧದಲ್ಲಿ ಕರ್ಣನ ರಥದ ಚಕ್ರ ನೆಲದಲ್ಲಿ ಕುಸಿಯುತ್ತದೆ. ಇದೇ ಸುಸಮಯ, ಬಾಣವನ್ನು ಹೂಡುವಂತೆ ಸಾರಥಿ ಕೃಷ್ಣನು ಅರ್ಜುನನಿಗೆ ಹೇಳುತ್ತಾನೆ. ಆದರೆ, ಇದಕ್ಕೆ ಅರ್ಜುನ ನಿರಾಕರಿಸುತ್ತಾನೆ. ಆಗ, ಅಭಿಮನ್ಯುವನ್ನು ಚಕ್ರವ್ಯೂಹದಲ್ಲಿ ಕೊಂದಿದ್ದನ್ನು ನೆನಪಿಸುತ್ತಾನೆ. ಅದೇ ರೀತಿ, ಹಿಂದೆ ಕೂಡ ಏನೇನು ಆಗಿದೆ ಎಂಬುದನ್ನು ನಾವು ನೆನಪು ಮಾಡಿಕೊಳ್ಳಬೇಕಾಗುತ್ತದೆ. ಇದು ಅಸ್ತ್ರಕ್ಕೆ ಪ್ರತ್ಯಸ್ತ್ರ’ ಎಂದು ಹೇಳಿದರು.

Advertisement

ಸಂವಿಧಾನ ಬದಲಾಯಿಸಿದರೆ ರಕ್ತಪಾತ: ಲಿಂಗಪ್ಪ
ವಿಧಾನ ಪರಿಷತ್ತು: ಸಂವಿಧಾನವನ್ನು ಬದಲಾಯಿಸುವ ಪ್ರಯತ್ನಕ್ಕೆ ಕೈಹಾಕಿದರೆ, ದೇಶದಲ್ಲಿ ರಕ್ತಪಾತ ಆಗಲಿದೆ ಎಂದು ಕಾಂಗ್ರೆಸ್‌ನ ಸಿ.ಎಂ. ಲಿಂಗಪ್ಪ ಹೇಳಿದರು. ಮೇಲ್ಮನೆಯಲ್ಲಿ ಬುಧವಾರ ಸಂವಿಧಾನದ ಮೇಲಿನ ಚರ್ಚೆ ವೇಳೆ ಮಾತನಾಡಿ, ಸಂವಿಧಾನ ಇಲ್ಲವಾದರೆ ಭಾರತವೂ ಇಲ್ಲವಾಗುತ್ತದೆ. ಯಾವುದೇ ಕಾರಣಕ್ಕೂ ಇದರ ಬದಲಾವಣೆಗೆ ಅವಕಾಶ ನೀಡಬಾರದು. ಒಂದು ವೇಳೆ ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆದರೆ, ಸ್ವಾತಂತ್ರ್ಯ ಸಂಗ್ರಾಮಕ್ಕಿಂತ ಹತ್ತುಪಟ್ಟು ರಕ್ತಪಾತವಾಗಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next