ಹುಬ್ಬಳ್ಳಿ: ರಾಮಾಯಣದ ಪ್ರತಿಯೊಂದು ಶ್ಲೋಕಗಳಲ್ಲಿಯೂ ರಾಮನ ವೈಭವ ಗೋಚರಿಸುತ್ತದೆ ಎಂದು ಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದಂಗಳವರು ಹೇಳಿದರು. ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಶ್ರೀರಾಮ ನವಮಿ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಮಾಯಣ ದರ್ಶನವೆಂದರೆ ರಾಮನ ದರ್ಶನವೇ ಆಗಿದೆ. ರಾಮಾಯಣದಲ್ಲಿ ಎಲ್ಲೇ ಸ್ಪರ್ಷ ಮಾಡಿದರೂ ಶ್ರೀರಾಮನ ಮಹಿಮೆ ನಮಗೆ ಕಾಣುತ್ತದೆ ಎಂದರು. ಎದುರಿಗೆ ಸ್ತುತಿಸಿ ಹಿಂದೆ ಬೈಯ್ಯುವುದು ಸ್ವಾಮಿ ನಿಷ್ಠೆಯಲ್ಲ, ಹನುಮನದು ನಿಜವಾದ ಸ್ವಾಮಿ ನಿಷ್ಠೆ. ರಾವಣನ ಆಸ್ಥಾನದಲ್ಲಿದ್ದ ಹನುಮಂತ ರಾಮನಿಲ್ಲದಿದ್ದರೂ ರಾಮನನ್ನು ಸ್ಮರಿಸಿಕೊಂಡು, ನಮಿಸಿ ರಾವಣನ ಪ್ರತಿಯೊಂದು ಪ್ರಶ್ನೆಗಳಿಗೆ ಉತ್ತರಿಸುತ್ತಾನೆ.
ರಾವಣನ ಹತ್ತು ತಲೆಗಳು ಕೇಳುವ ಪ್ರಶ್ನೆಗಳಿಗೆ ರಾಮನ ವಿರೋಧಿ ರಾವಣನ ಇಪ್ಪತ್ತೂ ಕಿವಿಗಳಿಗೂ ಕೇಳುವಂತೆ ಉತ್ತರ ನೀಡುತ್ತಾನೆ ಎಂದು ತಿಳಿಸಿದರು. ಪಂ| ಪ್ರದ್ಯುಮ್ನಾಚಾರ್ಯ ಜೋಶಿ ಮಾತನಾಡಿ, ಸಂಸ್ಕಾರ ಇಲ್ಲದೇ ಸಂಸಾರ ಮಾಡಿದರೆ ಅದು ಹೆಚ್ಚು ದಿನ ಬಾಳುವುದಿಲ್ಲ. ಸಂಸ್ಕಾರ ಇಲ್ಲದಿದ್ದರಿಂದ ಪ್ರಸ್ತುತ ವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚುತ್ತಿದೆ.
ಮನೆಯ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಹೆಚ್ಚುತ್ತಿವೆ. ಯಾವ ರೀತಿ ಅವಿಭಕ್ತ ಕುಟುಂಬ ವಿಭಕ್ತ ಕುಟುಂಬವಾಗುವುದನ್ನು ರಾಮಾಯಣ ತೋರಿಸುತ್ತದೆ ಎಂದರು. ಕೊರ್ಲಳ್ಳಿ ನರಸಿಂಹಾಚಾರ್ಯ ಮಾತನಾಡಿ, ಸಮಾಜದಲ್ಲಿ ವಿಚ್ಛೇದನ ಸಾಮಾನ್ಯ ಎಂಬಂತಾಗಿದೆ.
ಮದುವೆಯಾಗಿ 3-4 ವರ್ಷಗಳಲ್ಲಿ ವಿಚ್ಛೇದನ ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ. ತಲಾಕ್ ಎಂದು ಮೂರು ಬಾರಿ ಹೇಳಿ ವಿಚ್ಛೇದನ ಪಡೆಯುವುದರ ವಿರುದ್ಧ ಮುಸಲ್ಮಾನ ಮಹಿಳೆಯರು ಧ್ವನಿ ಎತ್ತುತ್ತಿರುವಾಗ, ಹಿಂದೂಗಳಲ್ಲಿ ಸಣ್ಣ ಪುಟ್ಟ ಕಾರಣಕ್ಕೆ ಹೆಣ್ಣು ಮಕ್ಕಳು ವಿಚ್ಛೇದನವೊಂದೇ ಮಾರ್ಗ ಎಂಬಂತೆ ವರ್ತಿಸುತ್ತಿರುವುದು ನೋವಿನ ಸಂಗತಿ ಎಂದು ತಿಳಿಸಿದರು.
ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ವತಿಯಿಂದ 7 ದಿನಗಳಲ್ಲಿ 14 ಲಕ್ಷ ರೂ. ಸಂಗ್ರಹಿಸಿ ಸ್ವಾಮಿಗಳಿಗೆ ಸಮರ್ಪಿಸಲಾಯಿತು. ಕೃಷ್ಣ ಕೆಮೂರ, ರಾಘವೇಂದ್ರ ಭಟ್ ಇದ್ದರು.