ಹೊಸದಿಲ್ಲಿ: ನಮಗೆಲ್ಲ ವೀರೇಂದ್ರ ಸೆಹ್ವಾಗ್ ಹೆಸರು ಗೊತ್ತು. ಕ್ರಿಕೆಟ್ ಜಗತ್ತಿನ ವಿಧ್ವಂಸಕ ಆಟಗಾರರಲ್ಲಿ ಒಬ್ಬರು. ಅವರು ಲಯದಲ್ಲಿದ್ದಾಗ ಹೆದರದ ಬೌಲರ್‌ಗಳೇ ಇಲ್ಲ. ಆ ರೀತಿ ಮುಲಾಜು ನೋಡದೇ ಬಾರಿಸುತ್ತಿದ್ದರು. ಕ್ರಿಕೆಟ್ ಜಗತ್ತಿನ ದಿಗ್ಗಜ ಬೌಲರ್ ಗಳೆಲ್ಲ ಸೆಹ್ವಾಗ್ ಮುಂದೆ ಮಂಡಿಯೂರಿದ್ದಾರೆ.
ಅವರ ಕೈ ಮತ್ತು ಕಣ್ಣಿನ ನಡುವಿನ ಸಂತುಲನ ಅಸಾಧಾರಣವಾಗಿತ್ತು. ಆದ್ದರಿಂದಲೇ ನಿಖರ ವಾಗಿ ಬಾರಿಸುತ್ತಿದ್ದರು. ಅವರ ಮೇಲಿದ್ದ ಆರೋಪವೆಂದರೆ ಕಾಲನ್ನು ಮಾತ್ರ ಅಲ್ಲಾಡಿಸುತ್ತಿರಲಿಲ್ಲವೆನ್ನುವುದು. ತಾಂತ್ರಿಕವಾಗಿ ಪರಿಪೂರ್ಣ ಬ್ಯಾಟ್ಸ್ ಮನ್‌ಗಳು ಕಾಲನ್ನು ಅದ್ಭುತವಾಗಿ ಚಲಿಸಿ ಯಶಸ್ಸು ಕಾಣುತ್ತಾರೆ. ಸೆಹ್ವಾಗ್ ಮಾತ್ರ ಕಾಲನ್ನು ಚಲಿಸದೆಯೂ ಯಶಸ್ವಿಯಾಗಿದ್ದರು!
ಇಷ್ಟೆಲ್ಲ ಹೇಳುವುದಕ್ಕೆ ಒಂದು ಕಾರಣವಿದೆ. ಅದು ಸೆಹ್ವಾಗ್ ಮಾಡಿರುವ ಒಂದು ಟ್ವೀಟ್. ಆ ಕಾಲದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ ಈಗ ಮರುಪ್ರಸಾರ ವಾಗುತ್ತಿದೆ. ಅಲ್ಲಿ ಅಂಗದನ ಪ್ರಕರಣ ಬರುತ್ತದೆ. ಈ ಅಂಗದನೇ ತಮ್ಮ ಬ್ಯಾಟಿಂಗ್‌ಗೆ ಸ್ಫೂರ್ತಿ ಎಂದು ಸೆಹ್ವಾಗ್ ಹೇಳಿ ಕೊಂಡಿದ್ದಾರೆ.
ಅದು ಹೇಗೆನ್ನುತ್ತೀರಾ?
ಜನಪ್ರಿಯ ರಾಮಾಯಣ (ಮೂಲ ರಾಮಾಯಣವಲ್ಲ)ದಲ್ಲಿ ಯುದ್ಧ ತಪ್ಪಿ ಸಲು, ಅಂಗದ ರಾಮನ ರಾಯಭಾರಿಯಾಗಿ ರಾವಣನ ಆಸ್ಥಾನಕ್ಕೆ ತೆರಳುತ್ತಾನೆ. ಅಲ್ಲಿ ಸಂಧಾನಕ್ರಿಯೆ ವಿಫಲವಾಗುತ್ತದೆ. ಆಗ ಅಂಗದ ತನ್ನ ಕಾಲನ್ನು ನೆಲದಿಂದ ಯಾರಾದರೂ ಎತ್ತಿದರೆ, ರಾಮ ತನ್ನ ಸೋಲನ್ನು ಒಪ್ಪಿಕೊಳ್ಳುತ್ತಾನೆ ಎಂದು ಹೇಳುತ್ತಾನೆ. ಯಾರಿಗೂ ಪಾದ ಅಲ್ಲಾಡಿಸಲು ಆಗುವುದಿಲ್ಲ! ಅದನ್ನು ನೋಡಿಯೇ ತಾನೂ ಕಾಲು ಅಲ್ಲಾಡಿಸಲಿಲ್ಲ, ಕಾಲು ಅಲ್ಲಾಡಿಸುವುದು ಕಷ್ಟ ಮಾತ್ರವಲ್ಲ, ಅಸಾಧ್ಯ ಎಂದು ಸೆಹ್ವಾಗ್ ತಮಾಷೆ ಮಾಡಿದ್ದಾರೆ!