ಕೋಲಾರ: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಏ.23ರಿಂದ ಮೇ 14ರವರೆಗೆ ರಸಋಷಿ ಕುವೆಂಪು ವಿರಚಿತ ಶ್ರೀರಾಮಾಯಣ ದರ್ಶನಂ ದಾರ್ಶನಿಕ ಸಂದೇಶದ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿ ಯಲ್ಲಿ ಮಾಹಿತಿ ನೀಡಿದ ಅವರು, ಬೆಂಗಳೂರು ಉತ್ತರ ವಿವಿ ಸಹಯೋಗದಲ್ಲಿ ನಡೆಯುತ್ತಿರುವ ಈ ಅಭಿಯಾನ ರಾಜ್ಯದಲ್ಲೇ ವಿಭಿನ್ನವಾಗಿದೆ. ಜಿಲ್ಲೆಯ ಎಲ್ಲಾ ತಾಲೂಕು ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ವಿಚಾರ ಸಂಕಿರಣ, ವಿಶೇಷ ಉಪನ್ಯಾಸ, ಕುವೆಂಪು ಅವರ ಸಮಗ್ರ ಸಾಹಿತ್ಯದ ಬಗೆಗಿನ ಅರಿವು ಮತ್ತು ಜ್ಞಾನ ಹೆಚ್ಚಿಸಲು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಏರ್ಪಡಿಸಿ ವಿಜೇತರಿಗೆ ಕುವೆಂಪು ಅವರ ಸಮಗ್ರ ಸಾಹಿತ್ಯದ ಪುಸ್ತಕ ಬಹುಮಾನ ನೀಡಲಾಗುವುದು ಎಂದು ಹೇಳಿದರು.
ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಹಾಗೂ ಜಿಲ್ಲೆಯಲ್ಲಿ ಸಾಹಿತ್ಯ ಚಟುವಟಿಕೆಗಳನ್ನು ಹೆಚ್ಚು ನಡೆಸುವ ಉದ್ದೇಶ ಅಭಿಯಾನದ್ದಾಗಿದೆ ಎಂದು ತಿಳಿಸಿದರು.
23ರಂದು ಮಾಲೂರು ರಸ್ತೆಯ ಮಂಗಸಂದ್ರದಲ್ಲಿನ ಸ್ನಾತಕೋತ್ತರ ಕೇಂದ್ರದಲ್ಲಿ ಬೆಳಗ್ಗೆ 10 ಗಂಟೆಗೆ ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು ಕಾರ್ಯಕ್ರಮ ಉದ್ಘಾಟಿಸುವರು. ಮಧ್ಯಾಹ್ನ 12 ಗಂಟೆಗೆ ಸಾಹಿತಿ ಡಾ.ಚಂದ್ರಶೇಖರ ನಂಗಲಿ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಲಿದೆ. ರಾಮಾಯಣ ದರ್ಶನಂ ಕಾವ್ಯದಲ್ಲಿ ಸ್ತ್ರೀ ಸಂವೇದನೆ ಕುರಿತು ಚೆನ್ನೈನ ಮದ್ರಾಸ್ ವಿವಿಯ ಕನ್ನಡ ಪ್ರಾಧ್ಯಾಪಕ ಡಾ.ತಮಿಳ್ ಸೆಲ್ವಿ ಹಾಗೂ ಮೈಸೂರಿನ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ಸಂಶೋಧಕ ಡಾ.ಆರ್.ಚಲಪತಿ ರಾಮಾಯಣ ದರ್ಶನಂ ವಿಮರ್ಶೆಗಳ ಕುರಿತು ವಿಷಯ ಮಂಡಿಸುವರು. ಮಧ್ಯಾಹ್ನ 2 ಗಂಟೆಗೆ ಕುವೆಂಪು ಹಾಗೂ ಸಮಗ್ರ ಸಾಹಿತ್ಯ ಕುರಿತು ರಸಪ್ರಶ್ನೆ ಕಾರ್ಯಕ್ರಮವಿದೆ ಎಂದರು.
ನೃತ್ಯ ರೂಪಕ: ಜಯನಾಟ್ಯ ಕಲಾ ಅಕಾಡೆಮಿಯ ಕಲಾವಿದರು ಕುವೆಂಪು ವಿರಚಿತ ರಾಮಾಯಣ ದರ್ಶನಂನ ಪಂಚವಟಿಯ ಭಾಗದಿಂದ ಹಿಡಿದು ರಾವಣ ಸಂಹಾರದವರೆಗಿನ ಘಟನೆಗಳನ್ನು ನೃತ್ಯರೂಪಕವಾಗಿ ಅಭಿನಯಿಸಲಿದ್ದು, ಕಲಾವಿದರು ಒಂದು ತಿಂಗಳಿನಿಂದ ಅಭ್ಯಾಸ ನಿರತರಾಗಿದ್ದಾರೆ. ಎಲ್ಲ ತಾಲೂಕುಗಳಲ್ಲಿ ನಡೆಯುವ ಕಾರ್ಯಕ್ರಮದ ಕಡೇ ಭಾಗವಾಗಿ ನೃತ್ಯರೂಪಕವಿರುತ್ತದೆ ಎಂದು ವಿವರಿಸಿದರು.
ಶಿಕ್ಷಕರು ಭಾಗವಹಿಸಿ: 26ರಂದು ಬಂಗಾರ ಪೇಟೆಯ ಕೆ.ಸಿ.ರೆಡ್ಡಿ ಸರ್ಕಾರಿ ಪದವಿ ಕಾಲೇಜು, ಮೇ 3ರಂದು ಕೆಜಿಎಫ್‌ನ ಜೈನ್ ಪದವಿ ಕಾಲೇಜು, 6ರಂದು ಮಾಲೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮೇ 10ರಂದು ಮುಳಬಾಗಿಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಸಮಾರೋಪ: ಜಿಲ್ಲೆಯ ಗಡಿ ಭಾಗ ಶ್ರೀನಿವಾಸ ಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಳಗ್ಗೆ 9.30ರಿಂದ ವಿಚಾರಗೋಷ್ಠಿ ಹಾಗೂ ಮಧ್ಯಾಹ್ನ 11.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ, ಹಿರಿಯ ಸಾಹಿತಿ ಡಾ. ಹಂಪ ನಾಗರಾಜಯ್ಯ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಡೋಮಿನಿಕ್ ಮಾತನಾಡಿದರು.