ಮೂಡುಬಿದಿರೆ: ಕನ್ನಡದ ನವೋದಯದ ಮುಂಗೋಳಿಯೆಂದು ಕೀರ್ತಿತನಾದ ಮುದ್ದಣನು “ಶ್ರೀರಾಮ ಪಟ್ಟಾಭಿಷೇಕ’,”ಅದ್ಭುತ ರಾಮಾಯಣ’ ಮತ್ತು “ಶ್ರೀ ರಾಮಾಶ್ವಮೇಧಂ’ಎಂಬ ಮೂರು ಕೃತಿಗಳ ಮೂಲಕ ರಾಮಾಯಣ ಕವಿಯಾಗಿಯೂ ಗಮನಾರ್ಹ.
ಶ್ರೀರಾಮಾಶ್ವಮೇಧಂ ಕೃತಿಯು ಹಳಗನ್ನಡ ಗದ್ಯದಲ್ಲಿ ನಿರೂಪಿತವಾದ ಅತ್ಯಂತ ಜನಪ್ರಿಯ ಕೃತಿಯಾಗಿದೆ ಎಂದು ವಿದ್ವಾಂಸ ಡಾ| ಪಾದೇಕಲ್ಲು ವಿಷ್ಣು ಭಟ್ಟ ಅಭಿಪ್ರಾಯಪ ಟ್ಟರು.
ಕಾಂತಾವರ ಕನ್ನಡ ಸಂಘದ ತಿಂಗಳ ನುಡಿನಮನ ಕಾರ್ಯಕ್ರಮದಲ್ಲಿ ರವಿವಾರ ಪಾದೆಕಲ್ಲು ಅವರ ಅನುಪಸ್ಥಿತಿಯಲ್ಲಿ “ಮುದ್ದಣನ ರಾಮಾಶ್ವಮೇಧಂ’ ಕುರಿತ ಅವರ ಪ್ರಬಂಧವನ್ನು ನಿಟ್ಟೆ ಸತೀಶ್‌ಕುಮಾರ್ ಕೆಮ್ಮಣರ ಮಂಡಿಸಿದರು.
ಹಳಗನ್ನಡವನ್ನು ಕಲಿಯಲು ಉತ್ತಮ ಹಳಗನ್ನಡದ ಒಳಗೆ ಹೊಸಗನ್ನಡವನ್ನು ಹುದುಗಿಸಿ ಹೊಸ ಶೈಲಿಯನ್ನು ನಿರ್ಮಾಣ ಮಾಡಿ ರಚಿಸಿದ ಹಿರಿಮೆ ಮುದ್ದಣನಿಗೆ ಸಲ್ಲುತ್ತದೆ. ಆದ್ದ ರಿಂದಲೇ ಮುದ್ದಣನ ಗದ್ಯ ಹಳಗನ್ನಡದಲ್ಲಿದ್ದರೂ ನಮಗೆ ದೂರದಲ್ಲಿರುವಂತೆ ಭಾಸವಾಗದೆ, ಸಮಕಾಲದ ಭಾಷೆ ಯಂತೆಯೇ ಬೋಧವಾಗುತ್ತದೆ. ಈ ಕಾರಣದಿಂದಲೇ ಹಳಗನ್ನಡವನ್ನು ಕಲಿಯಲು ಮುದ್ದಣನ ಕೃತಿ ಉತ್ತಮವಾದ ಅಭ್ಯಾಸ ಕ್ಷೇತ್ರವಾಗಲು ಎಲ್ಲ ಅರ್ಹತೆ ಹೊಂದಿದೆ.
ರಾಮಾಶ್ವಮೇಧದ ಬಗೆಗಿನ ಆಸಕ್ತಿ ಕವಿ- ಕವಿ ಪತ್ನಿ ನಡುವಿನ ಸಂಭಾಷಣೆಯ ಸ್ವಾರಸ್ಯವನ್ನು ಸವಿಯುವ ಹಂಬಲ ಈಗಿನ ಕಾಲದ ಓದುಗರಿಗೂ ಕಡಿಮೆಯಾಗಿಲ್ಲ. ಹಾಗಾಗಿ ಕನ್ನಡದ ಉಳಿದ ರಾಮಾಯಣ ಕೃತಿಗಳಿಗಿಂತ ಹೆಚ್ಚಿನ ಮಾನ್ಯತೆ ಮತ್ತು ಜನಪ್ರೀತಿ ರಾಮಾಶ್ವಮೇಧಂ ಕೃತಿಗಿದೆ ಎಂದರು.
ಡಾ| ಎಸ್.ಆರ್.ಅರುಣ ಕುಮಾರ್ ಅವರು ಸಂಪಾದಿಸಿದ ಕಾಂತಾವರ ಕನ್ನಡ ಸಂಘದ ಉಪನ್ಯಾಸಗಳ ಸಂಪುಟ “ನುಡಿ ಹಾರ – 9′ ಅನ್ನು ಸಾಹಿತಿ, ವಿಮರ್ಶಕ ಡಾ|ಬಿ. ಜನಾರ್ದನ ಭಟ್ ಅವರು ಸಂಪಾದಕರ ಪ್ರಸ್ತಾವನೆಯೊಂದಿಗೆ ಲೋಕಾ ರ್ಪಣೆಗೊಳಿಸಿದರು.
ಬಾಬು ಶೆಟ್ಟಿ ನಾರಾವಿ, ಸತೀಶ್ ಕುಮಾರ್ ಕೆಮ್ಮಣ್ಣು ಮತ್ತು ಸುಮನ ಜಗದೀಶ್ ಅವರಿಂದ ಕಾವ್ಯವಾಚನ ನೆರವೇರಿತು. ಡಾ| ನಾ.ಮೊಗಸಾಲೆ ಸ್ವಾಗತಿಸಿ,ಸದಾನಂದ ನಾರಾವಿ ಕಾರ್ಯ ಕ್ರಮ ನಿರೂಪಿಸಿ, ವಂದಿಸಿದರು.