Advertisement
ಕಿಷ್ಕಿಂಧೆಯ ನಂತರ ರಾಮನ ಹಾದಿಯ ಪುರಾಣ ಸಾಕ್ಷ್ಯಗಳು ಸಿಗುವುದು, ತಮಿಳುನಾಡಿನ ಧನುಷ್ಕೋಡಿ, ರಾಮೇಶ್ವರಂನಲ್ಲಿ. 13ನೇ ಶತಮಾನದಲ್ಲಿ ಚೋಳರ ರಾಜಸತ್ತೆ ಕೊನೆಯಾಗುವವರೆಗೂ ತಮಿಳುನಾಡು ಪಾಂಡ್ಯರು ಮತ್ತು ಚೋಳರ ರಾಜ್ಯವೆಂದು ಗುರುತಿಸಿಕೊಂಡಿತ್ತು. ರಾಮಾಯಣದಲ್ಲೂ ತಮಿಳುನಾಡನ್ನು ಪಾಂಡ್ಯರ ಮತ್ತು ಚೋಳರ ನೆಲವೆಂದು ಕರೆದಿರುವುದು ಗಮನಿಸಬೇಕಾದ ಅಂಶ. ತಮಿಳುನಾಡಿನ ದಕ್ಷಿಣ (ದಕ್ಷಿಣ ಪೂರ್ವ) ಕರಾವಳಿಯ ಒಂದು ದ್ವೀಪವೇ ಇವತ್ತಿನ ರಾಮೇಶ್ವರಂ.
Related Articles
Advertisement
ರಾಮೇಶ್ವರದಲ್ಲಿನ ಶಿವನನ್ನು ಪ್ರತಿಷ್ಠಾಪಿಸಿದ್ದೇ ರಾಮ ಎನ್ನುವ ಉಪಾಖ್ಯಾನಗಳಿಗೆ ವಾಲ್ಮೀಕಿ ರಾಮಾಯಣದಲ್ಲಿ ಪುರಾವೆಗಳಿಲ್ಲ. ಹಾಗಿದ್ದೂ ಸ್ಕಂದ, ಪದ್ಮ, ಲಿಂಗ ಪುರಾಣಗಳು ಮತ್ತು ತುಲಸೀರಾಮಾಯಣದಂಥ ರಾಮಾಯಣದ ಬೇರೆ ಆವೃತ್ತಿಗಳಲ್ಲಿ ರಾಮನೇ ಇಲ್ಲಿನ ಶಿವಲಿಂಗವನ್ನು ಪ್ರತಿಷ್ಠಾಪಿಸಿದನು ಎನ್ನುವ ವಿವರಗಳು ಬರುತ್ತವೆ. ರಾಮಾಯಣದ ಶ್ರೀರಾಮಚಂದ್ರನು ಇಲ್ಲಿ ಮರಳಿನ ಲಿಂಗವನ್ನು ಮಾಡಿ ಅರ್ಚನೆ ಮಾಡಿದನಂತೆ. ಆ ವಿಚಾರ ಏನೇ ಇದ್ದರೂ ರಾಮ ಮತ್ತು ಶಿವನೆಂಬ ಎರಡು ಸ್ರೋತಗಳು ಇಲ್ಲಿ ಒಟ್ಟಾಗಿರುವುದಂತೂ ನಿಜ.
ಹಡಗುಗಳಿಗೆ ದಾರಿಬಿಡುವ ಸೇತುವೆ: ಭಾರತದ ಮುಖ್ಯಭೂಮಿಯೊಡನೆ ರಾಮೇಶ್ವರಂ ದ್ವೀಪವನ್ನು ಬೆಸೆದು ನಿಂತಿರುವುದು ಒಂದು ಸೇತುವೆ. 1913ರಲ್ಲಿ ಭಾರತ ಮತ್ತು ರಾಮೇಶ್ವರಂ ನಡುವಿನ ಸಮುದ್ರದ ಮೇಲೆ ನಿರ್ಮಿತವಾದ 2 ಕಿ.ಮೀ. ಉದ್ದನೆಯ ಪಾಂಬನ್ ಸೇತುವೆ ರಾಮೇಶ್ವರಂ ಮತ್ತು ಭಾರತವನ್ನು ಬೆಸೆಯುವ ಕೊಂಡಿ. ತೀರಾ ಇತ್ತೀಚೆಗೆ ಬಾಂದ್ರಾ- ವರ್ಲಿ ಸಂಪರ್ಕ ಸೇತುವೆಯ ಉದ್ಘಾಟನೆಯಾಗುವವರೆಗೂ ಭಾರತದಲ್ಲಿ ಸಮುದ್ರವನ್ನು ಹಾಯ್ದು ಕಟ್ಟಿದ ಸೇತುವೆ ಇದೊಂದೇ ಆಗಿತ್ತು.
ಸಮುದ್ರಮಾರ್ಗವಾಗಿ ಸಾಗಿ ಹೋಗುವ ಹಡಗುಗಳಿಗೆ ಈ ಸೇತುವೆಯ ಚಾವಣಿಯ ಒಂದು ಭಾಗ ಮೇಲಕ್ಕೆದ್ದು ದಾರಿ ಬಿಟ್ಟುಕೊಡುವಂತೆ ರಚಿತವಾಗಿದೆ. ಇದು ಆಧುನಿಕ ನಿರ್ಮಿತಿಶಾಸ್ತ್ರದ ವಿಸ್ಮಯಗಳಲ್ಲೊಂದು. 12ನೇ ಶತಮಾನದಲ್ಲಿ ನಿರ್ಮಿತವಾದ ಇಲ್ಲಿನ ಶಿಲಾಮಯ ದೇವಾಲಯದ ಪ್ರಾಂಗಣವು ದೇಶದಲ್ಲೇ ಅತ್ಯಂತ ಉದ್ದವಾದ ದೇವಾಲಯ ಪ್ರಾಂಗಣವೂ ಹೌದು.
ರಾಮೇಶ್ವರಂನ ಮರಳು ಕಾಶಿಗೆ…: ಭಾರತದ ಮಹೋನ್ನತ ಸೌಂದರ್ಯವೇ ಸಾಂಸ್ಕೃತಿಕ ಏಕತೆ. ದಕ್ಷಿಣದವರು ತಮ್ಮ ಜೀವಿತದಲ್ಲಿ ಉತ್ತರಕ್ಕೆ ಒಮ್ಮೆಯಾದರೂ ಹೋಗಬೇಕೆನ್ನುವ ಸಂಕಲ್ಪ ಹೊತ್ತಿದ್ದರೆ, ಉತ್ತರದವರು ಭಾರತದ ದಕ್ಷಿಣದ ರಾಮೇಶ್ವರಂಗೆ ಬರುವ ಸಂಕಲ್ಪವನ್ನು ಹೊತ್ತಿರುತ್ತಾರೆ. ಈ ದೇಶದಲ್ಲಿ ಜ್ಯೋತಿರ್ಲಿಂಗಗಳು ಮತ್ತು ಶಕ್ತಿಪೀಠಗಳು ಒಂದೊಂದು ದಿಕ್ಕಿಗೆ ಚೆದುರಿಬಿದ್ದಿವೆ, ಮತ್ತು ಶ್ರದ್ಧೆಯುಳ್ಳವರು ಅವೆಲ್ಲವನ್ನೂ ಒಮ್ಮೆಯಾದರೂ ಸಂದರ್ಶಿಸುವ ಸಂಕಲ್ಪ ಹೊತ್ತಿರುತ್ತಾರೆ. ರಾಮೇಶ್ವರಂ ಸಮುದ್ರ ತೀರದ ಮಳಲನ್ನು ಕಾಶಿ ವಿಶ್ವನಾಥನ ಸನ್ನಿಧಿಯ ಗಂಗೆಗೂ, ಗಂಗೆಯ ನೀರನ್ನು ರಾಮೇಶ್ವರನ ಸನ್ನಿಧಿಗೂ ಕೊಂಡೊಯ್ದು ಹಾಕುವ ಸಂಪ್ರದಾಯವೂ ಇದೆ.
* ನವೀನ ಗಂಗೋತ್ರಿ