ಹುಬ್ಬಳ್ಳಿ: ಶ್ರೀರಾಮ ನವಮಿ ನಿಮಿತ್ತ ಬಾನಿ ಓಣಿಯಲ್ಲಿ ಶ್ರೀರಾಮ ನವಮಿ ಉತ್ಸವ ಸಮಿತಿ ವತಿಯಿಂದ ಶೋಭಾಯಾತ್ರೆ ನಡೆಯಿತು. ಶೋಭಾಯಾತ್ರೆಗೆ ಚಾಲನೆ ನೀಡಿದ ಮೂರುಸಾವಿರ ಮಠದ ಶ್ರೀ ಗುರುಸಿದ್ದ ರಾಜಯೋಗಿಂದ್ರ ಸ್ವಾಮೀಜಿ ಮಾತನಾಡಿ, ಶ್ರೀರಾಮನ ಆದರ್ಶಗಳು ಕಲಿಯುಗದಲ್ಲಿ ಪ್ರಸ್ತುತವಾಗಿವೆ.
ಶ್ರೀರಾಮ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಮಹಾತ್ಮಾ ಗಾಂಧಿಧಿಯವರ ರಾಮರಾಜ್ಯ ಕನಸನ್ನು ಜನಪ್ರತಿನಿಧಿಗಳು ನನಸು ಮಾಡಬೇಕು. ಆಗ ಮಾತ್ರ ಜೀವನ ಸಾರ್ಥಕವಾಗುವುದು ಎಂದರು. ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ, ವಸಂತ ಹೊರಟ್ಟಿ,
ಸುಬ್ರಮಣ್ಯ ಶಿರಕೋಳ, ಕೃಷ್ಣ ಗಂಡಗಾಳೇಕರ, ಉಪಮಹಾಪೌರ ಲಕ್ಷ್ಮಿಬಾಯಿ ಬಿಜವಾಡ, ಸ್ಮಿತಾ ಜಾಧವ, ಮಹೇಶ ಟೆಂಗಿನಕಾಯಿ, ಜಯತೀರ್ಥ ಕಟ್ಟಿ, ಶರಣು ಅಂಗಡಿ, ರಂಗಾ ಕಠಾರೆ, ಗಜು ಜಡಿ ಸೇರಿದಂತೆ ನೂರಾರು ರಾಮಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
16 ಅಡಿ ಎತ್ತರದ ಶ್ರೀರಾಮನ ಮೂರ್ತಿಯೊಂದಿಗೆ ನಡೆದ ಮೆರವಣಿಗೆಯಲ್ಲಿ ಕೇಸರಿ ಧ್ವಜ, ಟೋಪಿ ಧರಿಸಿದ ಯುವಕರು ಭಾಗವಹಿಸಿದ್ದರು. ಮೆರವಣಿಗೆಯುದ್ದಕ್ಕೂ ಡಿಜೆ ಸಂಗೀತಕ್ಕೆ ತಕ್ಕಂತೆ ಯುವಕರು ಹೆಜ್ಜೆ ಹಾಕುತ್ತಿದ್ದುದು ಕಂಡು ಬಂತು. ಮೆರವಣಿಗೆಯಲ್ಲಿ ಪಾಲ್ಗೊಂಡವರಿಗಾಗಿ ಕುಡಿಯಲು ನೀರು, ಶರಬತ್ ನೀಡಲಾಯಿತು.
ಬಾನಿ ಓಣಿಯಿಂದ ಮಧ್ಯಾಹ್ನ 12ಕ್ಕೆ ಆರಂಭಗೊಂಡ ಶೋಭಾಯಾತ್ರೆ ರೈಲ್ವೆ ಸ್ಟೇಶನ್ ರಸ್ತೆ, ಗಣೇಶ ಪೇಟೆ ವೃತ್ತ, ಮರಾಠ ಗಲ್ಲಿ, ತುಳಜಾಭವಾನಿ ದೇವಸ್ಥಾನ, ದಾಜಿಬಾನ ಪೇಟೆ, ಚನ್ನಮ್ಮ ವೃತ್ತ, ಕೊಪ್ಪಿಕರ ರಸ್ತೆಯ ಮೂಲಕ ಬಾನಿ ಓಣಿಯಲ್ಲಿ ಮಧ್ಯಾಹ್ನ 3ಕ್ಕೆ ಮುಕ್ತಾಯಗೊಂಡಿತು. ಮಹಾನಗರ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ, ಡಿಸಿಪಿಗಳಾದ ಜಿನೇಂದ್ರ ಖನಗಾವಿ, ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.