Advertisement
ಇಲಿಗಳ ಮೇಲೆ ಪ್ರಯೋಗ ಯಶಸ್ವಿ: ರಾಮಪತ್ರೆ ಗಿಡದಿಂದ ತಯಾರಿಸಿದ ಔಷಧವನ್ನು ವಿಜ್ಞಾನಿಗಳು ಇಲಿಯ ಮೇಲೆ ಪ್ರಯೋಗಿಸಿದ್ದು, ಶ್ವಾಸಕೋಶದ ಕ್ಯಾನ್ಸರ್ ಮತ್ತು ಮಕ್ಕಳಲ್ಲಿ ಕಂಡುಬರುವ ಅಪರೂಪದ ನ್ಯೂರೋಬ್ಲಾಸ್ಟೋಮಾ ಕ್ಯಾನ್ಸರ್ ಅನ್ನು ಗುಣಪಡಿಸುವಲ್ಲಿ ಇದು ಮುಖ್ಯ ಪಾತ್ರ ವಹಿಸುತ್ತದೆ ಎಂಬುದನ್ನು ಕಂಡುಕೊಂಡಿದ್ದಾರೆ. ನ್ಯೂರೋಬ್ಲಾಸ್ಟೋಮಾ ಎಂದರೆ ಅಡ್ರೀನಲ್ ಗ್ರಂಥಿ, ಕುತ್ತಿಗೆ, ಎದೆ ಮತ್ತು ಬೆನ್ನುಹುರಿಯ ನರಗಳ ಕೋಶಗಳಲ್ಲಿ ಕ್ಯಾನ್ಸರ್ ಕೋಶಗಳು ಬೆಳೆಯುವುದು.
ಆಹಾರದಲ್ಲಿ ಸಾಂಬಾರ ಪದಾರ್ಥವಾಗಿ ಬಳಸಲ್ಪಡುವ ಈ ರಾಮಪತ್ರೆ ಗಿಡವು ಮಿರಿಸ್ಟಿಕೇಷಿಯಾ ಕುಟುಂಬಕ್ಕೆ ಸೇರಿರುವಂಥ ಸಸ್ಯ. ಇದು ದೇಶದ ಪಶ್ಚಿಮ ಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಬಾರ್ಕ್‌ನ ವಿಕಿರಣ ಜೀವಶಾಸ್ತ್ರ ಮತ್ತು ಆರೋಗ್ಯ ವಿಜ್ಞಾನ ವಿಭಾಗದ ವಿಜ್ಞಾನಿ ಡಾ| ಬಿ. ಶಂಕರ್ ಪತ್ರಾವೋ ಅವರೇ ಈ ಔಷಧವನ್ನು ಅಭಿವೃದ್ಧಿಪಡಿಸಿದ್ದಾರೆ. ‘ರಾಮಪತ್ರೆ ಹಣ್ಣಿನಲ್ಲಿರುವ ಕಣಗಳು ಕ್ಯಾನ್ಸರ್ ಕೋಶಗಳನ್ನು ನಾಶಮಾಡುತ್ತವೆ. ಈ ಕಣಗಳಿಂದ ತಯಾರಿಸಲಾದ ಔಷಧವು ವಿಕಿರಣ ಚಿಕಿತ್ಸೆಯಿಂದ ಹಾನಿಗೊಳಗಾದ ಕೋಶಗಳನ್ನೂ ಪುನಶ್ಚೇತನಗೊಳಿಸುತ್ತದೆ’ ಎಂದಿದ್ದಾರೆ ಪತ್ರಾವೋ. ಇದೇ ವೇಳೆ, ವಿಕಿರಣ ಚಿಕಿತ್ಸೆ ವೇಳೆ ಆರೋಗ್ಯವಂತ ಕೋಶಗಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ರೇಡಿಯೋ ಮಾಡಿಫೈರ್ ಮತ್ತು ಬಾರ್ಕ್ ರೇಡಿಯೋ ಪ್ರೊಟೆಕ್ಟರ್ ಅನ್ನೂ ಅಭಿವೃದ್ಧಿಪಡಿಸಿದ್ದು, ಪೇಟೆಂಟ್‌ಗೆ ಅರ್ಜಿ ಸಲ್ಲಿಸಿದ್ದೇವೆ ಎಂದೂ ವಿಜ್ಞಾನಿಗಳು ಹೇಳಿದ್ದಾರೆ.