ಚಾಮರಾಜನಗರ: ಶ್ರೀರಾಮನು ಲಕ್ಷ್ಮಣ ನೊಡಗೂಡಿ ವನವಾಸಕ್ಕೆ ತೆರಳಿದಾಗ ಈ ಜಾಗದಲ್ಲಿ ಒಂದಷ್ಟು ದಿನ ತಂಗಿದ್ದ ಎಂಬ ಅನೇಕ ಸ್ಥಳ ಪುರಾಣಗಳಿವೆ.
ಅಂಥದ್ದೇ ಒಂದು ಸ್ಥಳ ಚಾಮರಾಜನಗರ ಜಿಲ್ಲೆಯ ಗಡಿಗೆ ಹೊಂದಿಕೊಂಡಂತಿರುವ ತಮಿಳುನಾಡಿನ ತಾಳವಾಡಿ ಸಮೀಪ ಇರುವ ರಾಮರಪಾದ ಎಂಬ ಸ್ಥಳ. ತಾಳವಾಡಿಯಿಂದ ತಲಮಲೈಗೆ ಹೋಗುವ ಅರಣ್ಯ ಪ್ರದೇಶದಲ್ಲಿದೆ ರಾಮರ ಪಾದ ಎಂಬ ಈ ದೇವಸ್ಥಾನ. ಮುಖ್ಯ ರಸ್ತೆಯಿಂದ ಒಂದಷ್ಟು ದೂರ ಕಾಡಿನ ಮಣ್ಣಿನ ರಸ್ತೆಯಲ್ಲಿ ಸಾಗಿದರೆ ರಾಮರಪಾದ ಸಿಗುತ್ತದೆ.
ಅರಣ್ಯ ಪ್ರದೇಶ ಪ್ರಶಾಂತ ತಾಣದಲ್ಲಿರುವ ಈ ಸ್ಥಳ ಪುರಾಣ ಮಹತ್ವ ಹೊಂದಿರುವುದಷ್ಟೇ ಅಲ್ಲ, ಪ್ರಕೃತಿ ಪ್ರಿಯರಿಗೂ ಇಷ್ಟವಾಗುವ ಜಾಗವಾಗಿದೆ. ಶ್ರೀರಾಮ ಲಕ್ಷ್ಮಣ ವನವಾಸಕ್ಕೆ ಬಂದು ಲಂಕೆಗೆ ಹೋಗುವ ಸಂದರ್ಭದಲ್ಲಿ ಇಲ್ಲಿ ಪರ್ಣಕುಟಿ ರಚಿಸಿ ಕೆಲ ಸಮಯ ತಂಗಿದ್ದರೆಂಬ ಐತಿಹ್ಯವಿದೆ. ಒಂದು ಬಂಡೆಯ ಮೇಲೆ ಶ್ರೀರಾಮರ ಪಾದ, ಶಂಖ ಚಕ್ರ ಇದೆ. ಶ್ರೀ ರಾಮ ಸೀತೆ, ಲಕ್ಷ್ಮಣ ವಿಗ್ರಹಗಳಿವೆ. ಇದಕ್ಕೆ ಗುಡಿ ನಿರ್ಮಿಸಲಾಗಿದೆ. ದೇವಾಲಯದ ಎದುರಿಗೆ ಒಂದು ಬಂಡೆಯಿದೆ. ಆ ಬಂಡೆಯಲ್ಲಿ ದುಂಡಾದ ಹೊಂಡವಿದ್ದು, ಇದು ಶ್ರೀರಾಮ ಮಂಡಿ ಊರಿದ ಜಾಗ ಎಂದು ಹೇಳಲಾಗುತ್ತದೆ.
ರಾಮನು ಇಲ್ಲಿ ಮಂಡಿಯೂರಿ ಬಿಲ್ಲಿನಿಂದ ಬಾಣ ಬಿಟ್ಟ. ದೂರದಲ್ಲಿ ಕಾಣುವ ತಲಮಲೈ ಬೆಟ್ಟ ಈ ಬಾಣದಿಂದಾಗಿ ಕತ್ತರಿಸಿ ಹೋಯಿತು ಎಂಬ ಐತಿಹ್ಯ ಹೇಳಲಾಗುತ್ತದೆ. ಈ ಜಾಗದಿಂದ ಕಣ್ಣಾಯಿಸಿ ನೋಡಿದರೆ ಬೆಟ್ಟ ಅಚಾನಕ್ ಕತ್ತರಿಸಿದಂತೆ ಅಂತ್ಯಗೊಳ್ಳುತ್ತದೆ. ಈ ಜಾಗವನ್ನು ಇರುಂಬರೆ ಎಂದು ಕರೆಯಲಾಗುತ್ತದೆ. ದೇವಾಲಯದ ಮುಂದೆ ರಾಮಮಂಡಿಯೂರಿದ ಭಂಗಿಯ ರಾಮ ವಿಗ್ರಹವೂ ಇದೆ. ರಾಮರ ಪಾದದಲ್ಲಿ ಪ್ರತಿ ಶನಿವಾರ ವಿಶೇಷ ಪೂಜೆ ನಡೆಯುತ್ತದೆ. ಶ್ರಾವಣ ಮಾಸದ ಶನಿವಾರ ಅಭಿಷೇಕ ಪೂಜೆ, ವಿಶೇಷ ಪೂಜೆಗಳು, ಅನ್ನದಾನ ನಡೆಯುತ್ತದೆ. ಮೂರನೇ ವಾರ ಸಮೀಪದ ದೊಡ್ಡಪುರ ಗ್ರಾಮಸ್ಥರೆಲ್ಲ ಸೇರಿ ಪೂಜೆ ಸಲ್ಲಿಸುತ್ತಾರೆ.
ತಮಿಳುನಾಡು ಹಾಗೂ ಮೈಸೂರು ಭಾಗದಲ್ಲಿ ರಾಮರ ಪಾದಕ್ಕೆ ಬರುವ ಭಕ್ತಾದಿಗಳಿದ್ದಾರೆ. ವರನಟ ಡಾ.ರಾಜ್‌ಕುಮಾರ್ ಅವರ ಹುಟ್ಟೂರು ಗಾಜನೂರಿಗೆ ಈ ಸ್ಥಳ ಹತ್ತಿರದಲ್ಲಿದೆ. ಬಾಲ್ಯದಿಂದಲೂ ರಾಜ್‌ಕುಮಾರ್ ಇಲ್ಲಿಗೆ ಹೋಗುತ್ತಿದ್ದರು. ಅವರು ಗಾಜನೂರಿಗೆ ಬಂದಾಗ ರಾಮರಪಾದಕ್ಕೆ ಹೋಗಿ ಪೂಜೆ ಸಲ್ಲಿಸುತ್ತಿದ್ದರು.
ರಾಮರ ಪಾದದಲ್ಲಿ ಶ್ರದ್ಧಾ ಭಕ್ತಿಯಿಂದ ಪೂಜಿಸಿದರೆ, ಭಕ್ತರ ಅಭೀಷ್ಠೆಗಳು ನೆರವೇರುತ್ತವೆ. ಅಯೋಧ್ಯೆ ರಾಮಮಂದಿರದ ರಾಮಲಲ್ಲಾ ವಿಗ್ರಹ ಪ್ರಾಣಪ್ರತಿಷ್ಠಾಪನೆಯ ಅಂಗವಾಗಿ ವಿಶೇಷ ಪೂಜೆ ನೆರವೇರಿಸಲಾಗುವುದು.
-ರಂಗನಾಥ್, ಅರ್ಚಕರು ದೊಡ್ಡಪುರ
– ಕೆ.ಎಸ್. ಬನಶಂಕರ ಆರಾಧ್ಯ