ಒಂದೂರಲ್ಲಿ ಮಂಜಪ್ಪ ಮತ್ತು ಕಾವೇರಮ್ಮ ಎಂಬ ದಂಪತಿಯಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳು. ರಾಮಣ್ಣ ಮತ್ತು ಸೋಮಣ್ಣ. ಮಂಜಪ್ಪ ತನ್ನ ತಂದೆಯಿಂದ ಸಿಕ್ಕ ಅಲ್ಪ ಸ್ವಲ್ಪ ಜಮೀನಿನಲ್ಲಿಯೇ ದುಡಿಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಮಕ್ಕಳು ಚೆನ್ನಾಗಿ ಓದಿ ಒಳ್ಳೆಯ ನೌಕರಿ ಡಿಯಬೇಕೆಂಬುದು ಮಂಜಪ್ಪನ ಆಸೆ. ಕಿರಿಯ ಮಗ ಸೋಮ ಕಷ್ಟಪಟ್ಟು ಓದಿ ಅಪ್ಪನ ಆಸೆಯಂತೆ ದೂರದ ಬೆಂಗಳೂರಿನಲ್ಲಿ ನೌಕರಿ ಹಿಡಿದ. ಆದರೆ, ಹಿರಿಯವನಾದ ರಾಮಣ್ಣನಿಗೆ ಯಾಕೋ ಸರಸ್ವತಿ ಒಲಿಯಲಿಲ್ಲ. ಹತ್ತನೇ ತರಗತಿಗೇ ಅವನ ವಿದ್ಯಾಭ್ಯಾಸ ಮೊಟಕುಗೊಂಡಿತು. ಈ ಕಾರಣಕ್ಕಾಗಿಯೇ ಮಂಜಪ್ಪನಿಗೆ ರಾಮಣ್ಣನ ಮೇಲೆ ಕೋಪ ಬರುತ್ತಿತ್ತು. ರಾಮಣ್ಣನ ಚಿನ್ನದಂಥ ಸ್ವಭಾವವನ್ನು ಊರಿಡೀ ಕೊಂಡಾಡುತ್ತಿದ್ದರೂ ಮಂಜಪ್ಪನಿಗೆ ಮಾತ್ರ ಓದು ಬರಹ ಕಲಿಯಲಿಲ್ಲವಲ್ಲ ಅಂತ ಕೋಪ.
ರಾಮಣ್ಣನಿಗೆ ಜೀವನೋಪಾಯಕ್ಕೆಂದು ಮಂಜಪ್ಪ ಒಂದು ಅಂಗಡಿಯನ್ನು ಹಾಕಿಕೊಟ್ಟ. ಅಂಗಡಿಯೆಂದರೆ, ಬಹು ದೊಡ್ಡ ಅಂಗಡಿಯೇನಲ್ಲ! ಹಾಲು, ತರಕಾರಿ ಹಾಗೂ ಮುಖ್ಯ ದಿನಸಿ ವಸ್ತುಗಳು ಅಲ್ಲಿ ಲಭ್ಯವಿದ್ದವಷ್ಟೆ. ರಾಮಣ್ಣ ಬಹಳ ಶ್ರದ್ಧೆಯಿಂದ ವ್ಯಾಪಾರ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಸರಕಾರ ಪ್ಲಾಸ್ಟಿಕ್ ಕೈಚೀಲಗಳನ್ನು ನಿಷೇಧಿಸಿತು. ಮೊದಲೇ ಪರಿಸರ ಪ್ರೇಮಿಯಾಗಿದ್ದ ರಾಮಣ್ಣನಿಗೆ ಇದರಿಂದ ಖುಷಿಯೇ ಆಯಿತು. ಆದರೆ ಸರಕಾರದ ನಿಯಮದಿಂದ ಜನರೇನು ಬದಲಾಗುವಂತೆ ಕಾಣಲಿಲ್ಲ. ಅಂಗಡಿಗೆ ಬರುತ್ತಿದ್ದ ಜನರು ತಮ್ಮೊಡನೆ ಕೈಚೀಲ ತರದೆ, ಕೈ ಬೀಸಿಕೊಂಡು ಬಂದು ರಾಮಣ್ಣನನ್ನೇ ಪ್ಲಾಸ್ಟಿಕ್ ಚೀಲ ಕೇಳತೊಡಗಿದರು.
ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕೆಂದು ಯೋಚಿಸಿದ ರಾಮಣ್ಣ ಒಂದು ಉಪಾಯ ಮಾಡಿದ. ಸಗಟು ವ್ಯಾಪಾರಿಯ ಬಳಿ ತೆರಳಿ ತಾನು ಎಂದಿಗಿಂತ ಹೆಚ್ಚಿನ ವಸ್ತುಗಳನ್ನು ಖರೀದಿಸುವುದಾಗಿ ಹೇಳಿ ಬಿಲ್‌ನಲ್ಲಿ ರಿಯಾಯಿತಿ ಕೊಡಬೇಕಾಗಿ ವಿನಂತಿಸಿದ. ಮಾತುಕತೆಯ ನಂತರ ವ್ಯಾಪಾರಿ ಒಪ್ಪಿದ. ನಂತರ ಮನೆಯಿಂದಲೇ ಕೈಟೀಲ ತಂದವರಿಗೆ 5ರೂ. ರಿಯಾಯಿತಿ ಎಂದು ಬೋರ್ಡು ಹಾಕಿದ. 20 ರೂ.ಗಿಂತ ಕಡಿಮೆ ವ್ಯಾಪಾರ ಮಾಡಿದವರಿಗೆ ಇದು ಅನ್ವಯಿಸುವುದಿಲ್ಲವೆಂದೂ ಫಲಕದಲ್ಲಿ ಸೂಚಿಸಿದ. ಶುರುವಿನಲ್ಲಿ ಈ ಉಪಾಯ ಫಲನೀಡದಿದ್ದರೂ ನಿಧಾನವಾಗಿ ಜನರು 5ರೂ. ಆಸೆಗೆ ತಮ್ಮಡನೆ ಕೈಜೀಲ ತರತೊಡಗಿದರು. ಕೆಲ ದಿನಗಳ ನಂತರ ಇದು ಗ್ರಾಮದ ಎಲ್ಲರಿಗೂ ಅಭ್ಯಾಸವಾಗಿಬಿಟ್ಟಿತು. ಇತರ ಅಂಗಡಿಯವರೂ ರಾಮಣ್ಣನ ಉಪಾಯವನ್ನು ಪಾಲಿಸಿದರು.
-ಡಾ. ವಿನಯ ಶ್ರೀನಿವಾಸ್, ಶಿವಮೊಗ್ಗ