Advertisement

ವಿಶ್ವದ ವಿಭಿನ್ನ ಕಲೆಯನ್ನು ವೇಷದಲ್ಲಿ ಪರಿಚಯಿಸುವ ರಾಮಾಂಜಿ

05:29 PM Nov 28, 2019 | mahesh |

ನಾಗಾಸಾಧು, ಮಾಯಾನ್‌, ತೆಯ್ಯಂ, ಅಪಕಲಿಪ್ಟೊ, ಮಾರಿಕಾಡು, ಡ್ರಗ್ಸ್‌ ಕಾರ್ಕೋಟಕ, ಹಾವುಗಳ್ರಾಣಿಎಡೊಸ ಮುಂತಾದ ವೇಷಗಳನ್ನು ಧರಿಸಿದ್ದಾರೆ.

Advertisement

ಇತ್ತೀಚೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ “ಸಮರ್ಪಣಾ’ ಎಂಬ ವಿಶಿಷ್ಟ ಕಾರ್ಯಕ್ರಮನಡೆಯಿತು. ಸಂಸ್ಕೃತಿ ಮತ್ತು ಕಲೆಯನ್ನು ಪ್ರೀತಿಸುವ ರಾಮಾಂಜಿ ಎಂಬ ಯುವಕನ ಸಾಮಾಜಿಕ ಸೇವೆಗೆ ಈ ಕಾರ್ಯಕ್ರಮ ಸಾಕ್ಷಿಯಾಗಿತ್ತು. ಜಿಲ್ಲಾಧಿಕಾರಿಗಳು, ವಿಶ್ವದ್ಯಾನಿಲಯ ಕುಲಪತಿಗಳ ಜತೆಗೆ ಹಲವು ಗಣ್ಯರು ರಾಮಾಂಜಿಯ ಕಾರ್ಯವನ್ನು ಶ್ಲಾಘಿಸಿದ್ದಾರೆ. ರಾಮಾಂಜಿಯು ಪ್ರತಿವರ್ಷ ಶ್ರೀಕೃಷ್ಣ ಜನ್ಮಾಷ್ಟಮಿಗೆ ವಿಭಿನ್ನ ವೇಷ ತೊಡುವ ಮೂಲಕ ವಿಶ್ವದ ವಿವಿಧ ಕಲಾ ಪ್ರಕಾರಗಳನ್ನು ಪರಿಚಯಿಸಿ ಕೊಡುತ್ತಿದ್ದಾರೆ. ಈ ಮೂಲಕ ಕಲೆ ಮತ್ತು ಸಂಸ್ಕೃತಿಯ ಸೇವೆ ಮಾಡುವ ಇವರು ಸಂಗ್ರಹವಾಗುವ ಮೊತ್ತವನ್ನು ಸಮಾಜದ ಅಶಕ್ತರಿಗೆ ನೀಡಿ ಸಾಮಾಜಿಕ ಕಾಳಜಿಯನ್ನು ತೋರಿಸುತ್ತಿದ್ದಾರೆ.

ಏಳು ವರ್ಷಗಳಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ನಾಗಾಸಾಧು, ಮಾಯಾನ್‌ (ಬುಡಕಟ್ಟು ಜನಾಂಗ), ಕೇರಳದ ತೆಯ್ಯಂ, ಅಪಕಲಿಪ್ಟೊ (ದಕ್ಷಿಣ ಆಫ್ರಿಕಾದ ಬುಡಕಟ್ಟು ಜನಾಂಗ), ಕಂಬಾರರ ಮಾರಿಕಾಡು, ಡ್ರಗ್ಸ್‌ ಕಾರ್ಕೋಟಕ, ಹಾವುಗಳ ರಾಣಿ “ಮೆಡೂಸ’ ಮುಂತಾದ ವೇಷಗಳನ್ನು ಧರಿಸಿ ಮನೋರಂಜನೆ ನೀಡಿದ್ದಾರೆ. ಅಲ್ಲದೆ ಆ ವೇಷಗಳ ಹಿಂದಿನ ಸಂಸ್ಕೃತಿ ಮತ್ತು ಕಲೆಯನ್ನು ತಿಳಿದುಕೊಳ್ಳುವಂಥ ಕುತೂಹಲವನ್ನು ಜನರಲ್ಲಿ ಮೂಡಿಸಿದ್ದಾರೆ. ಇವರ ವೇಷಗಾರಿಕೆಯ ಹಿಂದೆ ಕಲಾವಿದ ಪ್ರಶಾಂತ್‌ ಉದ್ಯಾವರ ಸಹಿತ ದೊಡ್ಡ ಬಳಗವೇ ದುಡಿಯುತ್ತಿದೆ.

ಪ್ರತಿವರ್ಷ ವೇಷ ಧರಿಸುವ ಮೊದಲು ತುಂಬಾ ಹೋಂವರ್ಕ್‌ ಮಾಡುತ್ತಾರೆ. ವೇಷದ ವಿಷಯವನ್ನು ಆರಿಸಿಕೊಳ್ಳಲು ಹಾಗೂ ಅದಕ್ಕೆ ಬೇಕಾದ ಪೂರಕ ಸಿದ್ಧತೆಗಾಗಿ ಸಾಕಷ್ಟು ಸಮಯವನ್ನು ಕಳೆಯುವ ಇವರು ಈ ವರೆಗೆ ಸುಮಾರು 10 ಲಕ್ಷದಷ್ಟು ಹಣವನ್ನು ಸಂಗ್ರಹಿಸಿ ಅಶಕ್ತರಿಗೆ ಹಾಗೂ ರೋಗಿಗಳಿಗೆ ನೀಡಿದ್ದು, ಏಕಕಾಲಕ್ಕೆ ಹಲವು ಉದ್ದೇಶಗಳನ್ನು ಈಡೇರಿಸಿಕೊಳ್ಳುವ ಅಪರೂಪದ ವ್ಯಕ್ತಿ.

ಹಾಗೆ ನೋಡಿದರೆ ಈ ರಾಮಾಂಜಿಯೇ ಒಂದು ಒಗಟು. ಇವರ್ಯಾರು ಎಂಬುದಕ್ಕೆ ಸ್ಪಷ್ಟ ಉತ್ತರವಿಲ್ಲ. 15-20 ವರ್ಷಗಳ ಹಿಂದೆ ಅನಾಥ ಬಾಲಕನಾಗಿ ಉಡುಪಿಗೆ ಬಂದಿದ್ದವರು. “ಮಕ್ಕಳ ಮಿತ್ರ’ ಹಾಗೂ ‘ಭೀಮಾ ಸಂಘ’ದ ಸಹಕಾರದಿಂದ ಬೆಳೆದು ಮುಂದೆ ಕುಂದಾಪುರದ “ನಮ್ಮ ಭೂಮಿ’ ಸಂಸ್ಥೆಯಲ್ಲಿ ಆಶ್ರಯ ಪಡೆದವರೇ ರಾಮಂಜನೇಯ ಅಥವಾ ರಾಮಾಂಜಿ. ಶಿರ್ವ ಹಾಗೂ ಉಡುಪಿಯ ಎಂ.ಜಿ.ಎಂ. ಕಾಲೇಜುಗಳಲ್ಲಿ ಶಿಕ್ಷಣ ಪಡೆದವರು. ನಾಟಕ, ಯಕ್ಷಗಾನ, ಸಂಗೀತ, ಸಾಹಿತ್ಯ, ಲಲಿತಕಲೆ ಮೊದಲಾದವುಗಳ ಹವ್ಯಾಸ ಬೆಳೆಸಿಕೊಂಡವರು. ಪ್ರತಿಭಾನ್ವಿತ ಕಲಾವಿದ. ಸಮಾಜದ ಒಳಿತಿಗಾಗಿ ಏನಾದರೂ ಮಾಡಬೇಕು ಎಂಬ ತುಡಿತ ಹೊಂದಿರುವವರು.

Advertisement

– ಅನಂತ ಮೂಡಿತ್ತಾಯ

Advertisement

Udayavani is now on Telegram. Click here to join our channel and stay updated with the latest news.

Next