Advertisement

10ರಂದು ರಾಮನವಮಿ ಶೋಭಾಯಾತ್ರೆ: ಜೊಲ್ಲೆ

12:53 PM Apr 07, 2022 | Team Udayavani |

ಚಿಕ್ಕೋಡಿ: ನಿಪ್ಪಾಣಿ ನಗರದಲ್ಲಿ ಏ.10ರಂದು ರಾಮನವಮಿ ಅಂಗವಾಗಿ ಶ್ರೀರಾಮ ಸೇನಾ ಹಿಂದೂಸ್ಥಾನದಿಂದ ಭವ್ಯ ಶೋಭಾಯಾತ್ರೆಯನ್ನು ಆಯೋಜಿಸಿದ್ದು ಇದನ್ನು ಯಶಸ್ವಿಯಾಗಿಸಲು ಎಲ್ಲರೂ ಶ್ರಮಿಸಬೇಕು ಎಂದು ಮುಜರಾಯಿ, ವಕ್ಫ್‌ ಹಾಗೂ ಹಜ್‌ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

Advertisement

ರಾಮನವಮಿ ಅಂಗವಾಗಿ ನಿಪ್ಪಾಣಿ ನಗರದಲ್ಲಿ ಜರುಗಲಿರುವ ಶೋಭಾಯತ್ರೆ ಅಂಗವಾಗಿ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅನೇಕತೆಯಲ್ಲಿ ಏಕತೆ ತೋರಿಸುವ ನಮ್ಮ ದೇಶದ ಸಂಸ್ಕೃತಿಯನ್ನು ಇಡೀ ಜಗತ್ತು ಎತ್ತಿ ಹಿಡಿದಿದೆ. ಸ್ವಾಮಿ ವಿವೇಕಾನಂದರು, ಛತ್ರಪತಿ ಶಿವಾಜಿ ಮಹಾರಾಜರು ಸೇರಿದಂತೆ ಹಲವಾರು ಯುಗ ಪುರುಷರು ನಮ್ಮ ಪಾವನ ಭೂಮಿಯಲ್ಲಿ ಜನಿಸಿದ ಪರಿಣಾಮ ಈ ಕಲಿಯುಗದಲ್ಲೂ ನಮ್ಮ ದೇಶದಲ್ಲಿ ಶಾಂತಿಯ ವಾತಾವರಣವಿದೆ ಎಂದರು.

ಈ ಶೋಭಾಯಾತ್ರೆಯಲ್ಲಿ ಎಲ್ಲರೂ ಕೇಸರಿ ಪೇಟ ಧರಿಸಿ. ಯುವತಿಯರು, ಮಹಿಳೆಯರು ಕೇಸರಿ ಸೀರೆ ತೊಟ್ಟುಕೊಳ್ಳಿ. ಈ ಬಾರಿ ಕೇಸರಿ ಪೇಟ ಮತ್ತು ಸೀರೆ ಕಲ್ಪಿಸಲು ಪ್ರಯತ್ನಿಸುವೆ. ಮುಂದಿನ ಬಾರಿ ಈ ಯಾತ್ರೆಯಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಕೇಸರಿ ಪೇಟ ಮತ್ತು ಮಹಿಳೆಯರಿಗೆ ಕೇಸರಿ ಸೀರೆ ಕಲ್ಪಿಸಲಾಗುವುದು ಎಂದರು.

ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಚೇರ್ಮನ್‌, ಸಹಕಾರ ರತ್ನ ಚಂದ್ರಕಾಂತ ಕೋಠಿವಾಲೆ ಮಾತನಾಡಿ, ಈ ಅದ್ದೂರಿ ಶೋಭಾಯಾತ್ರೆಗೆ ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿಕೊಂಡರು.

Advertisement

ಬಸವಜ್ಯೋತಿ ಯೂಥ್‌ ಫೌಂಡೇಶನ್‌ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಮಾತನಾಡಿ, ಈ ಶೋಭಾಯಾತ್ರೆಯಲ್ಲಿ ಸ್ಥಳೀಯರಿಂದ ಹಲವಾರು ರೂಪಕಗಳನ್ನು ಸಾದರಪಡಿಸಲಾಗುವುದು. ಅಲ್ಲದೆ ವಿವಿಧ ರಾಜ್ಯಗಳಿಂದ ರಾಮಲೀಲೆ, ನವಿಲು ಕುಣಿತ ಮೊದಲಾದ ರೂಪಕಗಳು ಆನೆ, ಕುದುರೆಗಳು, ಈ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲಿವೆ ಎಂದರು.

ಶ್ರೀರಾಮ ಸೇನೆ ಹಿಂದೂಸ್ಥಾನ್‌ ಜಿಲ್ಲಾ ಅಧ್ಯಕ್ಷ,ಕ ನ್ಯಾಯವಾದಿ ನಿಲೇಶ ಹತ್ತಿ ಮಾತನಾಡಿದರು. ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಅಭಯ ಮಾನವಿ, ರಾಜು ಗುಂದೇಶಾ, ಸಂತೋಷ ಸಾಂಗಾವಕರ, ಮಹಾದೇವ ರಾವುತ, ಪ್ರವೀನ ಶಹಾ, ಮೊದಲಾದವರು ಸಲಹೆ ಸೂಚನೆ ನೀಡಿದರು. ನಗರಸಭೆ ಉಪಾಧ್ಯಕ್ಷೆ ನೀತಾ ಬಾಗಡೆ ಮತ್ತು ಸದಸ್ಯರು, ಜೋತಿಪ್ರಸಾದ ಜೊಲ್ಲೆ, ಸಮಾಧಿ ಮಠದ ಚೇರ್ಮನ್‌ ಸುರೇಶ ಶೆಟ್ಟಿ, ಪ್ರನೀನ ಶಹಾ, ಪ್ರತಾಪ ಪಟ್ಟಣಶೆಟ್ಟಿ, ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು. ಬಿಜೆಪಿ ನಗರ ಘಟಕದ ಅಧ್ಯಕ್ಷ ಪ್ರಣವ ಮಾನವಿ ಸ್ವಾಗತಿಸಿದರು. ಎಪಿಎಂಸಿ ಸದಸ್ಯ ಬಂಡಾ ಘೊರ್ಪಡೆ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next