ಕಾಸರಗೋಡು: ಸರ್ವರನ್ನೂ ಒಗ್ಗೂಡಿಸುವ ಭಜನೆಯಿಂದ ಮನಸ್ಸಿನ ಚಂಚಲ ನಿವಾರಣೆಯಾಗುತ್ತಿದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆನುವಂಶಿಕ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಅವರು ಹೇಳಿದರು. ಕೋಟೆಕಣಿಯ ಶ್ರೀ ರಾಮನಾಥ ದೇವಸ್ಥಾನದಲ್ಲಿ ರಾಮನವಮಿಯ ಅಂಗವಾಗಿ ಆಯೋಜಿಸಿದ ಶ್ರೀ ರಾಮ ತಾರಕ ಯಜ್ಞದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನವಿತ್ತು ಮಾತನಾಡಿದರು.
ಸಂಸ್ಕೃತಿಯ ಮೂಲ ವೇದ. ಹಿರಿಯರು ಮಹತ್ ಗ್ರಂಥಗಳನ್ನು ನೀಡಿದ್ದಾರೆ. ಭಗವಂತನ ಚಿಂತನೆಗೆ ದಾರಿ ಮಾಡಿಕೊಟ್ಟಿದ್ದಾರೆ. ಕಳಂಕರಹಿತ ಮೂರ್ತಿಯಂತೆ ಶ್ರೀರಾಮಚಂದ್ರ ಎಲ್ಲರಿಗೂ ಆಚಾರ್ಯ ಮತ್ತು ಆದರ್ಶ ಪುರುಷ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಬೇಕೆಂಬ ಸಂಕಲ್ಪ ಮತ್ತು ಸರ್ವರ ಸುಖೀ ಜೀವನ ಉದ್ದೇಶವಾಗಿಟ್ಟುಕೊಂಡು ಆಯೋಜಿಸಿದ ಶ್ರೀರಾಮ ತಾರಕ ಯಜ್ಞದಿಂದ ನಮ್ಮೆಲ್ಲರ ಇಷ್ಟಾರ್ಥ ಈಡೇರುವಂತಾಗಲಿ ಎಂದರು.
ಧಾರ್ಮಿಕ ಭಾಷಣ ಮಾಡಿದ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅವರು ವಿಶ್ವಕ್ಕೆ ಗುರು ಸ್ಥಾನದಲ್ಲಿ ನಿಲ್ಲುವ ದೇಶ ಭಾರತ. ಪಾಶ್ಚಾತ್ಯರು ಲೌಕಿಕವಾದವನ್ನು ಅಪ್ಪಿಕೊಂಡಿದ್ದಾರೆ. ಅಲೌಕಿಕ ವಾದವನ್ನು ಅಪ್ಪಿಕೊಂಡಿರುವ ದೇಶವೊಂದಿದ್ದರೆ ಅದು ಭಾರತ ಮಾತ್ರ. ಈ ಕಾರಣದಿಂದಲೇ ಭಾರತೀಯರಿಗೆ ಯಾರೂ ಮಾಡದಂತಹ ಸಾಧನೆಗಳನ್ನು ಮಾಡಲು ಸಾಧ್ಯವಾಗಿದೆ ಎಂದರು. ಯಜ್ಞ, ಹೋಮಾದಿಗಳಿಂದ ಓಝೋನ್ ಪದರ ಗಟ್ಟಿಯಾಗಿ ಮಾನವನನ್ನು ರಕ್ಷಿಸುತ್ತದೆ. ಭಾರತೀಯರು ನಂಬಿಕೊಂಡು ಬಂದ ಪಂಚಗವ್ಯವನ್ನು ಮೀರಿಸುವ ಔಷಧಿಯನ್ನು ಯಾವುದೇ ವಿಜ್ಞಾನಿಗೂ ಕಂಡುಕೊಳ್ಳಲು ಸಾಧ್ಯವಾಗಿಲ್ಲ ಎಂದ ಅವರ ಧರ್ಮ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಹಾಗೂ ಕರ್ತವ್ಯವಾಗಿದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ ಸಾಹಿತಿ, ಕಲಾವಿದ ಡಾ| ರಮಾನಂದ ಬನಾರಿ ಅವರು ಮಾತನಾಡಿ ಪ್ರೀತಿ ಎಂಬುದು ದೇವರಿಗೆ ಪರ್ಯಾಯ ಶಬ್ದವೇ ಆಗಿದ್ದು, ರಾಮಾಯಣ ಎಲ್ಲಾ ವಿಚಾರದಲ್ಲೂ ಆರಾಧಿಸಲ್ಪಡಬೇಕಾದ ಗ್ರಂಥ. ಯಜ್ಞ ಅಂದರೆ ತ್ಯಾಗ. ತ್ಯಾಗದಿಂದ ಸಾಧನೆ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಎ. ಸದಾನಂದ ರೈ ಮುಖ್ಯ ಅತಿಥಿಯಾಗಿ ಭಾಗ ವಹಿಸಿದರು. ಅಭ್ಯಾಗತರಾಗಿ ಪಾರ್ತಿಸುಬ್ಬ ಯಕ್ಷಗಾನ ಕಲಾ ಕ್ಷೇತ್ರದ ಕಾರ್ಯದರ್ಶಿ ಸತೀಶ ಅಡಪ ಸಂಕಬೈಲು, ಉದ್ಯಮಿಗಳಾದ ಕೆ.ಪಿ. ಮುರಳಿಕೃಷ್ಣ, ಶ್ರೀನಿವಾಸ ಭಟ್ ಭಾಗವಹಿಸಿ ಶುಭಹಾರೈಸಿದರು. ಯಜ್ಞ ಸಮಿತಿ ಉಪಾಧ್ಯಕ್ಷ ಶಿವರಾಮ ಕಾಸರಗೋಡು ಸ್ವಾಗತಿಸಿದರು. ಯಜ್ಞ ಸಮಿತಿ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಪ್ರಾಸ್ತಾವಿಕ ನುಡಿದರು. ಲತಾ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಯಜ್ಞ ಸಮಿತಿ ಕೋಶಾಧಿಕಾರಿ ಸಂದೇಶ್ ಕೋಟೆಕಣಿ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ನಾಟಕ ಸಭಾ ಕೂಡ್ಲು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ‘ಸಂಪೂರ್ಣ ರಾಮಾ ಯಣ’ ಯಕ್ಷಗಾನ ಬಯಲಾಟ ಜರಗಿತು. ರವಿವಾರ ಬೆಳಗ್ಗೆ ಮಹಾಗಣಪತಿ ಹೋಮ, ಶ್ರೀ ರಾಮತಾರಕ ಯಜ್ಞ, ಶ್ರೀ ರಾಮನಾಥ ದೇವರ ಪೂಜೆ, ಅಂತಾರಾಷ್ಟ್ರೀಯ ಖ್ಯಾತಿಯ ಮಚ್ಛೇಂದ್ರನಾಥ್ ಅವರ ಶಿಷ್ಯೆ ವಿದ್ಯಾಶ್ರೀ ಮಂಗಳೂರು ಅವರಿಂದ ಸ್ಯಾಕ್ಸೋಫೋನ್ ವಾದನ ನಡೆಯಿತು. ಹರಿದಾಸ ಜಯಾನಂದ ಕುಮಾರ್ ಹೊಸ ದುರ್ಗ ಅವರಿಂದ ಶ್ರೀ ರಾಮತಾರಕ ಯಜ್ಞ ಹರಿಕೀರ್ತನೆ. ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ, ಧಾರ್ಮಿಕ ಸಭೆ ನಡೆಯಿತು.