ಮುಂಬಯಿ: ಸ್ವಯಂ ರಮತೆ, ರಮಯತೆ ಅಂದರೆ ತಾನೂ ಚೆನ್ನಾಗಿದ್ದು, ಇನ್ನೊಬ್ಬರು ಚೆನ್ನಾಗಿರುವಂತೆ ಮಾಡುವುದು. ಅಂಥವರನ್ನು ರಾಮ ಎಂದು ಕರೆಯುತ್ತಾರೆ. ಸ್ವಯಂ ಮಾತ್ರ ನೆಮ್ಮದಿಯಿಂದ ಇದ್ದರೆ ಅವನಿಗೆ ಭಯ ತಪ್ಪಿದ್ದಲ್ಲ. ತಾನೂ ನೆಮ್ಮದಿಯಿಂದ ಇದ್ದು ಇನ್ನೊಬ್ಬರ ನೆಮ್ಮದಿಗೆ ಕಾರಣವಾದಾಗ ಭಯ ರಹಿತವಾದ ರಾಮನಾಗಿ ಮೆರೆಯಲು ಸಾಧ್ಯ. ಲೋಕದಲ್ಲಿ ಭಯ ರಹಿತವಾಗಿ ಚೆನ್ನಾಗಿದ್ದು ಇನ್ನೊಬ್ಬರನ್ನು ನೆಮ್ಮದಿಯಾಗಿರಿಸುವ ಅರ್ಥವೇ ರಾಮ ಎಂದು ಉಡುಪಿ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ತಿಳಿಸಿದರು.
ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶ್ರೀ ಅದಮಾರು ಮಠದ ಮುಂಬಯಿ ಶಾಖೆ ಅಂಧೇರಿ ಪಶ್ಚಿಮದ ಇರ್ಲಾದಲ್ಲಿ ಎ. 10ರಂದು ನಡೆದ 25ನೇ ವಾರ್ಷಿಕ ಶ್ರೀರಾಮ ನವಮಿಯ ಸಂದರ್ಭ ಮಠದಲ್ಲಿ ಪ್ರತಿಷ್ಠಾಪಿತ ಶ್ರೀದೇವರಿಗೆ ಪೂಜೆ ಸಲ್ಲಿಸಿ ಆಶೀರ್ವಚನ ನೀಡಿದ ಶ್ರೀಗಳು, ಮಾಡು ಅನ್ನುವುದಕ್ಕಿಂತ ಮಾಡೋಣ ಎಂಬುವುದನ್ನು ರೂಢಿಸಿಕೊಂಡಾಗ ಮಕ್ಕಳು ಸಂಸ್ಕಾರಯುತರಾಗುತ್ತಾರೆ ಎಂದು ತಿಳಿಸಿ, ತಾವು ಪಠಿಸಿದ ಮಂತ್ರದ ಅರ್ಥಗಳನ್ನು ತಿಳಿಸಿ ಭಕ್ತರಲ್ಲಿ ಶ್ರೀರಾಮನ ಶ್ರದ್ಧೆ ಮೂಡಿಸಿ ಶುಭ ಹಾರೈಸಿದರು.
ಬಿ. ಆರ್. ರೆಸ್ಟೋರೆಂಟ್ಸ್ ಪ್ರೈ. ಲಿ. ಸಂಸ್ಥೆಯ ಆಡಳಿತ ನಿರ್ದೇಶಕ ಬಿ. ಆರ್. ಶೆಟ್ಟಿ ಅವರು ಶ್ರೀಪಾದರನ್ನು ಗೌರವಿಸಿದರು. ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಪಂಚಾಮೃತ ಅಭಿಷೇಕ, ಹರಿಕೃಷ್ಣ ಭಜನ ಮಂಡಳಿ, ಆಶ್ರಯ ನೆರೂಲ್ ಹಾಗೂ ವಾಗೆªàವಿ ಭಜನ ಮಂಡಳಿಗಳಿಂದ ಭಜನ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನೆರವೇರಿತು. ಅಪರಾಹ್ನ ದಿನೇಶ್ ಕೋಟ್ಯಾನ್ ಬಳಗದಿಂದ ಸ್ಯಾಕೊÕàಪೋನ್ ವಾದನ, ಶ್ರೀನಿಧಿ ಭಟ್ ಮತ್ತು ಶ್ರೀವತ್ಸ ಭಟ್ ಬಳಗದಿಂದ ಹಿಂದೂಸ್ಥಾನಿ ಸಂಗೀತ, ಕೀರ್ತಿ ಚಡಗ, ಸುಕನ್ಯಾ ಭಟ್ ಬಳಗದಿಂದ ಭರತನಾಟ್ಯಂ, ಗೀತಾ ಭಟ್ ಮತ್ತು ಬಳಗದಿಂದ ತಾಳಮದ್ದಳೆ ಪ್ರಸ್ತುತಗೊಂಡಿತು. ಸಂಜೆ ಭವ್ಯ ಮೆರವಣಿಗೆಯಲ್ಲಿ ಪಲ್ಲಕಿ ಉತ್ಸವ, ಗಜ ರಥೋತ್ಸವಬಳಿಕ ಶ್ರೀಪಾದರು ಶ್ರೀರಾಮ ನವಮಿಯ ವಿಶೇಷ ಪ್ರವಚನಗೈದು ಮಂಗಲ ಮಂತ್ರಾಕ್ಷತೆ ನೀಡಿ ಭಕ್ತರನ್ನು ಹರಸಿದರು.
ಶ್ರೀರಾಮ ನವಮಿಯ ಮಹಾಸೇವೆಗೈದ ಬಿ. ಆರ್. ಶೆಟ್ಟಿ, ಬಿಎಸ್‌ಕೆಬಿ ಅಸೋಸಿಯೇಶನ್‌ನ ಅಧ್ಯಕ್ಷ ಡಾ| ಸುರೇಶ್ ಎಸ್. ರಾವ್ ಕಟೀಲು, ದಿನೇಶ್ ಕೋಟ್ಯಾನ್, ಅಶೋಕ ದೇವಾಡಿಗ, ನರೇಶ್ ಬೋಲೆ ಮತ್ತಿತರ ಗಣ್ಯರನ್ನು ಶ್ರೀಪಾದರು ಶಾಲು ಹೊದೆಸಿ, ಸ್ಮರಣಿಕೆ, ಪುಷ್ಪಗುತ್ಛವನ್ನಿತ್ತು ಗೌರವಿಸಿ ಹರಸಿದರು.
ದಿನಪೂರ್ತಿ ನಡೆದ ಉತ್ಸವದಲ್ಲಿ ಸುಬ್ರಹ್ಮಣ್ಯ ಮಠ ಛೆಡ್ಡಾನಗರ ಚೆಂಬೂರು ಇದರ ವ್ಯವಸ್ಥಾಪಕ ವಿದ್ವಾನ್ ವಿಷ್ಣು ಕಾರಂತ್, ಪುರೋಹಿತರಾದ ಪರೇಲ್‌ನ ಶ್ರೀನಿವಾಸ ಭಟ್, ಪಿ. ಕೆ. ತಂತ್ರಿ, ಅಂಬೋಲಿ ಶ್ರೀಪಾದ್ ಭಟ್, ಶಂಕರ್ ಕಲ್ಯಾಣಿತ್ತಾಯ, ಆರ್. ಎಲ್. ಭಟ್, ಮಾಳ ಶ್ರೀನಿವಾಸ ಭಟ್, ಸುರೇಶ್ ಭಟ್, ಗುರು ಭಟ್ ಘನ್ಸೋಲಿ, ಗಿರಿಧರ್ ರಾವ್ ಶಿರಸಿ, ದಿನೇಶ ಚಡಗ, ಮುಂದಾಳುಗಳಾದ ಸರ್ವಜ್ಞ ಉಡುಪ, ಚಂಚಲಾ ಬಿ. ಆರ್. ಶೆಟ್ಟಿ, ಸುಧೀರ್ ಆರ್.ಎಲ್. ಶೆಟ್ಟಿ, ವಾಣಿ ರಾಜೇಶ್ ರಾವ್, ಶ್ರೀಷಾ ಆರ್. ರಾವ್, ಶ್ರೀಧರ್ ರಾವ್ ಜೋಕಟ್ಟೆ ಐಐಟಿಸಿ, ಚಂದ್ರಾವತಿ ಕೆ. ರಾವ್, ತಾರಾ ಬಿ. ರಾವ್ ಹಾಗೂ ಅಪಾರ ಸಂಖ್ಯೆಯ ಭಕ್ತರು, ನೂರಾರು ಗಣ್ಯರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಅದಮಾರು ಮಠದ ಮುಂಬಯಿ ಶಾಖಾ ವ್ಯವಸ್ಥಾಪಕ ಪಡುಬಿದ್ರಿ ವಿ. ರಾಜೇಶ್ ರಾವ್ ಕೃತಜ್ಞತೆ ಸಲ್ಲಿಸಿದರು.
-ಚಿತ್ರ- ವರದಿ: ರೋನ್ಸ್ ಬಂಟ್ವಾಳ್