Advertisement

ಆರೋಗ್ಯ ಸುಧಾರಣೆಗಾಗಿ ಯೋಗಾಭ್ಯಾಸ

07:32 PM Jun 22, 2019 | Naveen |

ರಾಮನಗರ: ದಿನನಿತ್ಯ ಯೋಗಾಭ್ಯಾಸ ಮಾಡುವುದರಿಂದ ದೇಹಾರೋಗ್ಯ ಮತ್ತು ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬಹುದು ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಮುಲ್ಲೈ ಮುಹಿಲನ್‌ ಹೇಳಿದರು.

Advertisement

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಆಯುಷ್‌ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಡೆದ 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದ ಅವರು, ಯೋಗ ಯಾಕೆ ಮಾಡಬೇಕು ಎಂಬ ಪ್ರಶ್ನೆಗೆ ಉತ್ತರ ಹುಡುಕುವುದನ್ನು ಬಿಡಿ, ಯೋಗಕ್ಕಾಗಿ ಯೋಗ ಮಾಡಿ, ದಿನ ನಿತ್ಯ ಕನಿಷ್ಠ 15 ರಿಂದ 30 ನಿಮಿಷಗಳ ಮಟ್ಟಿಗಾದರು ಕೆಲವೊಂದು ಯೋಗಾಸನಗಳ ಅಭ್ಯಾಸ ಮಾಡಿ ಎಂದು ಸಲಹೆ ನೀಡಿದರು.

ಯೋಗದಿಂದ ಆರೋಗ್ಯ ವೃದ್ಧಿ: ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕು ಪಂಚಾಯ್ತಿ ಅಧ್ಯಕ್ಷ ಗಾಣಕಲ್ ನಟರಾಜು ಮಾತನಾಡಿ, ಆರೋಗ್ಯ ವೃದ್ಧಿಗಾಗಿ ನಿರಂತರ ಯೋಗಾಭ್ಯಾಸ ಮಾಡಬೇಕು. ಸಸಿ ನೆಟ್ಟು ಪರಿಸರವನ್ನು ಕಾಪಾಡಿ ಎಂದು ಯೋಗಪಟುಗಳಿಗೆ ಸಲಹೆ ನೀಡಿದರು.

ಸಾಮೂಹಿಕ ಯೋಗ ಪ್ರದರ್ಶನ: ನಗರದ ಜಿಲ್ಲಾಕ್ರೀಡಾಂಗಣದಲ್ಲಿ 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಸಾಮೂಹಿಕ ಯೋಗ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಶಾಲಾ -ಕಾಲೇಜು ವಿದ್ಯಾರ್ಥಿಗಳು, ಪತಂಜಲಿ ಯೋಗ ಶಿಕ್ಷಣ ಕೇಂದ್ರ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸದಸ್ಯರು, ಆರ್ಟ್‌ ಆಫ್ ಲಿವಿಂಗ್‌ನ ಕಾರ್ಯಕರ್ತರು, ಸಾರ್ವಜನಿಕರು, ಯೋಗಾಸಕ್ತರು, ಅಧಿಕಾರಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಬೆಳಗ್ಗೆ 7 ಗಂಟೆಗೆ ಸಾಮೂಹಿಕ ಯೋಗಾಭ್ಯಾಸ ಕಾರ್ಯಕ್ರಮ ಆರಂಭವಾಯಿತು. ಯೋಗ ಗುರುಗಳಾದ ಶಿವಪ್ರಕಾಶ್‌ ಮತ್ತು ಸತೀಶ್‌ ಸಾಮೂಹಿಕ ಯೋಗಾಭ್ಯಾಸದ ನೇತೃತ್ವವಹಿಸಿದ್ದರು.

ತಾಪಂ ಅಧ್ಯಕ್ಷ ಗಾಣಕಲ್ ನಟರಾಜು, ಮಾಜಿ ಶಾಸಕ ಕೆ.ರಾಜು, ಉಪವಿಭಾಗಾಧಿಕಾರಿ ಕೃಷ್ಣಮೂರ್ತಿ, ತಹಶೀಲ್ದಾರ್‌ ರಾಜು, ಡಿಎಚ್ಒ ಡಾ.ಅಮರ್‌ನಾಥ್‌ ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು. ಕೇಂದ್ರ ಸರ್ಕಾರ ನಡೆಸಿದ್ದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ಯಶಸ್ವಿಯಾದ ಜಿಲ್ಲೆಯ ಭಾವನ ಪ್ರಸಾದ್‌, ಪೂಜಾ ಹನುಮಕ್ಕ ಅವರನ್ನು ಈ ವೇಳೆ ಪ್ರಶಂಸಿಲಾಯಿತು. ವಿಕಲ ಚೇತನ ಯುವಕ ದೀಪು ಮತ್ತು 82ರ ಹರಯದ ನಿವೃತ್ತ ಯೋಧ ಶಾಂ ಸಿಂಗ್‌ ನಿರಂತರ ಯೋಗಾಭ್ಯಾಸ ಮಾಡುತ್ತಿರುವುದಲ್ಲದೆ ಸಾಮೂಹಿಕ ಯೋಗಾಭ್ಯಾಸದಲ್ಲಿ ಭಾಗವಹಿಸಿದ್ದು ಗಣ್ಯರ ಪ್ರಶಂಸೆಗೆ ಪಾತ್ರರಾದರು. ಆಯುಷ್‌ ಇಲಾಖೆ ಹೊರತಂದಿರುವ ಹೃದಯಕ್ಕಾಗಿ ಯೋಗ ಮತ್ತು ಯೋಗ ವಾಲ್ಪೇಪರ್‌ಗಳನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ (ಕೆಂಪೇಗೌಡ ವೃತ್ತ) ವಿದ್ಯಾರ್ಥಿಗಳು ಯೋಗ ಪ್ರದರ್ಶನ ನೀಡಿದರು.

Advertisement

ಬಿಇಒ ಮರೀಗೌಡ, ಜಿಲ್ಲಾ ಪಶು ಇಲಾಖೆಯ ಉಪನಿದೇಶಕ ಸಿದ್ದರಾಮಯ್ಯ, ಗಣಿ ಇಲಾಖೆಯ ಉಪನಿರ್ದೇಶಕರು, ಸರ್ಕಾರಿ ನೌಕರರ ಸಂಘದ ಸಂಚಾಲಕ ಸತೀಶ್‌, ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ರಂಗನಾಥ್‌, ಪ್ರಜಾಪಿತ ಬಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಡಿ.ರೂಪ, ಆರ್ಟ್‌ ಆಫ್ ಲಿವಿಂಗ್‌ನ ರವಿಕುಮಾರ್‌ ಗೌಡ, ಶಾಂತಿ ನಿಕೇತನ ಸಮೂಹ ಸಂಸ್ಥೆಗಳ ನಾರಾಯಣ್‌, ಭಾರತ್‌ ವಿಕಾಸ್‌ ಪರಿಷತ್‌ನ ಬಿ.ಕೆ.ಕೃಷ್ಣ ಮೂರ್ತಿ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು. ತಾಲೂಕು ದೈಹಿಕ ಶಿಕ್ಷಣಾಧಿಕಾರಿ ನೀಲಕಂಠ ಸ್ವಾಮಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next