ರಾಮನಗರ: ಐದು ವರ್ಷದ ಹಿಂದೆ ನಾನು ಸ್ಪರ್ಧೆ ಮಾಡಿದ್ದರೆ ಡಿ.ಕೆ ಸುರೇಶ್ ಗೆಲ್ಲುತ್ತಿರಲಿಲ್ಲ. ಹಾಗಾಗಿ ಈ ಬಾರಿ ಬುಡ ಸಮೇತ ತೆಗೆಯಬೇಕೆಂದು ಮಂಜುನಾಥ್ ರನ್ನು ಕಣಕ್ಕಿಳಿಸುತ್ತಿದ್ದೇವೆ. ನಾನು ಪಾರ್ಲಿಮೆಂಟ್ ಗೆ ಹೋಗಬಾರದೆಂದು ನಿರ್ಧಾರ ಮಾಡಿದ್ದೇನೆ. ರಾಜ್ಯ ರಾಜಕೀಯದಲ್ಲಿ ಇರಬೇಕೆಂದು ನನ್ನ ನಿಲುವು ಎಂದು ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಹೇಳಿದರು.
ಚನ್ನಪಟ್ಟಣದಲ್ಲಿ ಮಾಜಿ ಶಾಸಕ ಎ.ಮಂಜುನಾಥ್ ರಿಂದ ಸುದ್ದಿಗೋಷ್ಠಿ ನಡೆಸಿದ ಅವರು, ಸಿಪಿವೈ ಸ್ಪರ್ಧೆ ಮಾಡದೆ ಈಗಲೂ ನನಗೆ ಬೆಂಬಲ ನೀಡಿದ್ದಾರೆಂಬ ಡಿ.ಕೆ.ಸುರೇಶ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ಡಿ.ಕೆ.ಸುರೇಶ್ ಹತಾಶೆಯಿಂದ ಮಾತನಾಡುತ್ತಿದ್ದಾರೆ. ಡಾ.ಸಿಎನ್. ಮಂಜುನಾಥ್ ರವರ ಬಗ್ಗೆ ಮಾತನಾಡಲು ಅವರಿಗೆ ಯೋಗ್ಯತೆ ಇಲ್ಲ. ಮಂಜುನಾಥ್ ವಿರುದ್ಧ ಗೆಲುವು ಸುಲಭವಿದ್ದರೆ ಕುಕ್ಕರ್, ಹಣ ಯಾಕೆ ಕೊಡುತ್ತಿದ್ದರು ಎಂದು ಪ್ರಶ್ನಿಸಿದರು.
ಕಳೆದ ಬಾರಿ ಮುನಿರತ್ನ ಕಾಂಗ್ರೆಸ್ ಪರವಾಗಿದ್ದರು, ಆದರೂ ಬಿಜೆಪಿಗೆ ಅಲ್ಲಿ 30 ಸಾವಿರ ಮುನ್ನಡೆಯಿತ್ತು. ಇವತ್ತು ಮುನಿರತ್ನ ಬಿಜೆಪಿಯಲ್ಲಿದ್ದಾರೆ. ಹಾಗಾಗಿ ನಮ್ಮ ಗೆಲ್ಲುವ ನಿಶ್ಚಿತ. ನಮ್ಮ ಮತ್ತು ಜೆಡಿಎಸ್ ಕಿತ್ತಾಟದಿಂದ ಸುರೇಶ್ ಗೆ ಲಾಭವಾಗಿತ್ತು. ಈಗ ನಾವು, ಜೆಡಿಎಸ್ ನವರು ಒಂದಾಗಿದ್ದೇವೆ. ದೇವೇಗೌಡರು ಬಿಜೆಪಿ ಜೊತೆಗೆ ಒಂದಾಗಿದ್ದಾರೆ ಎಂದರು.
ಮಂಗಳವಾರ ಚನ್ನಪಟ್ಟಣದಲ್ಲಿ ತಾಲೂಕು ಮಟ್ಟದ ಮೈತ್ರಿ ಕಾರ್ಯಕರ್ತರ ಸಭೆ ನಡೆಯಲಿದೆ. ತಾಲೂಕು ಮಟ್ಟದಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಸಮ್ಮಿಲನ ಕಾರ್ಯಕ್ರಮವು ಪಟ್ಟಣದ ಬಾಲಕರ ಕಾಲೇಜು ಮೈದಾನದಲ್ಲಿ ಬೆ.11ಕ್ಕೆ ನಡೆಯಲಿದೆ. ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಭಾಗಿಯಾಗಲಿದ್ದಾರೆ.