ಕನಕಪುರ: ಬೇಟೆಗಾರರ ಗುಂಡೇಟಿಗೆ 3 ವರ್ಷದ ಹೆಣ್ಣು ಚಿರತೆಯೊಂದು ಬಲಿಯಾಗಿರುವ ಘಟನೆ ಕನಕಪುರ ವಲಯ ಅರಣ್ಯ ವ್ಯಾಪ್ತಿಯ ಚಿಕ್ಕ ಮರಳವಾಡಿ ಗ್ರಾಮದ ಬಳಿ ನಡೆದಿದೆ.
ತಾಲೂಕಿನ ಕನಕಪುರ ವಲಯ ಅರಣ್ಯ ಪ್ರದೇಶದ ಚಿಕ್ಕ ಮರಳವಾಡಿ ಗ್ರಾಮದ ಸಮೀಪದ ಜಮೀನಿನಲ್ಲಿ ಚಿರತೆಯ ಶವ ಭಾನುವಾರ ಬೆಳಗ್ಗೆ ಪತ್ತೆಯಾಗಿದೆ.
ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಎಸಿಎಫ್ ಸೀಮಾ. ಆರ್‌ಎಫ್ಒ ದಾಳೇಶ್, ಡಿವೈಆರ್‌ಎಫ್ಒ ರಮೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಡುಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಬೇಟೆಗಾರರ ಗುಂಡೇಟಿಗೆ ಚಿರತೆ ಬಲಿಯಾಗಿರಬಹುದು. ಶನಿವಾರ ತಡರಾತ್ರಿ ಈ ಘಟನೆ ನಡೆದಿದ್ದು ಚಿರತೆಗೆ ಗುಂಡೇಟು ಬಿದ್ದು ಸುಮಾರು 250 ಮೀ. ದೂರ ಬಂದು ನಂತರ ನರಳಾಡಿ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಎಐಎಡಿಎಂಕೆಯನ್ನು ಹಿಡಿತಕ್ಕೆ ಪಡೆಯಲು ಶಶಿಕಲಾ ಕಾದು ನೋಡುವ ತಂತ್ರ!
ಈ ಸಂಬಂಧ ಮರಳವಾಡಿ ಪಶು ಆಸ್ಪತ್ರೆ ವೈದ್ಯಾಧಿಕಾರಿ ರಾಮಚಂದ್ರ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿ ಗುಂಡೇಟಿನಿಂದಲೇ ಚಿರತೆ ಮೃತಪಟ್ಟಿದೆ ಎಂದು ದೃಢಪಡಿಸಿದ್ದು, ಚಿರತೆಯ ಮುಂಗಾಲಿನ ಮೇಲ್ಭಾಗದಲ್ಲಿ ತೂರಿರುವ ಗುಂಡು ಹೃದಯವನ್ನು ಸೀಳಿಕೊಂಡು ಮತ್ತೂಂದು ಭಾಗದಿಂದ ಹೊರ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ನ್ಯಾಯಾಲಯದ ಆದೇಶ ಪಡೆದು ಚಿರತೆಯನ್ನು ಕನಕಪುರ ಅರಣ್ಯ ಇಲಾಖೆಯ ಕಚೇರಿಯ ಆವರಣದಲ್ಲಿ ಮಣ್ಣು ಮಾಡಿ, ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಗಳ ಹುಡುಕಾಟಕ್ಕೆ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಘಟನಾ ಸ್ಥಳದಲ್ಲಿ ಎಸಿಎಫ್ ಸೀಮಾ, ಆರ್‌ಎಫ್ಒ ದಾಳೇಶ್, ಡಿವೈಆರ್‌ಎಫ್ಒ ರಮೇಶ್, ಸಿಬ್ಬಂದಿ ಅರುಣ್, ರಾಜು ಇದ್ದರು.