Advertisement

ರಾಮನಗರಕ್ಕೆ ಬೇಕಿದೆ ಶಾಶ್ವತ ಕುಡಿವ ನೀರು!

09:57 AM Apr 21, 2022 | Team Udayavani |

ಜೋಯಿಡಾ: ಸೂಪಾ ಜಲಾಶಯ ನಿರ್ಮಿಸಲು ಮನೆ, ಜಮೀನು ಕಳೆದುಕೊಂಡ ಇಲ್ಲಿನ ಸಾವಿರಾರು ಕುಟುಂಬಗಳನ್ನು ನಿರಾಶ್ರಿತರ ಪ್ರದೇಶ ರಾಮನಗರಕ್ಕೆ ಸ್ಥಳಾಂತರಿಸಲಾಯಿತು.ಮನೆ, ಜಮೀನು, ಹಣ ನೀಡುವ ಸರ್ಕಾರದ ಎಲ್ಲಾ ಭರವಸೆಗಳು ಹುಸಿಯಾದವು. ಹೀಗಾಗಿ ಇಲ್ಲಿನ ಜನ ಇಂದಿಗೂ ಹನಿ ನೀರಿಗಾಗಿ ಪರದಾಡುವಂತಾಗಿದೆ.

Advertisement

ರಾಮನಗರ ಜನತೆಗೆ ಕಳೆದ 40 ವರ್ಷಗಳಿಂದ ನೀರಿನ ವ್ಯವಸ್ಥೆ ಸರಿಗಿರದೆ ತೊಂದರೆ ಅನುಭವಿಸುತ್ತಲೇ ಇದ್ದಾರೆ. ಸರ್ಕಾರಕ್ಕೆ ಆಗ್ರಹಿಸಿದರೂ ಪ್ರಯೋಜನವಾಗಿಲ್ಲ.

ಜಗತ್ತಿಗೇ ವಿದ್ಯುತ್‌ ಒದಗಿಸಲು ಮತ್ತು ನಮ್ಮ ಜಿಲ್ಲೆ ಮತ್ತು ಹೊರಗಿನ ಜಿಲ್ಲೆಯವರಿಗೆ ನೀರು ಕೊಡಲು ಸೂಪಾ ಡ್ಯಾಂ ನಿರ್ಮಿಸಲಾಗಿದೆಯೇ ಹೊರತು ಸ್ಥಳೀಯರ ಉದ್ಧಾರಕ್ಕಲ್ಲ ಎಂಬುದು ಇಲ್ಲಿನ ಜನರ ಅಳಲಾಗಿದೆ. ಕುಡಿಯಲು ನೀರು ಕೊಟ್ಟರೆ ಸಾಲದು ಇಲ್ಲಿನ ರೈತರಿಗೆ ಮತ್ತು ಕೃಷಿ ಭೂಮಿಗೆ ನೀರು ಕೊಡಬೇಕು ಎನ್ನುವುದು ಸಾರ್ವಜನಿಕರ ಮಾತು.

ಹೌದು ಈಗಾಗಲೇ ಕಳೆದ ಇಪ್ಪತ್ತು ವರ್ಷಗಳಿಂದ ಕೋಟಿ ಕೋಟಿ ಹಣ ರಾಮನಗರ ಜನರಿಗೆ ಕುಡಿಯುವ ನೀರಿನ ಸಲುವಾಗಿ ಜೋಯಿಡಾ ಕುಡಿಯುವ ನೀರು ಸರಬರಾಜು ಇಲಾಖೆ ಖರ್ಚು ಮಾಡಿದೆಯಾದರು ಇಲ್ಲಿನ ಜನರಿಗೆ ನೀರು ಸರಿಯಾಗಿ ಸಿಕ್ಕಿಲ್ಲ. ಪಕ್ಕದಲ್ಲಿರುವ ಪಾಂಡ್ರಿ ನದಿಯಿಂದ ವರ್ಷವೂ ಲಕ್ಷಾಂತರ ಹಣ ಖರ್ಚು ಮಾಡಿ ಇಲ್ಲಿನ ಜನರಿಗೆ ನೀರು ಒದಗಿಸಲಾಗುತ್ತಿದೆ.

ಆದರೆ ಬರ ಬಂದಾಗ ಪಾಂಡ್ರಿ ನದಿಯಲ್ಲಿ ನೀರು ಇರುವುದಿಲ್ಲ. ಆಗ ಇಲ್ಲಿನ ಜನ ನೀರಿಗಾಗಿ ಪರದಾಡಬೇಕಾಗುತ್ತದೆ. ಈ ಹಿಂದೆ ಬರಗಾಲ ಬಂದಾಗ ತಿಂಗಳಿಗೊಮ್ಮೆ ನೀರು ಕೊಟ್ಟ ಉದಾಹರಣೆಗಳಿವೆ. ಹೀಗಾಗಿ ನಮಗೆ ಕಾಳಿ ನದಿ ನೀರನ್ನೇ ಕೊಡಬೇಕು ಮತ್ತು ಕೇವಲ ಕುಡಿಯುವ ನೀರು ಮಾತ್ರವಲ್ಲದೆ ಕೃಷಿ ಭೂಮಿಗೂ ಕೂಡ ನೀರು ಒದಗಿಸುವಂತಾಗಬೇಕು ಎನ್ನುವುದು ಇಲ್ಲಿನವರ ಬೇಡಿಕೆಯಾಗಿದೆ.

Advertisement

ಕುಡಿಯುವ ನೀರು ನೈರ್ಮಲ್ಯ ಇಲಾಖೆ ಗೋಲಮಾಲ್‌: ಈಗಾಗಲೇ ರಾಮನಗರ ಭಾಗದ ಜನರ ಸಲುವಾಗಿ ಕುಡಿಯುವ ನೀರು ನೈರ್ಮಲ್ಯ ಇಲಾಖೆಯಿಂದ ಕೋಟಿ ಕೋಟಿ ಹಣ ಖರ್ಚು ಮಾಡಲಾಗಿದೆ. ಆದರೆ ಈವರೆಗೂ ಇಲ್ಲಿನ ಜನರಿಗೆ ನೀರಿನ ಸಮಸ್ಯೆ ತಪ್ಪಿಲ್ಲ. ಈ ಹಿಂದೆ ಇದ್ದ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಇಂಜಿನೀಯರ್‌ಗಳು ರಾಮನಗರದಲ್ಲಿ ಬೋರ್‌ ವೆಲ್‌ಗ‌ಳಿಗೆ ನೀರು ಬರುವುದಿಲ್ಲ ಎಂದು ಗೊತ್ತಿದ್ದರು ನೂರಾರು ಬೋರ್‌ವೆಲ್‌ಗ‌ಳನ್ನು ಹಣ ಮಾಡುವ ಉದ್ದೇಶದಿಂದ ತೆಗೆದು ನೀರು ಕೊಡಿಸುವ ನೆಪದಲ್ಲಿ ಜನರ ನಂಬಿಕೆಗೆ ದ್ರೋಹ ಮಾಡಿದ್ದಾರೆ.

ಇನ್ನೂ ಲೆಕ್ಕ ಪತ್ರದಲ್ಲಿ ಇದ್ದ ಹಾಗೆ ನೀರಿನ ಪೈಪ್‌ ಆಗಲಿ ಸಿಮೆಂಟ್‌ ಟ್ಯಾಂಕ್‌ ಆಗಲಿ ಯಾವುದು ಸರಿಯಿಲ್ಲ ಎಂಬುದು ಇಲ್ಲಿನ ಜನರ ಮಾತು. ಈ ಭಾಗದ ಜಿಪಂ ಅಭ್ಯರ್ಥಿ ಕೂಡಾ ಕುಡಿಯುವ ನೀರು ಇಲಾಖೆ ಕಾಮಗಾರಿಗಳನ್ನು ಬೇರೆಯವರ ಹೆಸರಿನಲ್ಲಿ ಗುತ್ತಿಗೆ ಪಡೆದು ಕೆಲವುಕಡೆ ಕೆಲಸ ಮುಗಿಸಿ ವರ್ಷಗಳೇ ಕಳೆದರು ನೀರು ಕೊಟ್ಟಿಲ್ಲ.

ಅದೇನೆ ಇರಲಿ ಕಾಳಿ ನೀರನ್ನು ಬೇರೆ ಜಿಲ್ಲೆಗಳಿಗೆ ಕೊಡುವ ಪೂರ್ವದಲ್ಲಿ ಇಲ್ಲಿನ ಜನರಿಗೆ ಕೊಡುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಮಾತಾಗಿದೆ.

ನಿರಾಶ್ರಿತರಾದ ನಮಗೆ ಸರ್ಕಾರ ಈವರೆಗೆ ಸರಿಯಾದ ನೀರಿನ ವ್ಯವಸ್ಥೆ ಮಾಡಿಲ್ಲ. ಕಾಳಿ ನೀರನ್ನು ಕುಡಿಯಲು ಮತ್ತು ಕೃಷಿ ಭೂಮಿಗೆ ನೀಡಿದರೆ ಇದು ರಾಮ ರಾಜ್ಯವಾಗುತ್ತಿತ್ತು. ನೀರಿಲ್ಲದೆ ರಾವಣ ರಾಜ್ಯವಾಗಿದೆ. ನಮ್ಮ ನದಿಯಿಂದ ನಮಗೆ ನೀರಿಲ್ಲವೇ? ಸರ್ಕಾರ ನಮಗೆ ಮೋಸ ಮಾಡಿದೆ. -ಪ್ರಕಾಶ ಬಬ್ಲೇಶ್‌, ರಾಮನಗರ ಸ್ಥಳೀಯ.

ರಾಮನಗರ ಭಾಗದ ಜನರಿಗೆ ಇಳವಾ ದಾಬೆಯಿಂದ ನೀರು ಕೊಡುವ ಬಗ್ಗೆ ಸರ್ಕಾರಕ್ಕೆ ಯೋಜನೆ ಪ್ರಸ್ತಾವನೆ ಕಳಿಸಲಾಗಿದೆ. ಸರ್ಕಾರದ ಆದೇಶದಂತೆ ಮುಂದಿನ ದಿನಗಳಲ್ಲಿ ಕುಡಿಯುವ ನೀರು ನೈರ್ಮಲ್ಯ ಇಲಾಖೆಯಿಂದ ಕೆಲಸ ಪ್ರಾರಂಭವಾಗಲಿದೆ. -ಸಂಜಯ ಕಾಂಬಳೆ, ತಹಶೀಲ್ದಾರ್‌ ಜೋಯಿಡಾ

-ಸಂದೇಶ ದೇಸಾಯಿ

Advertisement

Udayavani is now on Telegram. Click here to join our channel and stay updated with the latest news.

Next