ರಾಮನಗರ: ತನ್ನ ಜಮೀನಿ ರಸ್ತೆಯನ್ನು ಕೆಲವರು ಬೇಕಂತಲೇ ಮುಚ್ಚಿರುವುದರಿಂದ ಸಾಲ ಮಾಡಿ ನಿರ್ಮಿಸಿರುವ ಕೋಳಿ ಫಾರಂ ನಡೆಸಲು ಆಗದೆ, ಜಮೀನು ಅಭಿವೃದ್ಧಿ ಮಾಡಲಾಗದೆ, ಸಾಲ ತೀರಿಸಲಾಗದೆ ಸಂಕಷ್ಟದಲ್ಲಿದ್ದು, ರಸ್ತೆ ಬಿಡಿಸಿ ಕೊಡಿ ಅಥವಾ ದಯಾಮರಣ ಕರುಣಿಸಿ ಎಂದು ಜೋಗಿದೊಡ್ಡಿ ನಿವಾಸಿ ರೈತ ಜಗದೀಶ್ ಜಿಲ್ಲಾಡಳಿತಕ್ಕೆ ಪ್ರಾರ್ಥಿಸಿಕೊಂಡಿದ್ದಾರೆ.
ತಾಲೂಕಿನ ಕೂಟಗಲ್ ಹೋಬಳಿ, ಇಬ್ಬಳಕಳ್ಳಿ ಗ್ರಾಮದ ಸರ್ವೆ ಸಂಖ್ಯೆ 8ರಲ್ಲಿರುವ 2 ಎಕರೆ ಜಮೀನು ತನಗೆ 1991ರಲ್ಲಿ ಸರ್ಕಾರದಿಂದ ತಮ್ಮ ತಂದೆ ತಿಬ್ಬಯ್ಯ ಅವರಿಗೆ ಮಂಜೂರಾಗಿದೆ. ಅಂದಿನಿಂದಲೂ ನಾವು ವ್ಯವಸಾಯ ಮಾಡಿಕೊಂಡು ಬಂದಿದ್ದು, 2016ನೇ ಸಾಲಿನಲ್ಲಿ ಪಿಎಲ್‌ಡಿ ಬ್ಯಾಂಕಿನಿಂದ 9.5 ಲಕ್ಷ ರೂ. ಸಾಲ ಪಡೆದು ಕೋಳಿ ಫಾರಂ ಸ್ಥಾಪಿಸಲು ಕಟ್ಟಡ ನಿರ್ಮಿಸಿದ್ದು, ನಮ್ಮ ಜಮೀನಿಗೆ ಹೋಗಲು ನಕಾಶೆಯಲ್ಲಿ ರಸ್ತೆಯಿತ್ತು. ಆದರೆ ತಮ್ಮ ಅಕ್ಕಪಕ್ಕದ ಜಮೀನುದಾರರು ತಮಗೆ ತೊಂದರೆ ಕೊಡುವ ಉದ್ದೇಶದಿಂದ ದಾರಿ ಮುಚ್ಚಿದ್ದಾರೆ ಎಂದು ದೂರಿದ್ದಾರೆ.
ದಾರಿ ಮುಚ್ಚಿದ್ದರಿಂದ ತಮ್ಮ ಜಮೀನಿಗೆ ಜಾನುವಾರುಗಳನ್ನು ಕರೆದೊಯ್ಯುವುದಾಗಲಿ, ಟ್ರಾಕ್ಟರ್ ಮುಂತಾದ ಮೋಟಾರು ವಾಹನಗಳ ಸಂಚಾರಕ್ಕಾಗಿ ಆಗುತ್ತಿಲ್ಲ. ಹೀಗಾಗಿ ಕೋಳಿ ಫಾರಂ ನಡೆಸಲು ಸಹ ಆಗದೆ ಅಂದಿನಿಂದ ಕಟ್ಟಡ ಪಾಳು ಬಿದ್ದಿವೆ. ಕೃಷಿ ಚಟುವಟಿಕೆಗಾಗಿ ಮಾಡಿದ್ದ ಕೃಷಿ ಹೊಂಡ ಕೂಡ ನೆನೆಗುದಿಗೆ ಬಿದ್ದಿದೆ. ಭೂಮಿ ನಿರ್ವಹಣೆ ಇಲ್ಲದೆ ಸೊರಗುತ್ತಿದೆ. ಇವೆಲ್ಲದರ ನಡುವೆ ಸಾಲ ಮರುಪಾವತಿಗೆ ಪಿಎಲ್‌ಡಿ ಬ್ಯಾಂಕಿನಿಂದ ನೋಟಿಸ್‌ಗಳು ಬರುತ್ತಿವೆ. ಬದುಕು ಹೈರಾಣಾಗಿದೆ ಎಂದು ಅಲವತ್ತು ಕೊಂಡಿದ್ದಾರೆ.
ಮನವಿಗೆ ಸ್ಪಂದನೆ ಇಲ್ಲ: ತಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿಕೊಡುವಂತೆ ತಾವು ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಕಚೇರಿಗಳಿಗೆ ಮನವಿ ಸಲ್ಲಿಸಿರುವೆ. ಆದರೆ ಯಾವೊಬ್ಬ ಅಧಿಕಾರಿಯೂ ಸ್ಪಂದಿಸಿಲ್ಲ ಎಂದು ಡೀಸಿಯವರಿಗೆ ಬರೆದಿರುವ ಮನವಿಯಲ್ಲಿ ಹೇಳಿಕೊಂಡಿದ್ದಾರೆ. ನೊಂದು, ಬೆಂದು ಹೋಗಿರುವ ತಾವು 24.7.2019ರಂದು ಮುಖ್ಯಮಂತ್ರಿಗಳ ಕಚೇರಿಗೂ ಮನವಿ ಮಾಡಿದ್ದು, ಅಲ್ಲಿಂದಲೂ ನ್ಯಾಯ ಸಿಗಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಮೂವರು ಜಿಲ್ಲಾಧಿಕಾರಿಗಳು, ಐವರು ಉಪವಿಭಾಗಾಧಿಕಾರಿಗಳು, ಆರು ಮಂದಿ ತಹಶೀಲ್ದಾರ್‌ಗಳು ಜತೆಗೆ ಜನತಾದರ್ಶನದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು ಸಮಸ್ಯೆ ಬಗೆ ಹರಿದಿಲ್ಲ ಎಂದು ತಿಳಿಸಿದ್ದಾರೆ.
ಬಡ್ಡಿ ಅಸಲು ಕಟ್ಟಲಾಗುತ್ತಿಲ್ಲ: ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ತಾವು ಪಿಎಲ್‌ಡಿ ಬ್ಯಾಂಕ್‌ನಲ್ಲಿ ಮಾಡಿರುವ ಸಾಲಕ್ಕೆ ಬಡ್ಡಿ ಕಟ್ಟಲಾಗುತ್ತಿಲ್ಲ. ಅಸಲನ್ನು ತೀರಿಸಲಾಗುತ್ತಿಲ್ಲ. ಕಾರಣ ತಮಗೆ ಆದಾಯ ಮೂಲವಾದ ಕೃಷಿ ಭೂಮಿಯೇ ನಿಷ್ಕ್ರಿಯವಾಗಿದೆ. ಅಸಲನ್ನು ತೀರಿಸದಿದ್ದರಿಂದ ಬ್ಯಾಂಕ್‌ನಿಂದ ಪದೇ ಪದೇ ನೋಟಿಸ್ ಜಾರಿಯಾಗಿದೆ. ಕೋರ್ಟ್ ಮೆಟ್ಟಿಲೇರುವುದು ಅನಿವಾರ್ಯ ಎಂದು ಬ್ಯಾಂಕ್ ನವರು ಎಚ್ಚರಿಸಿದ್ದಾರೆ. ತಮಗೆ ದಾರಿ ಕಾಣದಾಗಿದೆ. ಅಧಿಕಾರಿಗಳು ತಮಗೆ ನ್ಯಾಯ ಕೊಡಿಸಿಕೊಡ ಬೇಕಾಗಿದೆ ಎಂದು ಮನವಿ ಮಾಡಿಕೊಂಡಿದ್ದಾರೆ.