Advertisement

ತೃತೀಯ ಸಂಸ್ಥೆಯಿಂದ ಕಾಮಗಾರಿ ಪರಿಶೀಲನೆ

04:12 PM Aug 01, 2019 | Naveen |

ರಾಮನಗರ: 2017-18ನೇ ಸಾಲಿನ ಮುಖ್ಯಮಂತ್ರಿಗಳ ಗ್ರಾಮವಿಕಾಸ ಯೋಜನೆ ಮತ್ತು 2015-16ನೇ ಸಾಲಿನ ಗ್ರಾಮ ವಿಕಾಸ ಯೋಜನೆಯಡಿ ಕೆ.ಆರ್‌.ಐ.ಡಿ.ಎಲ್ ಕೈಗೊಂಡಿರುವ ಕಾಮಗಾರಿಗಳನ್ನು ತೃತೀಯ ಸಂಸ್ಥೆಯೊಂದರಿಂದ ಪರಿಶೀಲನೆ ನಡೆಸಲು ತಾಲೂಕು ಪಂಚಾಯ್ತಿ ಅಧ್ಯಕ್ಷ ಗಾಣಕಲ್ ನಟರಾಜ್‌ ಸೂಚನೆ ನೀಡಿದರು.

Advertisement

ನಗರದ ಮಿನಿ ವಿಧಾನಸೌಧದಲ್ಲಿರುವ ತಾಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ಗ್ರಾಮ ವಿಕಾಸ ಯೋಜನೆಯಡಿ ಗ್ರಾಮ ಪಂಚಾಯ್ತಿಗಳು ವಿವಿಧ ಕಾಮಗಾರಿಗಳನ್ನು ಮಾಡಿಕೊಡುವಂತೆ ಕೆ.ಆರ್‌. ಐ.ಡಿ.ಎಲ್ ಸಂಸ್ಥೆಗೆ ಅನುದಾನವನ್ನು ಬಿಡುಗಡೆ ಮಾಡಿದೆ. ಆದರೆ, ಸದರಿ ಸಂಸ್ಥೆ ತಾನು ಕೈಗೊಂಡಿರುವ ಕಾಮಗಾರಿಗಳ ಪೂರ್ಣ ವಿವರಗಳನ್ನು ಕೊಡಲು ವಿಫ‌ಲವಾಗಿರುವ ಬಗ್ಗೆ ವಿವಿಧ ಗ್ರಾಮ ಪಂಚಾಯ್ತಿ ಪಿಡಿಒಗಳು ದೂರಿದ ಹಿನ್ನೆಲೆಯಲ್ಲಿ ತೃತೀಯ ಸಂಸ್ಥೆಯಿಂದ ಪರಿಶೀಲನೆ ನಡೆಸಲು ನಿರ್ಣಯ ಕೈಗೊಳ್ಳುತ್ತಿರುವುದಾಗಿ ತಿಳಿಸಿದರು.

ಎಲ್ಲಾ ಕಾಮಗಾರಿಗಳು ಪೂರ್ಣ: ಸಭೆಯಲ್ಲಿ ಕೆ.ಆರ್‌.ಐ.ಡಿ.ಎಲ್ನ ಜೂನಿಯರ್‌ ಎಂಜಿನಿಯರ್‌ ಉದಯ್‌, ತಮ್ಮ ಇಲಾಖೆಯ ಪ್ರಗತಿಯನ್ನು ವಿವರಿಸಿ, 2015-16ನೇ ಸಾಲಿನ ಗ್ರಾಮವಿಕಾಸ ಯೋಜನೆಯಡಿ ರಾಮನಗರ ತಾಲೂಕಿನ ರಾಜೀವ್‌ಗಾಂಧಿ ಪುರದಲ್ಲಿ 37.50 ಲಕ್ಷ ರೂ., ಕೆಂಪೇಗೌಡನದೊಡ್ಡಿಯಲ್ಲಿ 37.50 ಲಕ್ಷ ರೂ., ಹುಣಸನಹಳ್ಳಿಯಲ್ಲಿ 37.50 ಲಕ್ಷ ರೂ., ಲಕ್ಕಪ್ಪನಹಳ್ಳಿಯಲ್ಲಿ 37.50 ಲಕ್ಷ ರೂ., ಆಯಾ ಗ್ರಾಮ ಪಂಚಾಯ್ತಿಗಳು ಅನುದಾನವನ್ನು ಕೆ.ಆರ್‌.ಐ.ಡಿ.ಎಲ್ ಸಂಸ್ಥೆಗೆ ಬಿಡುಗಡೆ ಮಾಡಿದ್ದವು. ಸದರಿ ಎಲ್ಲಾ ಕಾಮಗಾರಿಗಳನ್ನು ಪೂರೈಸಲಾಗಿದೆ ಎಂದರು.

58.08 ಲಕ್ಷ ರೂ. ಕಾಮಗಾರಿ ಬಾಕಿ: 2017-18ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಯಡಿ ಕಂಚುಗಾರನಹಳ್ಳಿ, ವಿರೂಪಸಂದ್ರ, ಬಸವನಪುರ, ಜಯಪುರ, ಅಂಕನಹಳ್ಳಿ, ದಾಸರಹಳ್ಳಿ ಮತ್ತು ಕುಂಬಾಪುರ ಕಾಲೋನಿಗಳಲ್ಲಿ ತಲಾ 50 ಲಕ್ಷ ರೂ., ಒಟ್ಟು 350 ಲಕ್ಷ ವೆಚ್ಚದ ವಿವಿಧ ಅಭಿವೃದ್ಧ ಕಾಮಗಾರಿಗಳನ್ನು ಕೈಗೊಳ್ಳುವಂತೆಯೂ ಸೂಚಿಸಲಾಗಿತ್ತು. ಈ ಪೈಕಿ 291.92 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. 269.27 ಲಕ್ಷ ರೂ. ವೆಚ್ಚದ ಕಾಮಗಾರಿಗಳು ಪೂರ್ಣವಾಗಿವೆ. ಉಳಿದೆ 58.08 ಲಕ್ಷ ರೂ ಕಾಮಗಾರಿ ಬಾಕಿ ಇದೆ ಎಂದು ಮಾಹಿತಿ ನೀಡಿದರು.

ಗ್ರಾಪಂಗಳಿಗೆ ಹಸ್ತಾಂತರ ಮಾಡಿಲ್ಲ: ಇದಕ್ಕೆ ಪ್ರತಿಕ್ರಿಯಿಸಿದ ವಿವಿಧ ಗ್ರಾಮ ಪಂಚಾಯ್ತಿಗಳ ಪಿಡಿಒಗಳು, ಕೆ.ಆರ್‌.ಐ.ಡಿ.ಎಲ್ ಅಧಿಕಾರಿಗಳು ತಾವು ಕೈಗೊಂಡಿರುವ ಕಾಮಗಾರಿಗಳನ್ನು ಖುದ್ದು ತೋರಿಸುವುದಾಗಲಿ, ಜಂಟಿ ಪರಿಶೀಲನೆಗೆ ಅವಕಾಶ ಮಾಡಿಕೊಟ್ಟಿದ್ದಾಗಲಿ, ಕಾಮಗಾರಿಗಳು ಪೂರ್ಣಗೊಂಡಿದ್ದರೆ ಅದನ್ನು ಗ್ರಾಮ ಪಂಚಾಯ್ತಿಗಳಿಗೆ ಹಸ್ತಾಂತರ ಮಾಡಲಿಲ್ಲ ಎಂದು ದೂರಿದರು.

Advertisement

ಕಿವಿಲಿ ಹೂ ಮುಡಿಸಬೇಡಿ!: ಇದಕ್ಕೆ ಕೆ.ಆರ್‌.ಐ.ಡಿ.ಎಲ್ ಕಿರಿಯ ಎಂಜಿನಿಯರ್‌ ಉದಯ್‌, ಗ್ರಾಮ ಪಂಚಾಯ್ತಿಗಳು ಪತ್ರ ಕೊಟ್ಟರೆ ವಿವರವಾದ ಮಾಹಿತಿ ಕೊಡುವುದಾಗಿ ಸಮಜಾಯಿಶಿ ನೀಡಲೆತ್ನಿಸಿದಾಗ ಆಕ್ರೋಶಗೊಂಡ ತಾಪಂ ಅಧ್ಯಕ್ಷ ಗಾಣಕಲ್ ನಟರಾಜು ಕಿವಿಲಿ ಹೂ ಮುಡಿಸಬೇಡಿ, ಅನುದಾನ ಕೊಟ್ಟ ಗ್ರಾಮ ಪಂಚಾಯ್ತಿಗೆ ವಿವರ ಕೊಡಬೇಕಾದ್ದು ನಿಯಮ ಎಂದು ಗುಡುಗಿದರು.

ತಾಲೂಕು ಪಂಚಾಯ್ತಿಯಿಂದಲೇ ಪತ್ರ ಕೊಡಿಸುವುದಾಗಿ, ಸದರಿ ವಿಷಯವನ್ನು ಜಿಪಂ ಸಿಇಒ ಅವರ ಗಮನ ಸೆಳೆದು ತೃತೀಯ ಸಂಸ್ಥೆಯಿಂದ ಪರಿಶೀಲನೆ ನಡೆಸುವುದಾಗಿ ಮತ್ತು ತಾಲೂಕು ಪಂಚಾಯ್ತಿ ಅಧಿಕಾರಿಗಳು ಹಾಗೂ ಸದಸ್ಯರ ಸಮಿತಿಯೊಂದನ್ನು ರಚಿಸಿ ಪರಿಶೀಲನೆ ನಡೆಸುವುದಾಗಿ ನಿರ್ಣಯ ಕೈಗೊಂಡರು.

ಆ.2ರಂದು ಡೆಂಘೀ ಜ್ವರದ ಜಾಗೃತಿ ಜಾಥಾ: ತಾಲೂಕಿನಾದ್ಯಂತ ಡೆಂಘೀ ಜ್ವರ ಹರಡುತ್ತಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಸಭೆಯ ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಅಧ್ಯಕ್ಷ ಗಾಣಕಲ್ ನಟರಾಜು, ಈ ಬಗ್ಗೆ ತಾವು ಶಿಕ್ಷಣ ಇಲಾಖೆಗೆ ಸೂಚನೆ ಕೊಟ್ಟು ವಿವಿಧ ಶಾಲೆಗಳ ಮಕ್ಕಳಿಂದ ಜಾಗೃತಿ ಜಾಥಾ ಕೈಗೊಳ್ಳುವಂತೆ ಸೂಚನೆ ಕೊಟ್ಟಿದ್ದಾಗಿ, ಆದರೆ ಸೂಚನೆ ಪಾಲನೆಯಾಗಲಿಲ್ಲ ಎಂದು ಶಿಕ್ಷಣ ಇಲಾಖೆಯ ಪ್ರತಿನಿಧಿಯನ್ನು ತರಾಟೆಗೆ ತೆಗೆದುಕೊಂಡರು.

ಆಗಸ್ಟ್‌ 2ರಂದು ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಗ್ರಾಮ ಪಂಚಾಯ್ತಿಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಪ್ರತಿಯೊಂದು ಗ್ರಾಮದಲ್ಲೂ ಡೆಂಘೀ ಜ್ವರದ ಬಗ್ಗೆ ಜಾಗೃತಿ ಜಾಥಾ ಹಮ್ಮಿಕೊಳ್ಳಲು ಸೂಚನೆ ನೀಡಿದರು. ಆರೋಗ್ಯ ಇಲಾಖೆ ವತಿಯಿಂದ ಡೆಂಘೀ ಜ್ವರಕ್ಕೆ ಕಾರಣವಾಗುವ ಸೊಳ್ಳೆಗಳ ಲಾರ್ವ ನಾಶಕ್ಕೆ ಬಳಸುವ ದ್ರವ್ಯೌಷಧ (ಲೋಷನ್‌) ಪೂರೈಸುವಂತೆ ತಿಳಿಸಿದರು.

ಪ್ರಧಾನ ಮಂತ್ರಿ ಸಮ್ಮಾನ್‌ ಯೋಜನೆ, ಸಮಗ್ರ ಕೃಷಿ ಪದ್ಧತಿ ಯೋಜನೆಯ ವಿವರಗಳನ್ನು ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಶಿಕ್ಷಣ, ಸಮಾಜ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ ಸೇರದಿಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿ ಬಗ್ಗೆ ವಿವರಿಸಿದರು. ಈ ವೇಳೆ ತಾಪಂ ಉಪಾಧ್ಯಕ್ಷೆ ರಮಾಮಣಿ ಮತ್ತು ಇಒ ಬಾಬು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next