Advertisement

ಸ್ವಾರ್ಥಕ್ಕಾಗಿ ಶಾಸಕರ ರಾಜೀನಾಮೆ: ಆರೋಪ

05:01 PM Jul 11, 2019 | Naveen |

ರಾಮನಗರ: ನಾಡು, ನುಡಿ, ಗಡಿ, ಜಲ, ಭಾಷೆ, ಕಾವೇರಿ, ರೈತರ ಪರ ರಾಜೀನಾಮೆ ನೀಡದ 14 ಶಾಸಕರು, ರಾಜಕೀಯ ಹಿತಾಸಕ್ತಿಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪರ ರಾಜ್ಯದಲ್ಲಿ ತಲೆ ಮರೆಸಿಕೊಂಡು, ಕರ್ನಾಟಕಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

Advertisement

ನಗರದ ಐಜೂರು ವೃತ್ತದಲ್ಲಿ ಜಮಾಯಿಸಿದ ಕರವೇ ಸ್ವಾಭಿಮಾನಿ ಬಣದ ಕಾರ್ಯಕರ್ತರು, 14 ಶಾಸಕರ ವಿರುದ್ಧ ಘೋಷಣೆ ಕೂಗಿದರು. ವೀಳ್ಯೆದಲೆ ಜಿಗಿದು ಶಾಸಕರುಗಳ ಭಾವಚಿತ್ರಗಳಿಗೆ ಉಗಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲಾ ಕ್ಷೇತ್ರಗಳಲ್ಲೂ ಸಮಸ್ಯೆಗಳಿವೆ: ಈ ವೇಳೆ ಬಣದ ರಾಜ್ಯಾಧ್ಯಕ್ಷ ಪಿ.ಕೃಷ್ಣೇಗೌಡ ಮಾತನಾಡಿ, ಇಂದು ರಾಜ್ಯದಲ್ಲಿ ಹಲವಾರು ಸಮಸ್ಯೆಗಳು ಕಾಡುತ್ತಿವೆ. ಬರ ಕಾಡುತ್ತಿದೆ. ಜನ, ಜಾನುವಾರುಗಳಿಗೆ ನೀರು ಸಿಗುತ್ತಿಲ್ಲ. ರೈತರ ಬೆಳೆಗೆ ಪರಿಹಾರದ ಹಣ ಬಿಡುಗಡೆಯಾಗಿಲ್ಲ. ಸರ್ಕಾರಿ ಶಾಲೆಗಳ ಸಮಸ್ಯೆ ಇನ್ನೊಂದೆಡೆ, ರಾಜ್ಯದ ಬಹುತೇಕ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಸಮಸ್ಯೆಗಳು ತಾಂಡವವಾಡುತ್ತಿದೆ. ಹೀಗಿದ್ದರು. 14 ಮಂದಿ ಶಾಸಕರು ತಮ್ಮ ಕ್ಷೇತ್ರಗಳ ಮತದಾರರ ಕಷ್ಟಗಳಿಗೆ ದನಿಯಾಗದೆ ಸ್ವಂತ ರಾಜಕೀಯ ಹಿತಾಸಕ್ತಿಗಾಗಿ ರಾಜೀನಾಮೆ ನೀಡಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.

ಶಾಸಕರಿಗೆ ಸಾಮಾಜಿಕ ಕಳಕಳಿ ಮುಖ್ಯ: ಶಾಸಕರು ರಾಜ್ಯ ಸರ್ಕಾರದ ಆಡಳಿತದ ಕಿವಿ ಹಿಂಡದೆ ಹೀಗೆ ರಾಜಕೀಯ ಸ್ವ-ಹಿತಾಸಕ್ತಿಗೆ ತೆಗೆದುಕೊಂಡ ಕ್ರಮ ಸರಿಯಲ್ಲ. ತಮ್ಮ ಸಂಘಟನೆ ಯಾವ ಪಕ್ಷದ ಪರವಾಗಿಯೂ ಇಲ್ಲ, ಯಾವ ಪಕ್ಷದ ವಿರುದ್ಧವಾಗಿಯೂ ಇಲ್ಲ. ಶಾಸಕರಿಗೆ ಸಾಮಾಜಿಕ ಕಳಕಳಿ ಮುಖ್ಯ. ಆದರೆ, 14 ಶಾಸಕರಿಗೆ ಈ ಕಳಕಳಿ ಇಲ್ಲ, ಸಂವಿಧಾನದಕ್ಕೂ ಬೆಲೆ ಕೊಟ್ಟಿಲ್ಲ ಎಂದು ದೂರಿದರು.

ರೆಸಾರ್ಟ್‌ ರಾಜಕಾರಣಕ್ಕೆ ಖಂಡನೆ: ಶಾಸಕರು, ಸಚಿವರು ತಮ್ಮ ಸ್ವಂತ ಕ್ಷೇತ್ರದಲ್ಲಿ ಜನಸಮಾನ್ಯರ ಸಮಸ್ಯೆಗಳಿಗೆ ಕಿವಿಗೊಡದೆ ರೆಸಾರ್ಟ್‌ ರಾಜಕಾರಣ ಮಾಡುತ್ತಿರುವುದನ್ನು ತಮ್ಮ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ಕ್ಷುಲ್ಲಕ ಕಾರಣಗಳಿಗೆ ರಾಜೀನಾಮೆ ಕೊಟ್ಟು ಮರು ಚುನಾವಣೆಯ ಸನ್ನಿವೇಶವನ್ನು ಸೃಷ್ಟಿಸುತ್ತಿರುವುದು ಸರಿಯಲ್ಲ. ಅವರ ಕ್ರಮದಿಂದಾಗಿ ಬೊಕ್ಕಸಕ್ಕೆ ನಷ್ಟವಾಗುತ್ತದೆ. ಜನರ ತೆರಿಗೆ ಹಣವನ್ನು ಹೀಗೆ ಪೋಲು ಮಾಡುವುದರಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಆರೋಪಿಸಿದರು.

Advertisement

ಮಸಿ ಬಳಿಯುವ ಎಚ್ಚರಿಕೆ: ಮುಂಬೈನಲ್ಲಿರುವ ಶಾಸಕರು, ರಾಜ್ಯವನ್ನು ಪ್ರವೇಶಿಸಬೇಕಾದರೆ ಮೊದಲು ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಅವರು ಕಂಡ ಕಂಡಲ್ಲಿ ತಮ್ಮ ಸಂಘಟನೆಯ ಕಾರ್ಯಕರ್ತರು ಮಸಿ ಬಳಿಯುವ ಎಚ್ಚರಿಕೆ ನೀಡಿದರು.

ಜನರ ಸಮಸ್ಯೆಗಳಿಗೆ ದನಿಯಾಗಿ ನಿಲ್ಲುವ ಶಾಸಕರ ಪರ ತಮ್ಮ ಸಂಘಟನೆ ಎಂದಿಗೂ ಜೊತೆ ನಿಲ್ಲುತ್ತದೆ ಎಂದು ಹೇಳಿದರು. ಸಂಘಟನೆಯ ಜಿಲ್ಲಾಧ್ಯಕ್ಷ ಶಿವುಗೌಡ ಮುಂತಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next