ರಾಮನಗರ: ನಗರದ ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮತ್ತು ಅಗ್ನಿಕೊಂಡ ಮಹೋತ್ಸವ ಯಶಸ್ವಿಯಾಗಿ ನೆರೆವೇರಿದೆ.
ಮಂಗಳವಾರ ರಾತ್ರಿ ಸಿಂಗ್ರಾಬೋವಿ ದೊಡ್ಡಿಯಿಂದ ಹೊರಟ ಕರಗ, ನಗರದ ಪ್ರಮುಖ ಬಡಾವಣೆಗಳಿಗೆ ಭೇಟಿ ಕೊಟ್ಟು ಭಕ್ತರಿಂದ ಪೂಜೆ ಸ್ವೀಕರಿಸಿ ಬುಧವಾರ ಬೆಳಗ್ಗೆ 6.15ರ ವೇಳೆಗೆ ಚಾಮುಂಡೇಶ್ವರಿ ದೇವಾಲಯದ ಮುಂಭಾಗ ನಿರ್ಮಿಸಲಾಗಿದ್ದ ಅಗ್ನಿಕೊಂಡವನ್ನು ಹಾಯ್ದು ದೇವಾಲಯ ಪ್ರವೇಶಿಸಿತು. ಕಿಕ್ಕಿರಿದು ಸೇರಿದ್ದ ಭಕ್ತ ಸಮೂಹ ಮಾಡಿದ ಅಮ್ಮನವರ ಜಯಘೋಷ ಮುಗಿಲು ಮುಟ್ಟುವಂತಿತ್ತು. ಈ ಬಾರಿಯೂ ದೇವಿ ಪ್ರಸಾದ್ ಸಿಂಗ್ ಕರಗ ಧಾರಣೆ ಮಾಡಿದ್ದರು. ಅಗ್ನಿಕೊಂಡಕ್ಕೆ ಬೇಕಾದ ಸೌಧೆ, ಕಟ್ಟಿಗೆ, ಉಪ್ಪು ಇತ್ಯಾದಿಯನ್ನು ತಾಲೂಕಾದ್ಯಂತ ಭಕ್ತರು ಟ್ರ್ಯಾಕ್ಟರ್ ಸೇರಿದಂತೆ ತಮಗೆ ಅನುಕೂಲವಾದ ವಾಹನಗಳಲ್ಲಿ ತಂದು ಒಪ್ಪಿಸಿದರು.
ಭಕ್ತರಿಂದ ಪೂಜೆ: ಮಂಗಳವಾರ ಇಡೀ ರಾತ್ರಿ ನಗರಾದ್ಯಂತ ವಿವಿಧ ಬಡಾವಣೆಗಳು, ಪ್ರಮುಖ ದೇವಾಲಗಳಿಗೆ ಭೇಟಿ ಕೊಟ್ಟ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಭಕ್ತರಿಂದ ಪೂಜೆ ಸ್ವೀಕರಿಸಿತು. ಕೆಲವೆಡೆ ಕರಗ ಹಾದು ಹೋಗುವ ರಸ್ತೆಗಳನ್ನು ಬಗೆ ಬಗೆಯ ಹೂಗಳಿಂದ ಶೃಂಗರಿಸಲಾಗಿತ್ತು.
ಕರಗ ಮಹೋತ್ಸವದ ಅಂಗವಾಗಿ ನಗರ ವಿದ್ಯುತ್ ದೀಪಗಳು, ತಳಿರು, ತೋರಣಗಳಿಂದ ಶೃಂಗಾರಗೊಂಡಿತ್ತು. ಅರಳೀ ಮರ ವೃತ್ತ ಮತ್ತು ಜಿಲ್ಲಾ ಕ್ರೀಡಾಂಗಣಗಳಲ್ಲಿ ನಾಡಿನ ಖ್ಯಾತ ಸಂಗೀತಗಾರರಿಂದ ರಸಸಂಜೆ ಏರ್ಪಡಿಸಲಾಗಿತ್ತು. ಜೂನಿಯರ್ ಕಾಲೇಜು ಮೈದಾನದಲ್ಲಿ ಬಗೆಬಗೆಯ ಮನರಂಜನಾ ಆಟಗಳು ಏರ್ಪಡಿಸಿದ್ದರಿಂದ ಸಾವಿರಾರು ಮಂದಿ ನಾಗರಿಕರು ತಮ್ಮ ಕುಟುಂಬ ಸಮೇತ ಇಡೀ ರಾತ್ರಿ ಮನರಂಜನೆಯ ಸವಿ ಸವಿದರು. ಮಂಗಳವಾರ ಇಡೀ ರಾತ್ರಿ ಜಿಲ್ಲಾ ಕೇಂದ್ರ ನಿದ್ರೆಗೆ ಜಾರಲಿಲ್ಲ. ಬುಧವಾರ ದೇವಾಲಯದ ಆವರಣದಲ್ಲಿ ಸಿಡಿ ಉತ್ಸವ ನಡೆಯಿತು.
ನವಶಕ್ತಿಯರ ಕರಗ: ಮಂಗಳವಾರ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗದ ಜೊತೆಯಲ್ಲೇ ನಗರದ ವಿವಿಧೆಡೆ ನೆಲೆಸಿರುವ ಅಷ್ಟ ಶಕ್ತಿ ದೇವತೆಗಳ ಕರಗ ಮಹೋತ್ಸವವು ಯಶಸ್ವಿಯಾಗಿ ನೆರೆವೇರಿದವು. ಐಜೂರು ಆದಿಶಕ್ತಿ, ಬಿಸಿಲು ಮಾರಮ್ಮ ಕರಗ, ಮಗ್ಗದಕೇರಿ ಮಾರಮ್ಮ, ಭಂಡಾರಮ್ಮ ದೇವಿ, ಮುತ್ತುಮಾರಮ್ಮ ಕರಗ, ಶೆಟ್ಟಿಹಳ್ಳಿ ಆದಿಶಕ್ತಿ ಕರಗ, ಕೊಂಕಾಣಿದೊಡ್ಡಿ ಆದಿಶಕ್ತಿ ಕರಗ, ಚೌಡೇಶ್ವರಿ ಅಮ್ಮನವರ ಕರಗ ಕೂಡ ನೆರೆವೇರಿದವು. ಯಾವುದೇ ಅಹಿತಕರ ಘಟನೆಗೆ ಅವಕಾಶವಾಗದಂತೆ ಜಿಲ್ಲಾ ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.