Advertisement

ಕನಕಪುರಕ್ಕೆ ಮೆಡಿಕಲ್‌ ಕಾಲೇಜು ರದ್ದು ಡಿಕೆಶಿ ಆಕ್ಷೇಪ

06:46 PM Dec 08, 2019 | Naveen |

ರಾಮನಗರ: ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್‌ ಕಾಲೇಜನ್ನು ಹಿಂದಕ್ಕೆ ಪಡೆದಿರುವ ಬಿಜೆಪಿ ಸರ್ಕಾರದ ಕ್ರಮಕ್ಕೆ ಕನಕಪುರ ಶಾಸಕ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಆಕ್ಷೇಪ ವ್ಯಕ್ತಪಡಿಸಿದ್ದು, ಕಾಲೇಜು ಮಂಜೂರು ಮಾಡದಿದ್ದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ಪತ್ರ ಬರೆದಿದ್ದಾರೆ.

Advertisement

ಉಪಚುನಾವಣೆಗಳ ನಂತರ ತಮ್ಮ ಹೋರಾಟ ಆರಂಭಿಸುವುದಾಗಿ ಡಿ.ಕೆ.ಶಿ ಹೇಳಿಕೆ ನೀಡಿದ್ದರು. ಇದೀಗ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವುದರ ಮೂಲಕ ಈ ವಿಚಾರದಲ್ಲಿ ಧ್ವನಿ ಎತ್ತಿದ್ದಾರೆ. ಶನಿವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಡಿ.ಕೆ.ಶಿವಕುಮಾರ್‌, ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್‌ ಕಾಲೇಜನ್ನು ರದ್ದು ಪಡಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಧ್ವೇಷ ರಾಜಕರಣವೇ ಮುಖ್ಯಮಂತ್ರಿಗಳ ಉದ್ದೇಶವಾದರೆ, ತಾವು ತಮ್ಮದೇ ರೀತಿಯಲ್ಲಿ ಹೋರಾಟ ಮಾಡಬೇಕಾಗುತ್ತದೆ. ಇದಕ್ಕೆ ಅವಕಾಶ ಕೂಡಬೇಡಿ ಅಂತಲೂ ಅವರು ಸೂಚ್ಯಕವಾಗಿ ಮುಖ್ಯಮಂತ್ರಿಗೆ ತಿವಿದಿದ್ದಾರೆ.

ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್‌ ಕಾಲೇಜಿಗೆ ಆಕ್ಷೇಪವಿಲ್ಲ: ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್‌ ಕಾಲೇಜನ್ನು ಮಂಜೂರು ಮಾಡಿರುವ ಬಗ್ಗೆ ಡಿ.ಕೆ.ಶಿವಕುಮಾರ್‌ ತಮಗೆ ಆಕ್ಷೇಪವೇನಿಲ್ಲ ಎಂದು ಪುನರುಚ್ಚರಿಸಿದ್ದಾರೆ. ಎಷ್ಟೇ ಸಂಖ್ಯೆಯ ಮೆಡಿಕಲ್‌ ಕಾಲೇಜುಗಳನ್ನು ಮಂಜೂರು ಮಾಡುವುದು ರಾಜ್ಯ ಸರ್ಕಾರಕ್ಕೆ ಬಿಟ್ಟಿದ್ದು, ಆದರೆ ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್‌ ಕಾಲೇಜನ್ನು ರದ್ದು ಮಾಡಿರುವುದರ ಬಗ್ಗೆ ತಮ್ಮ ಆಕ್ಷೇಪವಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಎಸ್‌ವೈ ಒಪ್ಪಿಗೆ ಸೂಚಿಸಿದ್ದರು: ಜೆಡಿಎಸ್‌ -ಕಾಂಗ್ರೆಸ್‌ ಮೈತ್ರಿ ಸರ್ಕಾರ 2018-19ರ ಆಯವ್ಯಯದಲ್ಲಿ ಕನಕಪುರದಲ್ಲಿ ಮೆಡಿಕಲ್‌ ಕಾಲೇಜು ಸ್ಥಾಪಿಸುದಾಗಿ ಘೋಷಣೆ ಮಾಡಿತ್ತು. ನಂಜುಂಡಪ್ಪ ವರದಿಯಲ್ಲಿ ಅತಿ ಹಿಂದುಳಿದ ತಾಲೂಕು ಎಂದು ಗುರುತಿಸಿಕೊಂಡಿರುವ ಕನಕಪುರದಲ್ಲಿ ಆರೋಗ್ಯ ಸೇವೆ ಬಲಗೊಳಿಸುವ ಹಿನ್ನೆಲೆಯಲ್ಲಿ ಮೆಡಿಕಲ್‌ ಕಾಲೇಜು ಮಂಜೂರಾಗಿತ್ತು. ಅಲ್ಲದೆ ಬೆಂಗಳೂರಿಗೆ ಸಮೀಪ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದು, ಗ್ರಾಮೀಣ ಭಾಗದ ಯುವಕ, ಯುವತಿಯರಿಗೆ ವೈದ್ಯಕೀಯ ಶಿಕ್ಷಣ ನೀಡುವುದು ಹೀಗೆ ಅನೇಕ ವಿಚಾರಗಳನ್ನು ಪರಿಗಣಿಸಿ ಕನಕಪುರಕ್ಕೆ ಮೆಡಿಕಲ್‌ ಕಾಲೇಜನ್ನು ಮಂಜೂರು ಮಡಲಾಗಿತ್ತು. ಆಯವ್ಯಯ ಸಭೆಯ ಚರ್ಚೆಗಳಲ್ಲಿ ಆಗ ವಿರೋಧ ಪಕ್ಷದ ನಾಯಕರಾಗಿದ್ದ ಬಿ.ಎಸ್‌.ಯಡಿಯೂರಪ್ಪ ಅವರು ಸಹ ಮೆಡಿಕಲ್‌ ಕಾಲೇಜಿಗೆ ಒಪ್ಪಿಗೆ ಸೂಚಿಸಿದ್ದರು ಎಂದು ಡಿ.ಕೆ.ಶಿವಕುಮಾರ್‌ ಪತ್ರದಲ್ಲಿ ತಿಳಿಸಿದ್ದಾರೆ.

Advertisement

ಭೂಮಿ ಗುರುತಿಸಲಾಗಿತ್ತು: ಕ್ಯಾಬಿನೆಟ್‌ನಲ್ಲಿ ಅನುಮತಿ ಸಿಕ್ಕನಂತರ 13.12.2018ರಂದು ಯೋಜನೆ, ಆರ್ಥಿಕ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಗಳು ಒಪ್ಪಿಗೆ ಸೂಚಿಸಿದವು. ನಂತರ ಕನಕಪುರ ತಾಲೂಕಿನ ರಾಯಸಂದ ಗ್ರಾಮದಲ್ಲಿ 25 ಎಕರೆ ಭೂಮಿ ಗುರುತಿಸಲಾಗಿತ್ತು. ಭೂಮಿ ಹಸ್ತಾಂತರಕ್ಕೆ ಕೆಎಚ್‌ಬಿ ಇಲಾಖೆ ಕೂಡ ಅಗತ್ಯ ಕ್ರಮ ಕೈಗೊಂಡಿತ್ತು. ಆದರೆ ನೀವು (ಯಡಿಯೂರಪ್ಪ) ಮುಖ್ಯಮಂತ್ರಿಗಳಾದ ನಂತರ ಏಕ ವ್ಯಕ್ತಿ ಕ್ಯಾಬಿನೆಟ್‌ ಸದಸ್ಯನಾಗಿ ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್‌ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ವರ್ಗಾಯಿಸಿದ್ದೀರಿ ಎಂದು ಲೇವಡಿ ಮಾಡಿದ್ಧಾರೆ.

ಬಸವಣ್ಣನ ಅನಯಾಯಿ ಬಗ್ಗೆ ನಂಬಿಕೆ ಇತ್ತು!: ಧ್ವೇಷ ರಾಜಕರಣ ಮಾಡೋಲ್ಲ ಅಂತ ಅಧಿಕಾರ ಸ್ವೀಕರಿಸಿದ ನೀವು ಹೇಳಿಕೆಗಳಿಗೆ ಬದ್ಧರಾಗಿರುವ ಬಗ್ಗೆ ವಿಶ್ವಾಸವಿತ್ತು. ಆದರೆ ರಾಜ್ಯದಲ್ಲಿ ಮಂಜೂರಾಗಿದ್ದ ಯಾವ ಮೆಡಿಕಲ್‌ ಕಾಲೇಜನ್ನು ರದ್ದು ಪಡಿಸದೆ, ಕನಕಪುರಕ್ಕೆ ಮಂಜೂರು ಆಗಿದ್ದ ಕಾಲೇಜನ್ನು ರದ್ದು ಮಾಡಿದ್ದು ತಿಳಿದಾಗ ತಮಗೆ ತೀವ್ರ ನಿರಾಶೆ ಮೂಡಿಸಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಭೂಮಿ ಪೂಜೆ ದಿನ ನಿಗದಿಗೆ ಮನವಿ ಮಾಗಡಿಯಲ್ಲಿ ಕೆಲವು ವಾರಗಳ ಹಿಂದೆ ಶ್ರೀ ಶಿವಕುಮಾರಸ್ವಾಮಿ ಅವರ ಪ್ರತಿಮೆ ಸ್ಥಾಪನೆಯ ಭೂಮಿ ಪೂಜೆಗೆ ಆಗಮಿಸಿದ್ದ ವೇಳೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕನಕಪುರದಲ್ಲಿ ಮೆಡಿಕಲ್‌ ಕಾಲೇಜು
ಸ್ಥಾಪಿಸುವುದಾಗಿ ನೀಡಿದ್ದ ಹೇಳಿಕೆಯನ್ನು ತಮ್ಮ ಪತ್ರದಲ್ಲಿ ಉಲ್ಲೇಖೀಸಿರುವ ಡಿ.ಕೆ.ಶಿವಕುಮಾರ್‌ ಭೂಮಿ ಪೂಜೆಗೆ ದಿನಾಂಕ ನಿಗದಿಪಡಿಸುವಂತೆ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next