Advertisement
ಬೆಳ್ಳಿ ಹಬ್ಬದ ಆಚರಣೆಯಲ್ಲಿರುವ ಜಾನಪದ ಲೋಕ ಜನ್ಮತಳೆದಿದ್ದು, ಬೆಳೆದಿದ್ದು ರೋಚಕ! ಸಿಲ್ಕ್ ಸಿಟಿ ಬಿರುದಿನೊಂದಿಗೆ ಸಪ್ತಗಿರಿಗಳ ನಡುವೆ ಅರ್ಕಾವತಿ ನದಿಯ ದಂಡೆಯಲ್ಲಿ ಅರಳಿದ ರಾಮನಗರದಲ್ಲೇ ಜಾನಪದ ಲೋಕ ಜನ್ಮ ತಳೆದಿದ್ದು, ಈ ನೆಲದ ಪುಣ್ಯ! ಹಸಿರಿನ ಸಿರಿಯ ನಡುವೆ ಜಾನಪದ ಲೋಕ ಇಂದು ವಿವಿಧ ರಾಜ್ಯಗಳ ಜನರನ್ನು ಆಕರ್ಷಿಸುತ್ತಿದೆ. ಜಾನಪದ ಲೋಕ ಎಚ್.ಎಲ್.ನಾಗೇಗೌಡರ ಕನಸಿನ ಕೂಸು ನಿಜ. ಆದರೆ ಇವರ ಕನಸಿಗೆ ಸಹಕಾರ ನೀಡಿದ್ದು, ಅನೇಕ ಮನಸ್ಸುಗಳು. ಲೋಕದ ಹಿರಿಯ, ಕಿರಿಯ ಸಿಬ್ಬಂದಿ ಶ್ರಮದಿಂದಾಗಿ ಜಾನಪದ ಲೋಕ 25 ವರ್ಷಗಳ ಅಸ್ತಿತ್ವ ಪಡೆದುಕೊಂಡು ಇಂದು ಜಾನಪದ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಅನನ್ಯ ಕೊಡುಗೆ ನೀಡುತ್ತಿದೆ.
Related Articles
Advertisement
ನಾಗೇಗೌಡ ಕಲಾ ಶಾಲೆಯಲ್ಲಿ ಕಲಾ ತರಬೇತಿ ನೀಡಲಾಗುತ್ತದೆ. ಈಗಾಗಲೆ 500ಕ್ಕೂ ಹೆಚ್ಚು ಮಂದಿ ಇಲ್ಲಿ ಜಾನಪದ ಹಾಡುಗಾರಿಕೆ ಕಲಿತಿದ್ದಾರೆ. ಎಳೆಯರು ಸೇರಿದಂತೆ ನೂರಾರು ಮಂದಿ ಇಲ್ಲಿ ಜಾನಪದ ಕುಣಿತಗಳ ತರಬೇತಿ ಪಡೆದುಕೊಂಡಿದ್ದಾರೆ. ಜಾನಪದ ಮಹಾವಿದ್ಯಾಲಯದವತಿಯಿಂದ ಇಲ್ಲಿ ಜಾನಪದ ಸರ್ಟಿಫಿಕೇಟ್ ಮತ್ತು ಜಾನಪದ ಡಿಪ್ಲೋಮಾ ಕೋರ್ಸುಗಳೀಗೆ ಶನಿವಾರ ಮತ್ತು ಭಾನುವಾರ ತರಬೇತಿ ತರಗತಿಗಳು ಇಲ್ಲಿ ನಡೆಯುತ್ತಿವೆ.
ವೀಕೆಂಡ್ ಕಾರ್ಯಕ್ರಗಳು: ಇಲ್ಲಿ ಪ್ರತಿ ಭಾನುವಾರ ಜಾನಪದ ಕಲೆಗಳ ಪ್ರದರ್ಶನ ನಡೆಯುತ್ತದೆ. ಪ್ರತಿ ತಿಂಗಳ ಎರಡನೇ ಶನಿವಾರ ಲೋಕಸಿರಿ ಕಾರ್ಯ ಕ್ರಮದಲ್ಲಿ ಜಾನಪದ ಕಲೆಗಳ ಸಾಧಕರನ್ನು ಕರೆಸಿ ಅವರನ್ನು ಸನ್ಮಾನಿಸಿ, ಅವರಿಂದ ಕಲೆಗಳ ಪ್ರದರ್ಶನ ಮತ್ತು ಸಾರ್ವಜನಿಕರೊಂದಿಗೆ ಸಂವಾದ ಕಾರ್ಯ ಕ್ರಮ ಆಯೋಜಿಸಲಾಗುತ್ತಿದೆ. ಜಾನಪದ ಲೋಕದಲ್ಲಿರುವ ಹಲವಾರು ಆಕರ್ಷಣೆಗಳ ಪೈಕಿ ಇಲ್ಲಿನ ಬಯಲು ರಂಗಮಂದಿರಹೆಚ್ಚು ಗಮನ ಸೆಳೆಯುತ್ತದೆ. ಗ್ರೀಕ್ ಶೈಲಿಯಲ್ಲಿರುವ ಮಂದಿರದಲ್ಲಿ ಸುಮಾರು 1,000 ಮಂದಿ ಕುಳಿತು ಕೊಳ್ಳಬಹುದು. ಚಿಂತನ-ಮಂಥನಗಳ ವೇದಿಕೆ:ಜಾನಪದ ಲೋಕ ಕೇವಲ ಕಲಾವಿದರ ತವರು ಮಾತ್ರವಲ್ಲ. ಅದು ಜಾನಪದ ಸಂಶೋಧಕರಿಗೆ ಅಧ್ಯಯನ ಕೇಂದ್ರವೂ ಆಗಿದೆ. ಚಿಂತನ-ಮಂಥನಗಳ ವೇದಿಕೆಯಾಗಿದೆ. ರಾಜ್ಯ, ದೇಶದ ಪ್ರವಾಸಿಗಳ ಗಮನ ಸೆಳೆಯಲಾರಂಭಿಸಿದೆ. 25ರ ಹರೆಯದ ಈ ಲೋಕ ವಿಸ್ಮಯಗಳ ಆಗರ. ಅಧುನಿಕತೆಯ ಹೊಡೆತದಿಂದ ನೇಪಥ್ಯಕ್ಕೆ ಸರಿಯುತ್ತಿರುವ ಗ್ರಾಮೀಣ ಸೊಗಡನ್ನು ತನ್ನ ಒಡಲಲ್ಲಿ ಇಟ್ಟು ಕೊಂಡು ಬೆಳೆಸುತ್ತಿದೆ. ಪ್ರವಾಸಿಗರ ಪ್ರಮುಖ ತಾಣವಾಗಿ ರೂಪುಗೊಳ್ಳುತ್ತಿದೆ. 2020ರ ಜನವರಿ 1ರಂದು ಜಾನಪದ ಲೋಕದಲ್ಲಿ ಸುಮಾರು 1 ಲಕ್ಷ ರೂ. ಪ್ರವೇಶ ಶುಲ್ಕದಿಂದಲೇ ವಸೂಲಾಗಿದೆ. ಅಂದರೆ ಜಾನಪದ ಲೋಕದ ಜನಪ್ರಿಯತೆ ವಿಸ್ತಾರವಾಗಿದೆ ಅಂತಲೇ ಅರ್ಥ!. ಬೆಳ್ಳಿಹಬ್ಬ ಆಚರಿಸಿಕೊಳ್ಳುತ್ತಿರುವ ಜಾನಪದ ಲೋಕ ಜಿಲ್ಲೆಯ ಹೆಮ್ಮೆಯ ಪ್ರತೀಕವಾಗಿ ರೂಪುಗೊಂಡಿದೆ. ಸಿಲ್ಕ್, ಮಿಲ್ಕ್, ಮಾವು ಮತ್ತು ಇದೀಗ ಜಾನಪದ ಕಲೆಗಳ ತವರಾಗಿ ಜಿಲ್ಲೆಯ ಹೆಸರು ಮಾಡುತ್ತಿವೆ . ಎಚ್.ಎಲ್.ನಾಗೇಗೌಡರು ವರ್ಷಗಳ ಕಾಲ ರಾಜ್ಯದ ಮೂಲೆ ಮೂಲೆ ಸುತ್ತಿ ಜಾನಪದ ಗೀತೆ, ಸೋಬಾನೆ ಪದ, ಕಲೆಗಳ ಮೂಲ ಸ್ವರೂಪಗಳನ್ನು ಆಡಿಯೋ ಮತ್ತು ಚಿತ್ರಗಳ ಮೂಲಕ ಸಂಗ್ರಹಿಸಿದ್ದಾರೆ. ಇವೆಲ್ಲ ಜಾನಪದ ಲೋಕದಲ್ಲಿ ರಕ್ಷಣೆಯಲ್ಲಿವೆ. ಜಾನಪದ ಲೋಕ ಸದ್ಯ ಸುಂದರ ಮತ್ತು ಸಾಂಸ್ಕೃತಿಕ ಕೇಂದ್ರವಾಗಿ ಬೆಳೆಯುತ್ತಿದೆ.
●ಟಿ.ತಿಮ್ಮೇಗೌಡ, ಅಧ್ಯಕ್ಷರು, ಜಾನಪದ
ಲೋಕ ●ಬಿ.ವಿ.ಸೂರ್ಯಪ್ರಕಾಶ್