ಬದುಕನ್ನು ಯಾರು ಹೇಗೆ ಬೇಕಾದ್ರೂ ಕಟ್ಟಿಕೊಳ್ಳಬಹುದು ಎಂಬುದಕ್ಕೆ ಈ ವೃದ್ಧ ದಂಪತಿಯೇ ಸಾಕ್ಷಿ. ರಾಮನಗರ ಜಿಲ್ಲೆ, ಚನ್ನಪಟ್ಟಣ ತಾಲೂಕಿನ ಮಳೂರುಪಟ್ಟಣದ ಬೆಲವೇಗೌಡ್ರು, ಹೋಟೆಲ್ ಮೂಲಕವೇ ತಮ್ಮ ಬದುಕು ರೂಪಿಸಿಕೊಂಡಿದ್ದಾರೆ. ಮಂಡ್ಯ ನಗರದಲ್ಲಿ ಚಿಕ್ಕ ಹೋಟೆಲ್ ಮಾಡಿಕೊಂಡಿದ್ದ ಇವರು, ನಾಗಮಂಗಲದ ಶಾರದಮ್ಮ ಅವರನ್ನು ಮದುವೆಯಾದ ನಂತರ ಮಂಡ್ಯ ಬಿಟ್ಟು ಮಳೂರು ಪಟ್ಟಣಕ್ಕೆ ಬರುತ್ತಾರೆ. ಓದುಬರಹ ಇಲ್ಲದ ಇವರಿಗೆ, ಕೈಯಲ್ಲಿ ಕಾಸೂ ಇಲ್ಲದೆ, ಹಳ್ಳಿಯಲ್ಲಿ ಬದುಕು ಕಟ್ಟಿಕೊಳ್ಳುವುದು ಸ್ವಲ್ಪ ಕಷ್ಟವೇ ಆಗಿತ್ತು. ಆಗ ಗೊತ್ತಿರುವವರ ಬಳಿ ಭೋಗ್ಯಕ್ಕೆ ಸ್ವಲ್ಪ ಜಾಗ ತೆಗೆದುಕೊಂಡು ಅಲ್ಲಿ ಪುಟ್ಟದಾಗಿ ಗುಡಿಸಲು ಕಟ್ಟಿಕೊಂಡು ಹೋಟೆಲ್ ಆರಂಭಿಸಿದ್ದರು. ಅಡುಗೆ ಕಲೆಯನ್ನು ಮೊದಲೇ ತಿಳಿದಿದ್ದ ಗೌಡರು, ರುಚಿಯಾದ ತಿಂಡಿಗಳನ್ನು ಮಾಡಿ ಗ್ರಾಹಕರನ್ನು ಸೆಳೆದರು.
ಮುಂಜಾನೆಯಿಂದಲೇ ಬಿಸಿ ಇಡ್ಲಿ, ಬೆಲ್ಲದ ಟೀ ಮಾಡಿಕೊಡುತ್ತಿದ್ದರು. ನಂತರ ಇಡ್ಲಿ ಜೊತೆಗೆ ರೈಸ್‌ಬಾತು, ಮಧ್ಯಾಹ್ನದ ಊಟ, ಸಂಜೆಗೆ ಬೋಂಡಾ, ಬಜ್ಜಿ ಮಾಡಲು ಆರಂಭಿಸಿದರು. ಹೊರ ಊರಿನಿಂದ ತಿಂಡಿಗೆ ಆರ್ಡರ್ ಬಂದರೆ, ಎರಡು ಮೂರು ಕಿ.ಮೀ. ಇದ್ದರೂ ಶಾರದಮ್ಮನೇ ಬುತ್ತಿಕಟ್ಟಿಕೊಂಡು ಹೋಗಿ ಕೊಟ್ಟು ಬರುತ್ತಿದ್ದರು. ತಿಂಡಿ ದರವೂ ಕಡಿಮೆ ಇದ್ದ ಕಾರಣ, ಲಾಭವೂ ಕಡಿಮೆ ಇತ್ತು.
ಅದರಲ್ಲೇ ನಾಲ್ವರು ಮಕ್ಕಳನ್ನು ಓದಿಸಿ ಮದುವೆ ಮಾಡಿ, ಮನೆಯನ್ನೂ ಕಟ್ಟಿಕೊಂಡಿರುವ ಈ ವೃದ್ಧ ದಂಪತಿ, ಈಗಲೂ ತಮ್ಮ ಕಾಯಕ ಮಾತ್ರ ಬಿಟ್ಟಿಲ್ಲ. ಊರಲ್ಲಿ ಐದಾರು ಹೋಟೆಲ್ ಪ್ರಾರಂಭವಾಗಿದ್ರೂ ಬೆಲವೇಗೌಡ್ರು ಮಾತ್ರ 45 ವರ್ಷಗಳ ಹಿಂದೆ ಇದ್ದ ಹೋಟೆಲ್, ತಿಂಡಿಯ ರುಚಿಯನ್ನು ಹಾಗೆ ಉಳಿಸಿಕೊಂಡಿದ್ದಾರೆ. ಇಲ್ಲಿ ತಿಂಡಿ ತಿಂದು ಓದಿ ಬೆಳೆದಂಥವರು ಈಗಲೂ ಬೆಲವೇಗೌಡ್ರು ತೋರುತ್ತಿದ್ದ ಪ್ರೀತಿ, ತಿಂಡಿಯನ್ನು ಮರೆತಿಲ್ಲ. ಊರಿಗೆ ಬಂದಾಗ ಈ ಹೋಟೆಲ್ನ ಇಡ್ಲಿ, ಬೆಲ್ಲದ ಟೀ ಸೇವಿಸುವುದನ್ನೂ ಮರೆಯುವುದಿಲ್ಲ. ವಯಸ್ಸಾಗಿದೆ, ನೀವು ಹೋಟೆಲ್ ನಡೆಸುವುದು ಬೇಡ ಎಂದು ಮಕ್ಕಳು ಹೇಳಿದರೂ, ತಮಗೆ ಬದುಕುಕೊಟ್ಟ ಹೋಟೆಲ್ ಬಿಟ್ಟಿರಲಾಗದ ಬೆಲವೇಗೌಡ್ರು, ಈಗಲೂ ಹೋಟೆಲ್ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ತಿಂಡಿಯನ್ನು ಈಗಲೂ ಕಟ್ಟಿಗೆ ಒಲೆಯಲ್ಲೇ ಬೇಯಿಸುತ್ತಾರೆ. ಒಂದು ತಟ್ಟೆ ಇಡ್ಲಿಯ ದರ ಕೇವಲ 5 ರೂ.. 13 ರೂ. ಕೊಟ್ಟು ಎರಡು ತಟ್ಟೆ ಇಡ್ಲಿ, ಒಂದು ಬೋಂಡಾ ತಿಂದ್ರೆ ಅವತ್ತಿನ ಬೆಳಗಿನ ತಿಂಡಿ ಮುಗಿದಂತೆ ಲೆಕ್ಕ.
ದಾರಿ ಕೇಳಿ
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕು ಕೇಂದ್ರದಿಂದ ಬೆಂಗಳೂರು -ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೈಸೂರು ಕಡೆಗೆ 2 ಕಿ.ಮೀ. ಸಾಗಿದರೆ ಚಿಕ್ಕ ಮಳೂರು ಸಿಗುತ್ತದೆ. ಅಲ್ಲಿ ಕೂಡ್ಲೂರು ರಸ್ತೆಗೆ ತಿರುಗಿ 6 ಕಿ.ಮೀ. ಸಾಗಿದರೆ ಮಳೂರು ಪಟ್ಟಣ ಸಿಗುತ್ತದೆ. ಹೋಟೆಲ್ಗೆ ನಾಮಫಲಕ ಇಲ್ಲದ ಕಾರಣ, ತೇರಿನ ಬೀದಿಗೆ ಬಂದು ಬೆಲವಣ್ಣ ಹೋಟೆಲ್ ಎಲ್ಲಿ ಅಂದ್ರೆ ತೋರಿಸುತ್ತಾರೆ.
ವಿಶೇಷ ತಿಂಡಿ
ತಟ್ಟೆ ಇಡ್ಲಿ(1ಕ್ಕೆ 5 ರೂ.), ಬೋಂಡಾ (1ಕ್ಕೆ 3 ರೂ.),
ಟೀ 3 ರೂ. ಮಾತ್ರ. ಕೆಂಪ್ ಚಟ್ನಿ ಮಾಡ್ತಾರೆ.
ಹೋಟೆಲ್‌ನ ಸಮಯ: ಬೆಳಗ್ಗೆ 7 ರಿಂದ 10 ಗಂಟೆಯವರೆಗೆ ತಿಂಡಿ, ಸಂಜೆ 3
ಗಂಟೆವರೆಗೂ ಬೋಂಡಾ -ಟೀ ಇರುತ್ತೆ. ವಾರದ ರಜೆ ಇಲ್ಲ.
ಹೋಟೆಲ್ ವಿಳಾಸ: ಮಳೂರು ಪಟ್ಟಣ,ಚನ್ನಪಟ್ಟಣ ತಾಲ್ಲೂಕು,ರಾಮನಗರ
ಭೋಗೇಶ ಆರ್. ಮೇಲುಕುಂಟೆ
ಫೋಟೋ ಕೃಪೆ: ಶ್ರುತಿ ಪಿ. ಗೌಡ