Advertisement

ರಾಮನಗರ: 4ವರ್ಷದಲ್ಲಿ 60 ನವಜಾತ ಶಿಶುಗಳ ಸಾವು

06:06 PM Mar 01, 2024 | Team Udayavani |

ಉದಯವಾಣಿ ಸಮಾಚಾರ
ರಾಮನಗರ: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ರಾಮನಗರ ಜಿಲ್ಲೆಯಲ್ಲಿ 60 ನವಜಾತ ಶಿಶುಗಳು ಸಾವಿಗೀಡಾಗಿವೆ.
ಹೌದು.., ಜಿಲ್ಲೆಯಲ್ಲಿ ಸಾವಿಗೀಡಾಗಿರುವ ನವಜಾತ ಶಿಶುಗಳ ಕುರಿತು ಸದನದಲ್ಲಿ ಆರೋಗ್ಯ ಸಚಿವರು ನೀಡಿರುವ ಮಾಹಿತಿಯಲ್ಲೇ ಈ ಸಂಗತಿ ಬಹಿರಂಗಗೊಂಡಿದ್ದು, ನವಜಾತ ಶಿಶುಗಳ ಸಾವಿನ ಪ್ರಮಾಣ ತಗ್ಗಿಸಲು ಆರೋಗ್ಯ ಇಲಾಖೆ ಸಾಕಷ್ಟು ಕ್ರಮ ಕೈಗೊಳ್ಳುತ್ತಿರುವ ನಡುಗೆಯೂ ನವಜಾತ ಶಿಶುಗಳ ಸಾವು ಸಂಭವಿಸುತ್ತಲೇ ಇರುವುದು ಆತಂಕಕಾರಿ ಸಂಗತಿಯೇ ಸರಿ.

Advertisement

ಸಾವಿಗೆ ಕಾರಣವೇನು?:ಅವಧಿ ಪೂರ್ವ ಜನನ, ತಾಯಿ ಅಪೌಷ್ಟಿಕತೆಯಿಂದ ಬಳಲುತ್ತಿರುವುದು, ಅತಿಸಾರ ಭೇದಿ, ಮಗು ಕಡಿಮೆ ತೂಕ ಹೊಂದಿರುವುದು, ಜನನದ ಸಮಯಲ್ಲಿ ಉಸಿರುಗಟ್ಟುವುದು, ನಿಮೋನಿಯಾ, ಸೆಪ್ಪೀಸ್‌ ಮತ್ತು ನವಜಾತ ಶಿಶುಗಳ ಕಾಮಾಲೆ ಹುಟ್ಟುವ ಸಮಯದಲ್ಲಿ ಮಕ್ಕಳು ಸಾವಿಗೀಡಾಗುವುದುಕ್ಕೆ ಕಾರಣವಾಗಿದೆ. ತೀವ್ರತಮ ಕಾಯಿಲೆಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ದೊರೆಯದೇ ಇರುವುದು ನವಜಾತ ಶಿಶುಗಳ ಸಾವಿಗೆ ಕಾರಣವಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ಮಾಹಿತಿ ನೀಡುತ್ತವೆ.

ಮೌಡ್ಯವೂ ಕಾರಣ: ವೈದ್ಯರ ಮಾಹಿತಿಯ ಪ್ರಕಾರ ಕೆಲ ನವಜಾತ ಶಿಶುವಿನ ಸಾವಿನ ಪ್ರಕರಣದಲ್ಲಿ ಕುಟುಂಬದವರ ಮೌಡ್ಯವೂ ಕಾರಣ ವಾಗಿದ್ದು, ಬಾಣಂತಿ ಮಗು ಇರುವ ಮನೆಯಲ್ಲಿ ಸ್ವಚ್ಛತೆಯನ್ನು ಕಾಪಾಡದೆ ಇರುವುದು. ಇನ್ನು ಮಕ್ಕಳಿಗೆ ಹಾಲು ಕುಡಿಸಿದ ಬಳಿಕ ಸರಿಯಾಗಿ ತೇಗಿಸಿ ಮಲಗಿಸದೇ ಇರುವು ದರಿಂದ ಮಕ್ಕಳು ಉಸಿರು ಕಟ್ಟಿಸಾವಿಗೀಡಾಗಿರುವ ಪ್ರಕರಣಗಳು ಇವೆ ಎಂಬುದು ಆರೋಗ್ಯ ಇಲಾಖೆ  ಸಿಬ್ಬಂದಿಯ ಮಾಹಿತಿಯಾಗಿದೆ.

ಅಪೌಷ್ಟಿಕತೆ ಸೇರಿದಂತೆ ಆರೋಗ್ಯ ಗಂಡಾಂತರ ಗಳನ್ನು ಎದುರಿಸುತ್ತಿರುವ ನವಜಾತ ಶಿಶುಗಳ ಆರೈಕೆಗೆ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಪೌಷ್ಟಿಕ ಪುನಶ್ಚೇತನ ಘಟಕಗಳನ್ನು ಆರೋಗ್ಯ ಇಲಾಖೆ ಸ್ಥಾಪಿಸಿದೆಯಾದರೂ, ಇದನ್ನು ಬಳಕೆ ಮಾಡಿಕೊಳ್ಳಲು ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗದೆ ಮೌಡ್ಯಕ್ಕೆ ಶರಣಾಗುತ್ತಿರುವುದು ಮಕ್ಕಳ ಸಾವಿನ ಪ್ರಕರಣ ಮರುಕಳಿಸಲು ಮುಖ್ಯಕಾರಣವಾಗಿದೆ.

ಜಾಗೃತಿ ಮೂಡಿಸುವ ಕೆಲಸವಾಗಲಿ: ನವಜಾತ ಶಿಶುವಿನ ಸಾವಿನ ಪ್ರಮಾಣ ಗ್ರಾಮೀಣ ಪ್ರದೇಶ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸುತ್ತಿದ್ದು, ಆರೋಗ್ಯ ಇಲಾಖೆ ಗ್ರಾಮೀಣ ಭಾಗದಲ್ಲಿ ಇಂತಹ ಕುಟುಂಬಗಳಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕಿದೆ. ಮಗುವಿನ ಸುರಕ್ಷಿತ ಜನನಕ್ಕಾಗಿ ಬಡ ಕುಟುಂಬಗಳ
ಗರ್ಭಿಣಿಯರನ್ನು ಗುರುತಿಸಿ ಅವರಿಗೆ ಸೇವೆ ಆರೋಗ್ಯ ಸೇವೆ ನೀಡುವ ಕೆಲಸವನ್ನು ಮಾಡಬೇಕಿದ್ದು, ಆರ್ಥಿಕವಾಗಿ ಅಶಕ್ತರಾಗಿರುವ ಕುಟುಂಬಗಳು ವೈದ್ಯಕೀಯ ಸೇವೆಯನ್ನು ಪಡೆದುಕೊಳ್ಳಲು ಸಾಧ್ಯ ವಿಲ್ಲದ ಕಾರಣ ಜನನದ ವೇಳೆ ಮಕ್ಕಳು ಸಾವಿಗೀಡಾಗುತ್ತಿವೆ.

Advertisement

ಮಕ್ಕಳ ವೈದ್ಯರ ಕೊರತೆಯೂ ಕಾರಣ;

ರಾಮನಗರ ಜಿಲ್ಲೆಯಲ್ಲಿ ಮಕ್ಕಳ ವೈದ್ಯರ ಕೊರತೆ ಕಾಡುತ್ತಿರುವುದು ನವಜಾತ ಶಿಶುಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಸಾವಿಗೀಡಾಗುವುದಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ 12 ವರ್ಷ ದೊಳಗಿನ ಮಕ್ಕಳ ಸಂಖ್ಯೆ 2 ಲಕ್ಷದಷ್ಟಿದ್ದು, ಜಿಲ್ಲೆಯ 5 ತಾಲೂಕಿನಲ್ಲಿ ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಕ್ಕಳ ವೈದ್ಯರ ಸಂಖ್ಯೆ 13 ಮಾತ್ರ. ಇಷ್ಟೋಂದು ಮಕ್ಕಳಿಗೆ ಬೆರಳೇಣಿಕೆ ವೈದ್ಯರು ಚಿಕಿತ್ಸೆ ನೀಡು ವುದು ಸವಾಲಿನ ಕೆಲಸವಾಗಿದೆ. ಬಹುತೇಕ ಮಕ್ಕಳ ವೈದ್ಯರು ನಿಗದಿತ ಅವಧಿಯಲ್ಲಿ ಮಾತ್ರ ಲಭ್ಯವಿದ್ದು, ತುರ್ತು ಸಂದರ್ಭದಲ್ಲಿ ಮಕ್ಕಳ ವೈದ್ಯರ ಕೊರತೆ ಸಾಕಷ್ಟಿದೆ.

ನವಜಾತ ಶಿಶುಗಳ ಆರೋಗ್ಯದ ಬಗ್ಗೆ ನಮ್ಮ ಇಲಾಖೆ ಸಾಕಷ್ಟು ನಿಗಾ ವಹಿಸಿದೆ. ಪೋಷಕರ ಮೌಡ್ಯದಿಂದ ಕೆಲವೊಂದು ಪ್ರಕರಣಗಳು ಸಂಭವಿಸಿವೆ. ಒಂದು ವರ್ಷದ ಒಳಗಿನ ಮಕ್ಕಳ ಆರೋಗ್ಯದ ಬಗ್ಗೆ ಇಲಾಖೆ ವಿಶೇಷ ಕಾಳಜಿ ವಹಿಸುತ್ತದೆ. ಯಾವುದೇ ನವಜಾತ ಶಿಶುಗಳ ಆರೋಗ್ಯದಲ್ಲಿ ಸಮಸ್ಯೆ ಉಂಟಾದಲ್ಲಿ ಸ್ಥಳೀಯವಾಗಿ ಆಶಾಕಾರ್ಯ ಕರ್ತೆಯರು, ಇಲ್ಲಾ ಸಮೀಪದ ಸರ್ಕಾರಿ ಆಸ್ಪತ್ರೆಯನ್ನು ಸಂಪರ್ಕಿಸಿದರೆ, ನಮ್ಮ ಇಲಾಖೆಯಿಂದಲೇ ಉಚಿತ ಆ್ಯಂಬುಲೆನ್ಸ್‌, ಸಿಬ್ಬಂದಿಯನ್ನು ಕಳುಹಿಸಿ ಉನ್ನತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕರು ಈ ಸೇವೆಯನ್ನು ಸದ್ಬಳಕೆ
ಮಾಡಿಕೊಳ್ಳಬೇಕು.
●ಡಾ.ರಾಜು,
ತಾ.ಆರೋಗ್ಯಾಧಿಕಾರಿ,ಚನ್ನಪಟ್ಟಣ

*ಸು.ನಾ.ನಂದಕುಮಾರ್

Advertisement

Udayavani is now on Telegram. Click here to join our channel and stay updated with the latest news.

Next