ರಾಮನಗರ: ಇಬ್ಬರು ಮಕ್ಕಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು, ಸೋಮವಾರ ಆರೋಪಿಗಳನ್ನು ಬಂಧಿಸಿ, ಅವರ ಸಮ್ಮುಖದಲ್ಲಿ ಸಮಾಧಿಯಲ್ಲಿ ಹೂತಿದ್ದ ಮಕ್ಕಳ ಶವಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದರು.
ನಗರ ವೃತ್ತ ನಿರೀಕ್ಷಕ ಕೃಷ್ಣ ನೇತೃತ್ವದಲ್ಲಿ ತನಿಖೆ ಕೈಗೊಂಡಿರುವ ಪೊಲೀಸರು, ಸ್ಮಶಾನದಲ್ಲಿ ಅಗೆದು ಮಕ್ಕಳ ಶವಗಳನ್ನು ಹೊರ ತೆಗೆದರು. ಬಳಿಕ ರಾಮನಗರ ಜಿಲ್ಲಾಸ್ಪತ್ರೆಯ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ತಮ್ಮ ಅನೈತಿಕ ಸಂಬಂಧಕ್ಕೆ ಮಕ್ಕಳು ಅಡ್ಡಿಯಾಗುತ್ತವೆ ಎಂಬ ಕಾರಣಕ್ಕೆ ತನ್ನ ಇಬ್ಬರು ಮಕ್ಕಳನ್ನು ತಾಯಿ ಸ್ವೀಟಿ ಹಾಗೂ ಆಕೆಯ ಪ್ರಿಯಕರ ಫ್ರಾನ್ಸಿಸ್ ಸೇರಿ ಕೊಲೆಗೈದಿದ್ದರು. 2 ವರ್ಷದ ಗಂಡುಮಗುವನ್ನು ಉಸಿರು ಗಟ್ಟಿಸಿ ಸಾಯಿಸಿದ್ದರೆ, 11 ತಿಂಗಳ ಮಗುವನ್ನು ಗೋಡೆಗೆ ಹೊಡೆದು ಕೊಂದಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ಎ.ಕೆ.ಕಾಲೋನಿ ನಿವಾಸಿಯಾಗಿದ್ದ ಸ್ವೀಟಿ ಮನೆಕೆಲಸಕ್ಕೆ ಹೋಗುತ್ತಿದ್ದಳು. ಬೆಂಗಳೂರಿನ ನಿವಾಸಿಯಾಗಿರುವ ಫ್ರಾನ್ಸಿಸ್ ಅನ್ನು ಪ್ರೀತಿಸುತ್ತಿದ್ದಳು. ಈ ನಡುವೆ ತನ್ನ ಗಂಡದ ಎಟಿಎಂ ಕಾರ್ಡ್ ಅನ್ನು ತನ್ನ ಪ್ರಿಯಕರನಿಗೆ ನೀಡಿದ್ದಳು. ಈಕೆಯ ಪತಿಯ ಬ್ಯಾಂಕ್‌ಖಾತೆಯಲ್ಲಿ 2 ಲಕ್ಷ ರೂ. ಹಣ ಇತ್ತು. ಈ ಹಣವನ್ನು ಫ್ರಾನ್ಸಿಸ್ ಮತ್ತು ಸ್ವೀಟಿ ಬಳಸಿಕೊಂಡಿ ದ್ದರು. ಆಗಸ್ಟ್‌ನಲ್ಲಿ ತನ್ನ ಮಕ್ಕಳೊಂದಿಗೆ ಮನೆಬಿಟ್ಟು ಹೋಗಿದ್ದ ಸ್ವೀಟಿ, ಫ್ರಾನ್ಸಿಸ್ ಜೊತೆ ರಾಮನಗರದಲ್ಲಿ ಒಂದೂವರೆ ತಿಂಗಳು ವಾಸವಿದ್ದಳು. ಬಳಿಕ ಪತಿಯ ಮನೆಗೆ ಹಿಂದಿರುಗಿದ್ದಳು. ಮತ್ತೆ ಸೆ.15 ರಂದು ಪತ್ನಿ ನಾಪತ್ತೆಯಾಗಿದ್ದಳು. ಈ ಸಂಬಂಧ ಡಿ.ಕೆ.ಹಳ್ಳಿ ಠಾಣೆಯಲ್ಲಿ ಈಕೆಯ ಪತಿ ದೂರು ದಾಖಲಿಸಿದ್ದರು.
ಫೋನ್‌ಪೇ ನಂಬರ್ ಕೊಟ್ಟ ಸುಳಿವು:
ರಾಮನಗರದ ಗೀತಾಮಂದಿರ ಬಡಾ ವಣೆಯ ಸಮೀಪ ಇರುವ ಸ್ಮಶಾನದಲ್ಲಿ ಮಕ್ಕಳನ್ನು ಹೂತಿದ್ದ ಆರೋಪಿಗಳು ಸ್ಮಶಾನದ ಕಾವಲುಗಾರನಿಗೆ ಫೋನ್‌ಪೇ ಮೂಲಕ ಹಣ ಪಾವತಿಸಿದ್ದರು. ಒಂದು ವಾರದ ಅಂತರದಲ್ಲಿ ಎರಡು ಮಕ್ಕಳು ಮೃತಪಟ್ಟಿವೆ ಎಂದು ಅಂತ್ಯಸಂಸ್ಕಾರ ಮಾಡಿದ್ದರಿಂದ ಅನುಮಾನ ಗೊಂಡ ಸ್ಮಶಾನದ ಕಾವಲುಗಾರ ಐಜೂರು ಠಾಣೆ ಪೊಲೀಸರಿಗೆೆ ಮಾಹಿತಿ ನೀಡಿದ್ದನು. ಈ ಸಮಯದಲ್ಲಿ ತನಗೆ ಫೋನ್ ಪೇ ಮಾಡಿದ್ದ ಮೊಬೈಲ್ ನಂಬರ್ ಅನ್ನು ಸಹ ಪೊಲೀಸರಿಗೆ ನೀಡಿದ್ದ. ಈ ಮೊಬೈಲ್ ಫೋನ್ ಆಧರಿಸಿ, ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಮಕ್ಕಳನ್ನು ಸ್ಮಶಾನದಲ್ಲಿ ಹೂತಿದ್ದ ಆರೋಪಿಗಳು ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದರು.