Advertisement

ಜಗತ್ತು ಕಂಡ ಶ್ರೇಷ್ಠ ಅಧ್ಯಾತ್ಮ ಗುರು ರಮಣ ಮಹರ್ಷಿ

10:11 AM Jan 07, 2020 | mahesh |

ಬದುಕಿಗೆ ಬೇಕಾದ ಬಹುಮುಖ್ಯ ಬೋಧನೆ ಏನು ಎಂದು ಎಲ್ಲ ಮಹರ್ಷಿಗಳನ್ನು, ಗ್ರಂಥಗಳನ್ನು, ಸಾಧಕರನ್ನು ಕೇಳಿದರೆ ಸಿಗುವ ಒಂದೇ ಸಾರವೆಂದರೆ, ನಿನ್ನನ್ನು ನೀನು ತಿಳಿದುಕೋ ಎನ್ನುವುದು. ಇದರರ್ಥ ನಮ್ಮ ಸಾಮರ್ಥ್ಯ ಮತ್ತು ನಾವು ಬಂದ ಉದ್ದೇಶ ಎರಡೂ ಅರ್ಥವಾದರೆ ನಮ್ಮ ಬದುಕಿನ ಬಗೆಯೂ ಬದಲಾಗುತ್ತದೆ ಎಂಬುದು ಇದರ ತಥ್ಯ. ಶ್ರೀ ರಮಣ ಮಹರ್ಷಿಗಳೂ ಇದನ್ನೇ ಪ್ರತಿಪಾದಿಸಿದ್ದು.

Advertisement

ಭಾರತ ದೇಶದಂತಹ ಪುಣ್ಯಭೂಮಿಯಲ್ಲಿ ಅದೆಷ್ಟು ಮಹಾಮಹಿಮರು ಜನ್ಮವೆತ್ತಿ ಈ ನೆಲವನ್ನು ಪಾವನಗೊಳಿಸಿ ಜನ್ಮ ಸಾರ್ಥಕ್ಯ ಮಾಡಿಕೊಂಡು ಅಜರಾಮರರಾಗಿದ್ದರೋ ಲೆಕ್ಕವಿಲ್ಲ. ಇಂತಹ ಮಹಾಮಹಿಮರಲ್ಲಿ ಭಗವಾನ್‌ ರಮಣ ಮಹರ್ಷಿಗಳು ಒಬ್ಬರು. 30ನೇ ಡಿಸೆಂಬರ್‌ 1879 ರಂದು ತಾಯಿ ಅಳಗಮ್ಮಾಲ…, ತಂದೆ ಸುಂದರಂ ಐಯೆರìವರ ಸುಪುತ್ರರಾಗಿ ಜನಿಸಿದರು. ಇವರ ಹುಟ್ಟು ಹೆಸರು ವೆಂಕಟರಮಣ. ಈ ಭೂಮಿ ಕಂಡ ಅತ್ಯಂತ ಸರಳ, ಮೌನ ಸಾಧಕ ಮತ್ತು ಶ್ರೇಷ್ಠ ಆತ್ಮಜ್ಞಾನಿಗಳಲ್ಲಿ ಶ್ರೀ ರಮಣ ಮಹರ್ಷಿಗಳು ಒಬ್ಬರು. ತಿರುಅಣ್ಣಾಮಲೈನಲ್ಲಿ ಅವರ ಆಶ್ರಮ ಇದೆ. ಇಂದಿಗೂ ದೇಶ ವಿದೇಶಗಳಿಂದ ಸಾವಿರಾರು ಭಕ್ತರು ಬದುಕಿನ ಅರ್ಥವನ್ನು ಶೋಧಿಸುತ್ತಾ ಇಲ್ಲಿಗೆ ಬರುವವರಿದ್ದಾರೆ. ಸಂಕಷ್ಟಗಳನ್ನು ಬಗೆಹರಿಸಿಕೊಳ್ಳಲು ದಾರಿತೋರಿವು ಗುರು ಎಂದೇ ಶ್ರೀ ರಮಣ ಮಹಿರ್ಷಿಗಳು ಖ್ಯಾತರು.

ರಮಣ ಮಹರ್ಷಿ ಒಬ್ಬ ಶ್ರೇಷ್ಠ ದಾರ್ಶನಿಕರು. ತತ್ವಜ್ಞಾನಿಯಾಗಿ ದೇಶ ವಿದೇಶದಲ್ಲಿ ಗುರುತಿಸಿಕೊಂಡ ಮಹಾನ್‌ ಸಂತರು. ಭಗವಾನ್‌ ಶ್ರೀ ರಮಣ ಮಹರ್ಷಿಗಳು ನೀಡುತ್ತಿದ್ದ ಸಂದೇಶಗಳು ಮಾನವೀಯತೆ ಸಾರವನ್ನು ಹೇಳುತ್ತಿದ್ದವು. ಜತೆಗೆ ನಮ್ಮೊಳಗಿನ ಅಂತರಂಗದ ದೀವಿಗೆಗೆ ತೈಲದಂತಿದೆ ಅವರ ಬೋಧಸಾರ.

ಮಹರ್ಷಿಗಳ ಬದುಕೇ ಜಗತ್ತಿಗೆ ಒಂದು ಅದ್ಭುತ ಸಂದೇಶ. ನುಡಿದಂತೆ ನಡೆಯುವುದು ಎಂದರೆ ಅದೇ ತಾನೇ. ಅದನ್ನೇ ಎಲ್ಲ ಧರ್ಮಗಳೂ, ಮಹಾನ್‌ ಗ್ರಂಥಗಳು ಸಾರಿರುವುದು. ಮನದೊಳಗಿನ ಜ್ಯೋತಿಗೆ ಶುದ್ಧ ತೈಲವು ಬೇಕು. ಎಂದರೇನು? ಅದು ಇತರ ಸಂಗತಿಗಳಿಂದ ಕಲುಷಿತವಾಗಿರಬಾರದು ಎಂದರ್ಥವೇ ತಾನೇ. ಅದೇ ಇಲ್ಲಿಯೂ. ಅಂತರಂಗವನ್ನು ಶುದ್ಧವಾಗಿಟ್ಟುಕೊಳ್ಳುವ ಬಗೆಯನ್ನು ಹೇಳಿಕೊಡುವುದೇ ರಮಣ ಮಹರ್ಷಿಗಳ ಗುರಿ.

ತಾವು ಏನನ್ನು ಪ್ರಚುರ ಪಡಿಸುತ್ತಿದ್ದರೋ, ತಮ್ಮ ಜೀವನ ಶೈಲಿಯನ್ನು ಹಾಗೇ ರೂಪಿಸಿಕೊಂಡಿದ್ದರು. ಬದುಕಿನ ಅದಮ್ಯ ಅರ್ಥವನ್ನು ತಮ್ಮ ಬರಹ, ಆಚರಣೆಗಳ ಮೂಲಕ ದೇಶದೆಲ್ಲೆಡೆ ಪಸರಿಸಿದ ಈ ಮಹಾನ್‌ ಸಂತನ ಆದರ್ಶ ತತ್ವಗಳು ಇಂದಿನ ಕಾಲಘಟ್ಟಕ್ಕೂ ಪ್ರಸ್ತುತ.

Advertisement

“ನಿನ್ನನ್ನು ನೀನು ತಿಳಿದುಕೋ’ ಎಂಬುದು ಮಹರ್ಷಿಗಳ ಬೋಧನೆಯ ಒಟ್ಟು ಸಾರ. ಮನುಷ್ಯನ ಎಲ್ಲ ಕ್ರಿಯೆಗಳ ಕುರಿತ ಮಾತುಗಳಲ್ಲೂ “ನಾನು’ ಎಂಬುದು ಪ್ರತ್ಯಕ್ಷವಾಗುವುದಷ್ಟೆ? ಆದರೆ “ಹಾಗೆಂದರೇನು’ ಎಂಬುದರ ಒಳ ಅರಿವು ಯಾರಿಗೂ ತಿಳಿದಿಲ್ಲ. ನನ್ನ ಕೈ, ನನ್ನ ಕಣ್ಣು, ನನ್ನ ಮನಸ್ಸು ಮುಂತಾಗಿ ಹೇಳುವಾಗಲೇ ನಮಗೆ ಅರಿವಿಲ್ಲದೆ ನಮ್ಮನ್ನು ದೇಹ-ಮನಸುಗಳಿಂದ ಪ್ರತ್ಯೇಕಿಸಿ ಕೊಂಡಿರುತ್ತೇವೆ. ಇವೆಲ್ಲದರ ಆಚೆ ಇವಾವುದೂ ಅಲ್ಲದ “ನಾನು’ ಎಂಬುದಿದೆ, ಅದನ್ನು ಅರಿಯುವುದೇ ನಮ್ಮ ಮೊದಲ ಕಾರ್ಯ ವಾಗಬೇಕು. ಅದೇ ನಮ್ಮ ಮೊದಲ ಆಯ್ಕೆಯಾಗಬೇಕು ಎಂಬುದು ಶ್ರೀ ರಮಣರ ಪ್ರತಿಯೊಂದು ಮಾತಿನಲ್ಲೂ ಅರಿವಿಗೆ ಬರುತ್ತದೆ.

ಪ್ರತಿ ಕಾಲಘಟ್ಟದಲ್ಲೂ ನೀನು ಯಾರು ಎಂಬುದನ್ನು ಪರಿಶೀಲಿಸು ಎಂದು ಅವರು ಹೇಳಿರುವುದು. ಆ ಮೂಲಕ ನಮ್ಮನ್ನು ನಾವು ಅರಿತುಕೊಳ್ಳುವ ಪ್ರಯತ್ನವನ್ನು ಸದಾ ಚಾಲ್ತಿ ಯಲ್ಲಿಟ್ಟುಕೊಂಡಿರಬೇಕು ಎಂದು ಹೇಳಿದ್ದಾರೆ. ಅದು ನಿರಂತರತೆ, ಯಾವುದೋ ಒಮ್ಮೆ ನಮ್ಮನ್ನು ನಾವು ತಿಳಿದುಕೊಂಡೆವು ಎಂದು ನಿರ್ಧಾರಕ್ಕೆ ಬಂದು ಬಿಡುವುದಲ್ಲ. ಪ್ರತಿ ಕಾಲ ಘಟ್ಟದಲ್ಲೂ ನಮ್ಮನ್ನು ನಾವು ಅರಿತುಕೊಳ್ಳುತ್ತಲೇ ಇರುವುದು, ಅಂಥದೊಂದು ಪ್ರಯತ್ನವನ್ನು ತಾಜಾ ಆಗಿಟ್ಟುಕೊಳ್ಳುವುದು. ಅವರ ಪ್ರಕಾರ ಅಧ್ಯಾತ್ಮ ಸಾಧನೆಯ ಬಿಂದು ಈ ಹಂತದಲ್ಲಿಯೇ ಆರಂಭವಾಗುತ್ತದೆ. ಈ ಪ್ರಕ್ರಿಯೆಯನ್ನು”ಆತ್ಮವಿಚಾರ’ದ ನೇರಮಾರ್ಗವೆಂದು ಕರೆದಿದ್ದಾರೆ.

ರಮಣರು ಪ್ರತಿಯೊಂದು ಜೀವಿ, ವಸ್ತುವನ್ನೂ ವಿಶೇಷವಾಗಿ ಕಾಣುತ್ತಿದ್ದರು. ಹೆಚ್ಚು ಮಾತನಾಡದೆ ಕೇವಲ ದೃಷ್ಟಿಯ ಮೂಲಕವೇ ಉಪದೇಶ ನೀಡುತ್ತಿದ್ದರು. ತನ್ನ ಶಿಷ್ಯರಿಗೆ ತಲೆ ಮೇಲೆ ಕೈ ಇಟ್ಟು ದೀಕ್ಷೆ ನೀಡುವ ಬದಲು ದೃಷ್ಟಿ ದೀಕ್ಷೆ ಮಾತ್ರ ನೀಡುತ್ತಿದ್ದರು. ಗುರು ಎಂಬ ಅಹಂ ಇಲ್ಲದೇ ಶಿಷ್ಯರ ಮಧ್ಯೆ ತಾನು ಕಲಿಯುವವನಾಗಿ ಜೀವನದ ಸತ್ಯಾಸತ್ಯತೆಗಳ ಕುರಿತು ಅರಿವು ಮೂಡಿಸುವ ಸಮಚಿತ್ತ ಮನೋ
ಭಾವ ಅವರದಾಗಿತ್ತು. ಎಲ್ಲರೊಂದಿಗೆ ಬಾಳುವ ವಿನಯವಂತಿಕೆಯನ್ನು ನಾವು ರೂಢಿಸಿಕೊಳ್ಳುವುದು ಬದುಕಿನ ಅತ್ಯಂತ ಪ್ರಮುಖ ಅಗತ್ಯ ಎಂಬುದು ಇವರ ಬದುಕಿನ ಸಾರದಿಂದಿಲೇ ತಿಳಿಯುವಂಥದ್ದು.

ಶ್ರದ್ಧೆಯ ಪ್ರತೀಕ
ಮಹರ್ಷಿಗಳು ಕೇವಲ ಆದರ್ಶಗಳನ್ನು ಹೇಳದೆ ತಮ್ಮ ದಿನಚರಿಯಲ್ಲಿ ಅಳವಡಿಸಿಕೊಂಡಿದ್ದರು. ಅವರ ದಿನನಿತ್ಯದ ಬದುಕು ಆರಂಭವಾಗುತ್ತಿದ್ದುದು ಮುಂಜಾವಿನ ನಾಲ್ಕು ಘಂಟೆಗೆ. ಆಗಿನಿಂದ ಒಂದು ನಿಮಿಷ ಕೂಡ ಹಾಳುಮಾಡುತ್ತಿರಲಿಲ್ಲ. ಸದಾಕಾಲ ಒಂದಲ್ಲ ಒಂದು ಕೆಲಸದಲ್ಲಿ ನಿರತರಾಗಿರುತ್ತಿದ್ದರು. ಅಡುಗೆಮನೆಯಲ್ಲಿ ರುಬ್ಬುವುದು, ಚಟ್ನಿ ತಯಾರು ಮಾಡುವುದು, ತರಕಾರಿ ಹೆಚ್ಚುವುದು, ಅಡುಗೆ ತಯಾರು ಮಾಡುವುದು, ಮುತ್ತುಗದ ಎಲೆಯಿಂದ ದೊನ್ನೆ ತಯಾರು ಮಾಡುವುದು, ನಾಯಿ ಮಂಗಗಳಿಗೆ ಸುಶ್ರೂಷೆ ಮಾಡುವುದು, ಆಶ್ರಮದ ಇನ್ನಿತರೇ ಕೆಲಸಗಳಲ್ಲಿ ಭಾಗಿಯಾಗುವುದು ಹೀಗೆ ಎಲ್ಲ ಕೆಲಸಗಳನ್ನು ಅತ್ಯಂತ ಶ್ರ¨ªೆಯಿಂದ ಮಾಡುತ್ತಿದ್ದರು. ಆಶ್ರಮಕ್ಕೆ ಬರುವ ಪ್ರತಿ ಭಕ್ತರ ಪ್ರಶ್ನೆಗಳಿಗೆ ಸಮಾಧಾನದ ಉತ್ತರ ನೀಡಿ ಸಂತೈಸುತ್ತಿದ್ದರು. ಪ್ರತಿಯೊಂದು ಕೆಲಸವೂ ಭಗವಂತನ ಸೇವೆಯೆಂದು ಮಾಡಿ ಮುಗಿಸಿ ಶಾಂತರಾಗಿರುತ್ತಿದ್ದರು. ಈ ಬಗ್ಗೆ ಯಾರಾದರೂ ಕೇಳಿದರೆ ಶಾಂತವಾಗಿಯೇ ನಾನೇನು ಮಾಡಿದೆ ಆ ಭಗವಂತ ಹೇಗೆ ಮಾಡಿಸಿದನೋ ಹಾಗೆ ಆಗಿದೆ. ಆತನ ಆದೇಶದಂತೆ ಕೆಲಸಗಳು ಎಲ್ಲರ ಕೈಯಲ್ಲಿ ನಡೆದಿದೆ ಎಂದು ಉತ್ತರಿಸುತ್ತಿದ್ದರು.

ಪ್ರತಿಫ‌ಲಾಪೇಕ್ಷೆ ಬೇಡ
ಎಲ್ಲ ಸಂದರ್ಭಗಳಲ್ಲೂ, ಎಲ್ಲ ಸಮಯದಲ್ಲೂ ತನ್ನ ಈ ಸ್ವಸ್ವರೂಪವನ್ನು ಸಾಧಕನು ಅರಿತಾಗ ಈ ಜಗತ್ತಿನ ಎಲ್ಲ ಬಂಧನದಿಂದ ಮುಕ್ತನಾಗಿ ಶಾಂತವಾಗಿ ಇರಲು ಸಾಧ್ಯ. ಆಗ ತಾನು ಮಾಡುವ ಎಲ್ಲ
ಕಾರ್ಯಗಳಲ್ಲಿ ಯಾವುದೇ ಅಂಟಿಲ್ಲದೆ, ಯಾವುದೇ ಪ್ರತಿಫ‌ಲಾಪೇಕ್ಷೆ ಇಲ್ಲದೆ ಸಂತೃಪ್ತಿಯಿಂದ ನಿರ್ವಹಿಸಲು ಸಾಧ್ಯ. ಇಂತಹ ಮನೋಸಂಕಲ್ಪ ಸಾಧಕನು ಮಾಡಿದರೆ ಸಾಧನೆಯ ಹಾದಿ ಸುಲಭವಾಗುತ್ತದೆ ಎಂಬ ಸಂದೇಶವನ್ನು ನೀಡಿದರು.

ಗುರುವಿದ್ದಾನೆಂದರೆ ಇದ್ದಾನೆ, ಇಲ್ಲವೆಂದರೆ ಇಲ್ಲ !
ಒಂದು ಪ್ರಸಂಗವೊಂದರ ಉಲ್ಲೇಖ ಶ್ರೀ ರಮಣ ಮಹರ್ಷಿಗಳ ಬೋಧಸಾರವನ್ನು ಹೇಳುತ್ತದೆ. ವಿದೇಶಿ ಅನುಯಾಯಿಯೊಬ್ಬ ಬಹಳ ವರ್ಷಗಳಿಂದ ಅವರ ಸೇವೆ ಮಾಡಿದ ಬಳಿಕ ಒಂದು ದಿನ, ನಿಮಗೆ ಯಾರೂ ಶಿಷ್ಯ ಇಲ್ಲ ಎಂದು ಹೇಳುತ್ತೀರಿ. ಆದರೆ ಪ್ರತಿಯೊಬ್ಬರೂ ಸ್ವಾತಂತ್ರ್ಯವನ್ನು ಹೊಂದಬೇಕೆಂದರೆ ಒಬ್ಬ ಗುರುವಿನ ಅಗತ್ಯವಿದೆ ಎನ್ನುತ್ತೀರಿ, ಇದರರ್ಥ ಏನು? ನಾನು ಇಷ್ಟೊಂದು ದಿನ ನಿಮ್ಮನ್ನೇ ಗುರುವೆಂದು ತಿಳಿದು ದಿನಗಳನ್ನು ವ್ಯರ್ಥ ಮಾಡಿದನೇ? ಎಂದು ಕೇಳಿದರು. ಅದಕ್ಕೆ ಶ್ರೀ ರಮಣ ಮಹರ್ಷಿಗಳು, ಎರಡೂ ನಿಜ. ನನಗೆ ಯಾರೂ ಶಿಷ್ಯರಿಲ್ಲ, ಹಾಗೆಯೇ ಸ್ವಾತಂತ್ರ್ಯವನ್ನು ಪಡೆಯಲು ಒಬ್ಬ ಗುರುವಿನ ಅಗತ್ಯವಿದೆ ಎಂದರು.

ಇದರಿಂದ ಮತ್ತಷ್ಟು ಕಸಿವಿಸಿಗೊಳಗಾದ ವಿದೇಶಿ ಅನುಯಾಯಿ, ಹಾಗಾದರೆ ನಾನು ವಾಪಸು ನನ್ನೂರಿಗೆ ಹೋಗಿ ಗುರುವನ್ನು ಹುಡುಕಬೇಕೋ ಎಂದು ಕೇಳಿದ. ಆಗ ಮಹರ್ಷಿಗಳು, ಹಾಗಾದರೆ ನಿನ್ನನ್ನು ಅಷ್ಟು ದೂರದಿಂದ ಕರೆದು ತಂದದ್ದಾದರೂ ಏಕೆ? ಇಷ್ಟು ದಿನ ಇಲ್ಲಿ ಕಳೆದದ್ದಾರೂ ಏಕೆ ಎಂದು ಮರು ಪ್ರಶ್ನೆ ಹಾಕಿದರು.

ಆ ಅನುಯಾಯಿ ಒಂದು ಬಗೆಯ ಉತ್ತರ ಸಿಕ್ಕವನಂತೆ, ಹಾಗಾದರೆ ಭಗವಾನರಿಗೆ (ಶ್ರೀ ರಮಣ ಮಹರ್ಷಿಗಳು) ಶಿಷ್ಯರಿದ್ದಾರೆ ಎಂದಾಯಿತು ಎಂದು ಹೇಳಿದ. ಅದಕ್ಕೆ ಮಹರ್ಷಿಗಳು, ಭಗವಾನರ (ನನ್ನ) ದೃಷ್ಟಿಯಲ್ಲಿ ಇಲ್ಲ. ಆದರೆ, ಅದೇ ಶಿಷ್ಯನ ದೃಷ್ಟಿಯಲ್ಲಿ ಗುರು ಎಂಬುವನು ದೊಡ್ಡ ಸಾಗರದಂತೆ. ಅವನು ಒಂದು ಸಣ್ಣ ಲೋಟದೊಂದಿಗೆ ಬಂದರೆ ಸಾಗರದಿಂದ ಅಷ್ಟೇ ನೀರನ್ನು ಕೊಂಡೊಯ್ಯಬಹುದು. ಆದರೆ ಆದು ಸಾಗರದ ಜಿಪುಣತನ ಎಂದು ದೂರುವಂತಿಲ್ಲ. ನೀನು ಎಷ್ಟು ದೊಡ್ಡ ಪಾತ್ರೆಯನ್ನು ತರುವೆಯೋ ಅಷ್ಟನ್ನು ಕೊಂಡೊಯ್ಯಬಹುದು. ಸಾಗರ ಇರುವುದು ಸದಾ ಕೊಡಲಿಕ್ಕೆ ಎಂದರಂತೆ.

ಮತ್ತೆ ಆ ಅನುಯಾಯಿ, ಹಾಗಾದರೆ ನಿಮ್ಮನ್ನು ನಾನು ಗುರು ಎಂದು ಒಪ್ಪಿಕೊಳ್ಳಲೋ ಅಥವಾ ಬೇಡವೋ? ಇದು ಕೇವಲ ನಂಬಿಕೆಯ ಪ್ರಶ್ನೆ ಎಂದ. ಅದಕ್ಕೆ ಮಹರ್ಷಿಗಳು ಪಕ್ಕದಲ್ಲೇ ಇದ್ದ ಮತ್ತೂಬ್ಬರತ್ತ ತಿರುಗಿ, ಅವರಿಗೆ ಈ ಸಂಬಂಧ ನಾನೇನಾದರೂ ಲಿಖೀತ ದಾಖಲೆ ಪತ್ರಗಳನ್ನು ಕೊಟ್ಟಿದ್ದೇನೆಯೇ ಎಂದು ಕೇಳು ಎಂದು ಹೇಳಿದರು. ಅಂದರೆ ನಂಬಿಕೆ ನಮ್ಮ ಭಾಗ. ನಮ್ಮೊಳಗಿನ ನಂಬಿಕೆ ನಮ್ಮ ಪಥವನ್ನು ಸ್ಪಷ್ಟಪಡಿಸುತ್ತದೆ ಎಂಬುದು ಅತ್ಯಂತ ಸ್ಪಷ್ಟ ಮಾತು.

- ಸುಶ್ಮಿತಾ ಜೈನ್‌

Advertisement

Udayavani is now on Telegram. Click here to join our channel and stay updated with the latest news.

Next