Advertisement

ವಿದ್ಯುತ್‌ ಸ್ಥಾವರ ಒಪ್ಪಂದ ಮರುಜಾರಿ: ಸಿಂಗ್‌

06:15 AM Apr 20, 2018 | Team Udayavani |

ಬೆಂಗಳೂರು: ಕರ್ನಾಟಕ ಸರ್ಕಾರ ಬಂಡವಾಳ ಹೂಡಿ ಛತ್ತೀಸ್‌ಗಡದಲ್ಲಿ ಕಲ್ಲಿದ್ದಲು ಆಧಾರಿತ ವಿದ್ಯುತ್‌ ಸ್ಥಾವರ ಸ್ಥಾಪಿಸುವ ಯೋಜನೆ ಈಗ ನನೆಗುದಿಗೆ ಬಿದ್ದಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ವಿದ್ಯುತ್‌ ಸ್ಥಾವರ ನಿರ್ಮಾಣ ಒಪ್ಪಂದವನ್ನು ಮರು ಜಾರಿ ಮಾಡಲಾಗುತ್ತದೆ ಎಂದು ಛತ್ತೀಸ್‌ಗಡ ಮುಖ್ಯಮಂತ್ರಿ ರಮಣ್‌ ಸಿಂಗ್‌ ಹೇಳಿದ್ದಾರೆ.

Advertisement

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಛತ್ತೀಸ್‌ಗಡದಲ್ಲಿ ಬಂಡವಾಳ
ಹೂಡಿ ವಿದ್ಯುತ್‌ ಸ್ಥಾವರ ನಿರ್ಮಾಣಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದಕ್ಕೆ ಛತ್ತೀಸ್‌ಗಡ ಸರ್ಕಾರ ಜಮೀನು ಮೀಸಲಿಟ್ಟಿದೆ. ಆದರೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಒಪ್ಪಂದ ರದ್ದುಗೊಳಿಸಿದೆ. ಇದರಿಂದ ಕರ್ನಾಟಕದಲ್ಲಿ ವಿದ್ಯುತ್‌ ಕೊರತೆ ಉಂಟಾಗಿದೆ ಎಂದು ಆರೋಪಿಸಿದರು.

ಅನ್ನಭಾಗ್ಯ ಯೋಜನೆ ಹೊಸದಲ್ಲ: ಛತ್ತೀಸ್‌ಗಡ ರಾಜ್ಯದ “ಮುಖ್ಯಮಂತ್ರಿ ಖಾದ್ಯ’ ಯೋಜನೆಯೇ ಕರ್ನಾಟಕದಲ್ಲಿ ಅನ್ನಭಾಗ್ಯ ಯೋಜನೆಯಾಗಿದೆ ಎಂದು ರಮಣ್‌ ಸಿಂಗ್‌ ಹೇಳಿದರು. ಛತ್ತೀಸ್‌ಗಡ ಸರ್ಕಾರ 2005ರಿಂದಲೇ ಅಲ್ಲಿನ ಬಡವರಿಗೆ ಅಕ್ಕಿ, ಬೇಳೆಕಾಳು ಹಾಗೂ ಉಪ್ಪು ವಿತರಿಸುತ್ತಿದ್ದು, ಅದಕ್ಕೆ “ಮುಖ್ಯಮಂತ್ರಿ ಖಾದ್ಯ’ ಎಂದು ಹೆಸರು ನಾಮಕರಣ ಮಾಡಲಾಗಿದೆ. ಸುಮಾರು 37 ಲಕ್ಷ
ಬಡ ಕುಟುಂಬಕ್ಕೆ 1 ರೂ.ಗೆ ಒಂದು ಕೆ.ಜಿ.ಅಕ್ಕಿ ವಿತರಿಸುತ್ತಿದೆ. ಜತೆಗೆ, ಬೇಳೆಕಾಳು ಮತ್ತು ಉಪ್ಪನ್ನು ಕಡಿಮೆ ದರದಲ್ಲಿ ನೀಡುತ್ತಿದ್ದೇವೆ. 2005ರಿಂದ ಇದನ್ನು ಜಾರಿಗೆ ಮಾಡಿದ್ದೇವೆ. ಹೀಗಾಗಿ, ಕರ್ನಾಟಕದ ಅನ್ನಭಾಗ್ಯ ಯೋಜನೆ ಹೊಸತಲ್ಲ ಎಂದು ತಿಳಿಸಿದರು.

2018ರ ಡಿಸೆಂಬರ್‌ನಲ್ಲಿ ಛತ್ತೀಸ್‌ಗಡ, ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೂರು
ರಾಜ್ಯದಲ್ಲೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಬ್‌ ಕಾ ಸಾತ್‌-ಸಬ್‌ ಕಾ ವಿಕಾಸ್‌ ಚಿಂತನೆ ಅಡಿಯಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೆಟ್‌ ಹಂಚಿಕೆ ಮಾಡಿದೆ.
ಪ್ರಧಾನಿ ಮೋದಿಯವರ ಸೂಚನೆಯಂತೆ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅಭ್ಯರ್ಥಿಗಳ ಆಯ್ಕೆ ಮಾಡಿದ್ದಾರೆ.

– ಅನಂತ ಕುಮಾರ್‌, ಕೇಂದ್ರ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next