Advertisement

ಪರಿಹಾರ ಕೊಡುವುದು ತಪ್ಪಿಸಲು ಕೋವಿಡ್‌ ಸಾವಿನ ಸುಳ್ಳು ಲೆಕ್ಕ: ರಾಮಲಿಂಗಾರೆಡ್ಡಿ

08:50 PM Sep 11, 2021 | Team Udayavani |

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರವು ಕೋವಿಡ್‌ದಿಂದ ಮೃತಪಟ್ಟವರಿಗೆ ಪರಿಹಾರ ನೀಡುವುದು ತಪ್ಪಿಸಲು ಸಾವಿನ ವಿಚಾರದಲ್ಲಿ ಸುಳ್ಳು ಲೆಕ್ಕ ನೀಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಮಾಹಿತಿ ಪ್ರಕಾರ ಕೋವಿಡ್‌ದಿಂದ ಮೃತಪಟ್ಟವರು 37,318. ಆದರೆ, ಅಂಕಿ-ಅಂಶ ಅಧ್ಯಯನ ಪ್ರಕಾರ ಆ ಸಂಖ್ಯೆ 1.62 ಲಕ್ಷಕ್ಕೂ ಹೆಚ್ಚು. ಹೀಗಾಗಿ, ಸಂಖ್ಯೆ ಯಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ ಎಂದು ದೂರಿದರು.

ರಾಜ್ಯದಲ್ಲಿ ಜನನ ಹಾಗೂ ಮರಣ ಇಲಾಖೆಯ ಅಧಿಕೃತ ಅಂಕಿ ಅಂಶ ಪ್ರಕಾರ 2018ರಲ್ಲಿ 4,83,511, 2019ರಲ್ಲಿ 5,08,584, 2020ರಲ್ಲಿ 5,51,808 ಜನರು ಮೃತಪಟ್ಟಿದ್ದಾರೆ. 2021ರ ಜುಲೈವರೆಗೆ 4.21 ಲಕ್ಷ ಮೃತಪಟ್ಟಿದ್ದು, ಕಳೆದ ವರ್ಷಗಳ ಸಂಖ್ಯೆ ತಾಳೆ ಹಾಕಿದರೆ 1.62 ಲಕ್ಷ ಹೆಚ್ಚುವರಿಯಾಗಿ ಮೃತಪಟ್ಟಿದ್ದಾರೆ ಎಂದು ಹೇಳಿದರು.

ಕಳೆದ ವರ್ಷ ಕೋವಿಡ್‌ದಿಂದ 30 ಸಾವಿರ ಜನ ಮೃತಪಟ್ಟಾಗ ಕೇವಲ 3 ಸಾವಿರ ಜನ ಎಂದು ಲೆಕ್ಕ ತೋರಿಸಿದ್ದರು. ಸರ್ಕಾರ ಸುಳ್ಳು ಲೆಕ್ಕ ನೀಡುತ್ತಿದೆ ಎಂಬುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ ಎಂದು ಆಪಾದಿಸಿದರು.

ಇದನ್ನೂ ಓದಿ:ಯಮಹಾದಿಂದ ರೇ ZR 125 Fi ಬಿಡುಗಡೆ : ಬೆಲೆ ಎಷ್ಟು ಗೊತ್ತಾ ?

Advertisement

ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ, ಕೋವಿಡ್‌ ಸೋಂಕಿತರಾಗಿ ಚಿಕಿತ್ಸೆ ಪಡೆದವರು, ಟಿಬಿ, ಕ್ಯಾನ್ಸರ್‌, ಹೃದಯ ಸಂಬಂಧಿ, ಬಿಪಿ, ಆರ್ಥರೈಟಿಸ್‌, ಪಾರ್ಸ್‌ವವಾಯು, ಸೇರಿದಂತೆ ಇತರೆ ಅನಾರೋಗ್ಯವಿರುವವರು ಸತ್ತರೆ ಕೋವಿಡ್‌ ಸಾವು ಎಂದು ಮರಣಪತ್ರ ನೀಡುವುದಿಲ್ಲ. ಇದು ತಪ್ಪು ಲೆಕ್ಕ ನೀಡಲು ಹುಡುಕಿಕೊಂಡಿರುವ ದಾರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೃತರಿಗೆ 5 ಲಕ್ಷ ಪರಿಹಾರ ನೀಡಬೇಕು ಎಂಬುದು ನಮ್ಮ ಆಗ್ರಹ. ಆದರೆ ಸರ್ಕಾರ ಕೇವಲ 1 ಲಕ್ಷ ಪರಿಹಾರ ಘೋಷಿಸಿದ್ದು, ಅದರಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಪರಿಹಾರ ಇಲ್ಲ, ಕುಟುಂಬದಲ್ಲಿ ಒಬ್ಬರಿಗೆ, ಬಿಪಿಎಲ್‌ ಕಾರ್ಡ್‌ ದಾರರಿಗೆ ಮಾತ್ರ ಪರಿಹಾರ ಎಂಬ ಷರತ್ತುಗಳನ್ನು ಹಾಕಿದ್ದಾರೆ. ಇದರಿಂದ ಯಾರಿಗೂ ಪರಿಹಾರ ಸಿಗುವುದಿಲ್ಲ, ಪರಿಹಾರ ಸಿಗಬಾರದು ಎಂಬ ಕಾರಣಕ್ಕೆ ಇದೆಲ್ಲಾ ನೆಪ, ಅಧಿವೇಶನದಲ್ಲಿ ಇದೆಲ್ಲಾ ವಿಚಾರ ಪ್ರಸ್ತಾಪವಾಗಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next