Advertisement

ಬೈಕ್‌ ರ್ಯಾಲಿಗೆ ಅನುಮತಿ ನಿರಾಕರಣೆ: ರಾಮಲಿಂಗಾ ರೆಡ್ಡಿ ಸಮರ್ಥನೆ

09:30 AM Sep 06, 2017 | Team Udayavani |

ಬೆಂಗಳೂರು: ಮಂಗಳೂರು ಚಲೋ ಬೈಕ್‌ ರ್ಯಾಲಿಗೆ ಸಂಬಂಧಿಸಿದಂತೆ ಪೊಲೀಸ್‌ ಇಲಾಖೆ ಕೇಳಿದ ಮಾಹಿತಿಯನ್ನು ಬಿಜೆಪಿ ಒದಗಿಸದ ಕಾರಣ ಅನುಮತಿ ನಿರಾಕರಿಸಲಾಗಿದೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ಮಂಗಳೂರು ಚಲೋ ಬೈಕ್‌ ರ್ಯಾಲಿ ಶಾಂತಿ ಕದಡುವ ಉದ್ದೇಶ ಹೊಂದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಸರಕಾರದ ಮೇಲಿದೆ. ಹೀಗಾಗಿಯೇ 800ಕ್ಕೂ ಹೆಚ್ಚು ಜನರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

Advertisement

ಮೂರು  ಆಯುಕ್ತಾಲಯ ಹಾಗೂ ಮೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ವ್ಯಾಪ್ತಿಯಲ್ಲಿ ಬಿಜೆಪಿ ನಾಯಕರು ಮಂಗಳೂರು ಚಲೋ ಬೈಕ್‌ ರ್ಯಾಲಿಗೆ ಸಂಬಂಧಿಸಿದಂತೆ ಪೊಲೀಸ್‌ ಇಲಾಖೆ ಕೇಳಿದ್ದ ಮಾಹಿತಿ ಕೊಟ್ಟಿಲ್ಲ. ಹೀಗಾಗಿ, ಅನುಮತಿ ನಿರಾಕರಿಸಲಾಗಿದೆ ಎಂದು ತಿಳಿಸಿದರು. ರಾಜ್ಯದ 5 ಭಾಗಗಳಿಂದ ಬೈಕ್‌ಗಳಲ್ಲಿ ರ್ಯಾಲಿ ಹೊರಟರೆ ಎಷ್ಟು ಜನ, ಎಲ್ಲಿಂದ ಹೊರಡುತ್ತಾರೆ ಎಂಬಿತ್ಯಾದಿ ಮಾಹಿತಿ ಬೇಡವೇ? ಅದನ್ನು ಪೊಲೀಸರಿಗೆ ಕೊಡದಿದ್ದರೆ ಹೇಗೆ ಎಂದು ಪ್ರಶ್ನಿಸಿದರು. ಇಷ್ಟೊಂದು ದೊಡ್ಡ ರ್ಯಾಲಿ 400 ಕಿ.ಮೀ. ವರೆಗೆ ಮಾಡಬೇಕಾದರೆ ಪೊಲೀಸ್‌ ಇಲಾಖೆ ಕೇಳಿದ ಮಾಹಿತಿ ಕೊಡಬೇಕಲ್ಲವೇ ಎಂದರು. ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ಕಾಂಗ್ರೆಸ್‌ ರ್ಯಾಲಿಗೆ ಭದ್ರತೆ ಒದಗಿಸಿದ್ದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆಗ ಭ್ರಷ್ಟಾಚಾರದ ವಿರುದ್ಧ ನಾವು ಹೋರಾಟ ಮಾಡಿದ್ದೆವು. ಎಲ್ಲೂ ಶಾಂತಿಗೆ ಭಂಗ ತರಲಿಲ್ಲ. ಆದರೆ, ಈಗ ಬಿಜೆಪಿಯವರ ಉದ್ದೇಶ ಸರಿಯಿಲ್ಲ ಎಂದರು.

ಶಾಂತಿ ಕದಡುವ ಯತ್ನ : ಹೆದ್ದಾರಿಗಳಲ್ಲಿ ರ್ಯಾಲಿ ಹೋದರೆ ಸಂಚಾರ ದಟ್ಟಣೆ ಸಹಿತ ಬೇರೆ ಬೇರೆ ರೀತಿಯ ಸಮಸ್ಯೆಗಳು ಉದ್ಭವಿಸುತ್ತವೆ. ಜತೆಗೆ ದಕ್ಷಿಣ ಕನ್ನಡ ಜಿಲ್ಲೆ ಶಾಂತವಾಗಿದ್ದು ಮತ್ತೆ ಅಲ್ಲಿ ಶಾಂತಿ ಕದಡುವ ಪ್ರಯತ್ನ ಬಿಜೆಪಿಯದು ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ದೂರಿದ್ದಾರೆ.

ರಾಮಲಿಂಗಾ ರೆಡ್ಡಿಗೆ ತಲೆ ಬಿಸಿ
ಬೆಂಗಳೂರು:
ರಾಮಲಿಂಗಾ ರೆಡ್ಡಿ ಅವರು ಗೃಹ ಇಲಾಖೆ ಹೊಣೆಗಾರಿಕೆ ವಹಿಸಿಕೊಂಡ ಮರುದಿನವೇ ಬಿಜೆಪಿ ಮಂಗಳೂರು ಚಲೋ ಬೈಕ್‌ ರ್ಯಾಲಿ, ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ, ಸಚಿವ ವಿನಯ ಕುಲಕರ್ಣಿಗೆ ಬೆದರಿಕೆ ಪ್ರಕರಣಗಳು ಸವಾಲಾಗಿ ಪರಿಣಮಿಸಿವೆ. ಡಾ| ಜಿ. ಪರಮೇಶ್ವರ್‌ ರಾಜೀನಾಮೆ ಅನಂತರ ಕೆಲವು ದಿನ ಮುಖ್ಯಮಂತ್ರಿಯವರ ಬಳಿಯೇ ಇದ್ದ ಗೃಹ ಖಾತೆಯನ್ನು ಶುಕ್ರವಾರ ನಡೆದ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಾರಿಗೆ ಸಚಿವರಾಗಿದ್ದ ರಾಮಲಿಂಗಾ ರೆಡ್ಡಿಯವರಿಗೆ ಗೃಹ ಖಾತೆ ವಹಿಸಲಾಗಿತ್ತು.

ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಮಂಗಳೂರು ಚಲೋ ಬೈಕ್‌ ರ್ಯಾಲಿ ತಲೆಬಿಸಿ ಉಂಟುಮಾಡಿತ್ತು. ಅನಂತರ ಸಚಿವ ವಿನಯ ಕುಲಕರ್ಣಿಗೆ ಬೆದರಿಕೆ ಹಾಗೂ ಇದೀಗ ಗೌರಿ ಲಂಕೇಶ್‌ ಹತ್ಯೆ ಪ್ರಕರಣಗಳು ತಲೆನೋವಾಗಿ ಪರಿಣಮಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next