Advertisement
ತಂದೆ-ತಾಯಿ ವೆಂಕಟರಮಣನನ್ನು ಸ್ವಾಮಿಗಳ ಭೇಟಿಗೆ ಕರೆದುಕೊಂಡು ಹೋದರು. ವೆಂಕಟರಾಮ ಭಕ್ತಿಯಿಂದ ಸ್ವಾಮಿಗಳಿಗೆ ನಮಸ್ಕರಿಸಿದ. ಪುಟ್ಟ ಹುಡುಗನ ಮುಗ್ಧ ಮುಖ, ಅಲ್ಲಿ ತುಂಬಿದ ಭಕ್ತಿಭಾವ, ನಡೆಯ ಚುರುಕುತನ ಎಲ್ಲ ಗಮನಿಸಿದ ಸ್ವಾಮಿಗಳಿಗೆ ಏನನ್ನಿಸಿತೋ! ಆಕಸ್ಮಿಕವಾಗಿ ಅವರ ಬಾಯಿಂದ ಹೀಗೊಂದು ಮಾತು ಬಂತು. “ನೀನು ನನ್ನಂತೆ ಸ್ವಾಮಿಯಾಗುತ್ತೀಯಾ?’ ವೆಂಕಟರಾಮ ಉತ್ತರಿಸಿದ. “ಹ್ಞೂ ಆಗುತ್ತೇನೆ.” ಈ ಆಕಸ್ಮಿಕ ಸಂಭಾಷಣೆಗೆ ಒಳಗಿನಿಂದ ಪ್ರೇರಿಸಿದ, ಮೇಲೆ ನಿಂತ ದೇವತೆಗಳು “ತಥಾಸ್ತು’ ಎಂದರು.
Related Articles
Advertisement
ಈ ವಾಮನಮೂರ್ತಿಯ ವಿದ್ಯೆಯ ತ್ರಿವಿಕ್ರಮಾವ ತಾರವನ್ನು ಅವರು ಅಂದೇ ಗುರುತಿಸಿದ್ದರು.ಹೀಗೆ ಬೆಸೆದ ಬಾಂಧವ್ಯ ಮತ್ತಷ್ಟು ಗಟ್ಟಿಗೊಂಡು ಇಬ್ಬರು ಮಹಾನ್ ಯತಿಗಳನ್ನು ಇನ್ನಷ್ಟು ಹತ್ತಿರಕ್ಕೆ ತಂದು ಬೆಸೆಯಿತು. ಶ್ರೀ ವಿಶ್ವೇಶತೀರ್ಥರು ಶ್ರೀ ವಿದ್ಯಾಮಾನ್ಯತೀರ್ಥರಲ್ಲಿಯೇ ವ್ಯಾಸಂಗಕ್ಕೆ ನಿಂತರು. ಭಂಡಾರಕೇರಿಯ ಗುರುಕುಲ ವಾಸ ಅವರ ಏಕಾಂತ ಚಿಂತನೆಗೆ, ಬ್ರಹ್ಮಚರ್ಯದ ಪಾಲನೆಗೆ ಮತ್ತು ಆಳವಾದ ಅಧ್ಯಯನಕ್ಕೆ ಉತ್ತಮ ವಾತಾವರಣವನ್ನು ಒದಗಿಸಿತು. ಮಾಧ್ವ ವಿದ್ವಾಂಸರಲ್ಲೇ ಅಗ್ರ ಮಾನ್ಯರಾಗಿದ್ದ ವಿದ್ಯಾ ಮಾನ್ಯತೀರ್ಥರ ಮಾರ್ಗದರ್ಶನದಲ್ಲಿ ಶ್ರೀ ಅಧ್ಯಯನ ಸಾಗಿತು.
ಎಂಟು ವರ್ಷಗಳ ಅವಿಚ್ಛಿನ್ನ ಅಧ್ಯಯನ, ವಿದ್ಯಾಮಾನ್ಯತೀರ್ಥರು ತನ್ನೆಲ್ಲ ಅರಿವನ್ನು ಇವರಿಗೆ ಧಾರೆಯೆರೆದರು. ವಿಶ್ವೇಶತೀರ್ಥರು ವಿದ್ಯೆಯ ಪರ್ವತವೇ ಆದರು. ಬಹಳ ಜನಕ್ಕೆ ತಿಳಿದಿಲ್ಲ; ಶಾಸ್ತ್ರ ಪಾಂಡಿತ್ಯದಲ್ಲಿ ವಿಶ್ವೇಶತೀರ್ಥರ ಸಮಕ್ಕೆ ನಿಲ್ಲಬಲ್ಲ ಪೀಠಾಧಿಪತಿ ಇಡಿಯ ದೇಶದಲ್ಲಿ ಇನ್ನೊಬ್ಬನಿಲ್ಲ. (ಪೇಜಾವರ ಶ್ರೀಗಳಿಗೆ 80 ತುಂಬಿದ ಸಂದರ್ಭ ಬನ್ನಂಜೆ ಗೋವಿಂದಾಚಾರ್ಯರು ನಮ್ಮ ಸೋದರ ಪತ್ರಿಕೆ ತರಂಗಕ್ಕೆ ಬರೆದ ಲೇಖನದ ಆಯ್ದ ಭಾಗ.)
ನನ್ನ ದಾರಿ ಅದಲ್ಲ…: ಒಮ್ಮೆ ಶ್ರೀಪಾದರ ಶಿಷ್ಯರು ಅವರನ್ನು ಒತ್ತಾಯಿಸಿದರು. “ತಾವು ವೇದಾಂತ ಗ್ರಂಥಗಳಿಗೆ ಸಂಸ್ಕೃತದಲ್ಲಿ ಟೀಕೆ ಬರೆಯಬೇಕು’. ಶಿಷ್ಯರ ಕೇಳಿಕೆ ತಪ್ಪಲ್ಲ. ಸಂಸ್ಕೃತದಲ್ಲಿರುವ ವೇದಾಂತ ಗ್ರಂಥಗಳಿಗೆ ಸಂಸ್ಕೃತದಲ್ಲೇ ಟೀಕೆ ಬರೆಯಬಲ್ಲ ಅಗಾಧ ಪಾಂಡಿತ್ಯವಿರುವ ಏಕ ಮಾತ್ರ ಪೀಠಾಧಿಪತಿ ಪೇಜಾವರ ಶ್ರೀಪಾದರು. ಆದರೆ ಅದಕ್ಕೆ ಶ್ರೀಪಾದರು ನೀಡಿದ ಉತ್ತರ ಕಣ್ಣು ತೆರೆಸುವಂಥದು: “ನನ್ನ ಮೇಲೆ ಇಂಥ ಒತ್ತಡ ತರಬೇಡಿ. ನಾನು ಏನು ಮಾಡಬೇಕು ಎನ್ನುವುದು ನನಗೆ ಗೊತ್ತು. ನನ್ನ ಜೀವನದ ಗುರಿ ನನ್ನ ಕಣ್ಣ ಮುಂದಿದೆ. ಅದು ಸಮಾಜದಲ್ಲಿ ನೊಂದವರ ಸೇವೆಯೇ ಹೊರತು ಗ್ರಂಥ ರಚನೆಯಲ್ಲ’.