Advertisement

ರಾಮಕೃಷ್ಣ ಸೇವಾಶ್ರಮಕ್ಕೆ ಐದು ಜನೌಷಧ ಕೇಂದ್ರ

12:38 PM Aug 27, 2018 | Team Udayavani |

ಬೆಂಗಳೂರು: ತುಮಕೂರು ಜಿಲ್ಲೆ ಪಾವಗಡದ ಶ್ರೀ ರಾಮಕೃಷ್ಣ  ಸೇವಾಶ್ರಮಕ್ಕೆ ಐದು ಜನೌಷಧ ಕೇಂದ್ರಗಳನ್ನು ಮಂಜೂರು ಮಾಡುವುದಾಗಿ ಕೇಂದ್ರ ಸಚಿವ ಅನಂತಕುಮಾರ್‌ ಘೋಷಿಸಿದ್ದಾರೆ. ನಗರದ ವಾಸವಿ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೇವಾಶ್ರಮ ಹಿಂದುಳಿದ ಪ್ರದೇಶಗಳಲ್ಲಿ ಗ್ರಾಮೀಣ ಬಡ ಜನರಿಗೆ ಆರೋಗ್ಯ ಸೇವೆಗಳನ್ನು ನೀಡುತ್ತಿರುವುದನ್ನು ಪರಿಗಣಿಸಿ ಕೇಂದ್ರ ಸರ್ಕಾರದ ಐದು ಜನೌಷಧ ಕೇಂದ್ರಗಳನ್ನು ಮಂಜೂರು ಮಾಡುತ್ತಿದೆ ಎಂದು ಹೇಳಿದರು.

Advertisement

ಪಾವಗಡ ತಾಲೂಕಿನ ಪ್ರತಿ ಹೋಬಳಿ ಈ ಜನೌಷಧ ಕೇಂದ್ರಗಳನ್ನು ತೆರೆಯಲು ರಾಮಕೃಷ್ಣ ಸೇವಾಶ್ರಮದ ಜತೆ ಒಂದು ತಿಂಗಳಲ್ಲಿ ಒಪ್ಪಂದ ಮಾಡಿಕೊಳ್ಳಲಾಗುವುದು. ಈ ಮಳಿಗೆಗಳ ಒಳಾಂಗಣ ವಿನ್ಯಾಸಕ್ಕೆ ತಗಲುವ ವೆಚ್ಚ ಮತ್ತು ಮುಂಗಡವಾಗಿ ಔಷಧಗಳ ಪೂರೈಕೆಯನ್ನು ಕೇಂದ್ರ ಸರ್ಕಾರವೇ ಮಾಡಲಿದೆ ಎಂದು ತಿಳಿಸಿದರು.

ರಾಮಕೃಷ್ಣ ಸೇವಾಶ್ರಮದ ಸೇವೆ ಜನಜನಿತ. ಪಾವಗಡದಂತಹ ಹಿಂದುಳಿದ ಪ್ರದೇಶದಲ್ಲಿ ಆರೋಗ್ಯ ಕೇಂದ್ರಗಳನ್ನು ತೆರೆದು ಗ್ರಾಮೀಣ ಜನರಿಗೆ ಸೇವೆ ಒದಗಿಸುತ್ತಿರುವ ಸೇವಾಶ್ರಮದ ಕಾರ್ಯ ಇತರರಿಗೂ ಮಾದರಿ. ಅದರಲ್ಲೂ ಮುಖ್ಯವಾಗಿ ಕುಷ್ಟರೋಗಿ, ಕ್ಷಯ ರೋಗಿಗಳ ಸೇವೆಯಲ್ಲಿ ತೊಡಗಿರುವ ಸೇವಾಶ್ರಮದ ಕಾರ್ಯ ಶ್ಲಾಘನೀಯ. ಬಡವರಿಗೆ ಕಡಿಮೆ ದರದಲ್ಲಿ ಔಷಧಿಗಳು ಲಭ್ಯವಾಗಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಜನೌಷಧಿ ಮಳಿಗೆಗಳನ್ನು ತೆರೆಯುತ್ತಿದೆ.

ಇದೇ ವೇಳೆ ಕೇರಳ ರಾಜ್ಯ ಮತ್ತು ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರಿಗೆ ಮಠದ ವತಿಯಿಂದ ತಲಾ 10 ಲಕ್ಷ ರೂ. ನೆರವು ನೀಡುವುದಾಗಿ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಘೋಷಿಸಿದರು. ಸುಪ್ರೀಂಕೊರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ, ಪಾವಗಡ ಶ್ರೀ ರಾಮಕೃಷ್ಣ  ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದಜೀ ಮಹಾರಾಜ್‌, ಶಾಸಕ ಎಲ್‌.ಎ.ರವಿಸುಬ್ರಮಣ್ಯ, ಬೈಲೂರಿನ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ವಿನಾಯಕಾನಂದಜೀ ಮಹಾರಾಜ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next