Advertisement

ರಾಮಕೃಷ್ಣ ಮಿಷನ್‌ ಸ್ವಚ್ಛ ಗ್ರಾಮ ಅಭಿಯಾನ ಉದ್ಘಾಟನೆ

06:03 AM Dec 30, 2018 | |

ಮಂಗಳೂರು: ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಹಸಿ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸಿ ಅತಿ ಹೆಚ್ಚು ಲಾಭ ಗಳಿಸುವ ಗ್ರಾ.ಪಂ.ಗೆ ಜಿಲ್ಲಾಡಳಿತದ ವತಿಯಿಂದ ಬಹುಮಾನ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ತಿಳಿಸಿದರು.

Advertisement

ರಾಮಕೃಷ್ಣ ಮಿಷನ್‌ ಮಂಗಳೂರು ವತಿಯಿಂದ ದ.ಕ. ಮತ್ತು ಉಡುಪಿ ಜಿಲ್ಲಾ ಪಂಚಾಯತ್‌ ಸಹಯೋಗದೊಂದಿಗೆ ನಗರದ ರಾಮಕೃಷ್ಣ ಮಠದಲ್ಲಿ ಶನಿವಾರ ನಡೆದ ‘ರಾಮಕೃಷ್ಣ ಮಿಷನ್‌ ಸ್ವಚ್ಛ ಗ್ರಾಮ ಅಭಿಯಾನ’ ಉದ್ಘಾಟನ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಮಕೃಷ್ಣ ಮಿಷನ್‌ ಜನರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ವಚ್ಛತಾ ಅಭಿಯಾನ ನಡೆಸುತ್ತಿದೆ. ಇದರಿಂದಾಗಿ ಸ್ವಚ್ಛತೆಯ ಅರಿವು ಎಲ್ಲರಲ್ಲೂ ಮೂಡಿದೆ. ತ್ಯಾಜ್ಯದಿಂದಲೂ ಲಾಭ ಗಳಿಸಬಹುದು ಎಂಬ ಭಾವನೆ ಬೆಳೆದಾಗ ಜನರು ಸಹಜವಾಗಿ ಈ ಬಗ್ಗೆ ಜಾಗೃತರಾಗುತ್ತಾರೆ. ತ್ಯಾಜ್ಯದಿಂದ ಉತ್ಪಾದಿಸಿದ ಗೊಬ್ಬರವನ್ನು ಜಿಲ್ಲಾಡಳಿತ ಮತ್ತು ರಾಮಕೃಷ್ಣ ಮಠದ ಜತೆಗೂಡಿ ಸಂಗ್ರಹ ಮತ್ತು ಮಾರಾಟಕ್ಕೆ ಪ್ರಯತ್ನಿಸಲಾಗುವುದು ಎಂದರು.

ಸ್ವಚ್ಛ ಗ್ರಾಮ ಅಭಿಯಾನ
ಸ್ವಚ್ಛತಾ ಅಭಿಯಾನದ ಸಂಚಾಲಕ ಏಕಗಮ್ಯಾನಂದ ಸ್ವಾಮೀಜಿ ಮಾತನಾಡಿ, ರಾಮಕೃಷ್ಣ ಮಿಷನ್‌ ವತಿಯಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ತಲಾ 100ರಂತೆ 200 ಗ್ರಾಮಗಳಲ್ಲಿ ಸ್ವಚ್ಛ ಗ್ರಾಮ ಅಭಿಯಾನ ನಡೆಯಲಿದೆ. 2019ರ ಅಕ್ಟೋಬರ್‌ 2ರ ವರೆಗೆ ನಡೆಯುವ ಅಭಿಯಾನದಲ್ಲಿ ಸುಮಾರು ಎರಡು ಸಾವಿರ ಸ್ವಚ್ಛತಾ ಶ್ರಮದಾನ ನಡೆಯಲಿದೆ. ಶ್ರಮದಾನಕ್ಕೆ ಬೇಕಾದ ಪೊರಕೆ ಸಹಿತ ಉಪಕರಣಗಳು, ಭಾಗವಹಿಸುವ ಸದಸ್ಯರಿಗೆ ಟೀಶರ್ಟ್‌ಗಳು, ಜಾಗೃತಿ ಕರಪತ್ರ, ಬ್ಯಾನರ್‌ಗಳು, ತ್ಯಾಜ್ಯ ಸಾಗಿಸಲು ವಾಹನದ ವ್ಯವಸ್ಥೆ, ಉಪಾಹಾರದ ವ್ಯವಸ್ಥೆಗಳನ್ನು ಮಂಗಳೂರು ರಾಮಕೃಷ್ಣ ಮಿಷನ್‌ ಒದಗಿಸಲಿದೆ. ಕೇಂದ್ರ ಸರಕಾರದ ವಿನಂತಿಯಂತೆ ಜನರಿಂದ ಜನರಿಗಾಗಿ ರಾಮಕೃಷ್ಣ ಮಿಷನ್‌ ಸ್ವಚ್ಛ ಭಾರತ್‌ ಅಭಿಯಾನ ನಡೆಸುತ್ತಿದೆ ಎಂದರು. ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್‌ ಉದ್ಘಾಟಿಸಿದರು.

ದಕ್ಷಿಣ ಕನ್ನಡ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಡುಪಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು, ದ.ಕ. ಜಿಲ್ಲಾ ಪಂಚಾಯತ್‌ ಸಿಇಒ ಡಾ| ಆರ್‌. ಸೆಲ್ವಮಣಿ, ಉಡುಪಿ ಜಿಲ್ಲಾ ಪಂಚಾಯತ್‌ ಸಿಂಧು ಬಿ.ರೂಪೇಶ್‌, ಎಂ.ಆರ್‌.ಪಿ.ಎಲ್‌. ಜಿಜಿಎಂ ಬಿ.ಎಚ್‌.ವಿ. ಪ್ರಸಾದ್‌ ಉಪಸ್ಥಿತರಿದ್ದರು. ವಿಧಾನಪರಿಷತ್‌ ಮಾಜಿ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌ ಸ್ವಾಗತಿಸಿದರು. ಉಪನ್ಯಾಸಕ ಸಂತೋಷ್‌ ನಿರೂಪಿಸಿದರು. ದ.ಕ., ಉಡುಪಿಯ ಇನ್ನೂರು ಗ್ರಾಮಗಳಿಂದ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪಿಡಿಒ ಮೊದಲಾದವರು ಪಾಲ್ಗೊಂಡಿದ್ದರು.

Advertisement

ಸಮ್ಮಾನ  
ಕಳೆದ ವರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಸ್ವಚ್ಛ ಗ್ರಾಮ ಅಭಿಯಾನದಲ್ಲಿ ಸಾಧನೆ ಮಾಡಿದ ಮಂಗಳೂರು ತಾಲೂಕಿನ ಬಜಪೆ, ಕೆಮ್ರಾಲ್‌, ಪಡುಪಣಂಬೂರು, ಕಿಲ್ಪಾಡಿ, ವಾಲ್ಪಾಡಿ, ಅತಿಕಾರಿಬೆಟ್ಟು, ಬಂಟ್ವಾಳ ತಾಲೂಕಿನ ಕೇಪು, ಮಂಚಿ, ಪುಣಚ, ಇರ್ವತ್ತೂರು ಗ್ರಾ.ಪಂ. ಪ್ರತಿನಿಧಿಗಳನ್ನು ಸಮ್ಮಾನಿಸಲಾಯಿತು.

ನಿರ್ವಹಣೆಗೆ ಯೋಜನೆ
ಬಯಲು ಶೌಚ ಮುಕ್ತವಾಗಿರುವ ಉಭಯ ಜಿಲ್ಲೆಗಳಲ್ಲಿ ಸಮರ್ಪಕ ಘನ ತ್ಯಾಜ್ಯ ನಿರ್ವಹಣೆ ನಡೆಯಬೇಕು. ಜಿಲ್ಲೆಯ 25 ಗ್ರಾ.ಪಂ.ಗಳಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಯೋಜನೆ ಹಾಕಲಾಗಿದೆ. ಜನವರಿಯಲ್ಲಿ ಇದು ಜಾರಿಯಾಗಲಿದೆ.
 -ಡಾ| ಆರ್‌. ಸೆಲ್ವಮಣಿ, ದ.ಕ. ಜಿಪಂ ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next