Advertisement

Ramakrishna Hegde: ಮೌಲ್ಯಾಧಾರಿತ ರಾಜಕಾರಣದ ರೂವಾರಿ ರಾಮಕೃಷ್ಣ ಹೆಗಡೆ

05:35 PM Aug 29, 2023 | Team Udayavani |

ದಿಕ್ಕು-ದೆಸೆಯಿಲ್ಲದ ಇಂದಿನ ರಾಜಕಾರಣವನ್ನು ಕಂಡಾಗ ಮೌಲ್ಯಾಧಾರಿತ ರಾಜಕಾರಣ ನಡೆಸಿದ ಮಾಜಿ ಮುಖ್ಯಮಂತ್ರಿ ದಿ|ರಾಮಕೃಷ್ಣ ಹೆಗಡೆ ಸದಾ ನೆನಪಾಗುತ್ತಾರೆ.  ಸಿಎಂ ಆಗಿದ್ದಾಗ ಇಡೀ ದೇಶವೇ ಕರ್ನಾಟಕದ ಕಡೆ ನಿಬ್ಬೆರಗಾಗಿ ನೋಡುವಂತೆ ಸೊಗಸಾದ ಆಡಳಿತ ನಡೆಸಿದ ಮಹಾನ್‌ ನಾಯಕ.

Advertisement

ರಾಜಕೀಯ ಜೀವನದುದ್ದಕ್ಕೂ ನಂಬಿದ ಹಾಗೂ ತಾವೇ ಪ್ರತಿಪಾದಿಸಿದ ರಾಜಕೀಯ ಮೌಲ್ಯಗಳ ಉಳಿವಿಗಾಗಿ ಅಹರ್ನಿಶಿ ಶ್ರಮಿಸಿದವರು. ಮಾತ್ರವಲ್ಲ, ಆ ಮೌಲ್ಯಗಳಿಗಾಗಿ ಸಾಕಷ್ಟು ಬಾರಿ ಬೆಲೆಯನ್ನೂ ತೆತ್ತ ಆದರ್ಶ ನಾಯಕರೂ ಹೌದು.

1983ರಲ್ಲಿ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸೇತರ ಜನತಾ ಪಕ್ಷ (ನೇಗಿಲು ಹೊತ್ತ ರೈತ ಚಿಹ್ನೆ) ಸರಕಾರದ ಮುಖ್ಯಮಂತ್ರಿಯಾಗಿದ್ದ ಹೆಗಡೆ ಅವರು ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಮಾಡಿದ ಕೆಲಸ ಅಷ್ಟಿಷ್ಟಲ್ಲ. ಇವರ ಆಡಳಿತಕ್ಕೆ ಅಗ್ನಿಪರೀಕ್ಷೆ ಎಂಬಂತೆ ಎದುರಾದ ಭೀಕರ ಬರಗಾಲದ ಸಂದರ್ಭ ಅಂದಿನ ಗ್ರಾಮೀಣಾಭಿವೃದ್ಧಿ ಸಚಿವ ಅಬ್ದುಲ್‌ ನಜೀರ್‌ ಸಾಬ್‌ ಅವರ ಮೂಲಕ ನಾಡಿನಾದ್ಯಂತ ಕೊಳವೆ ಬಾವಿಗಳನ್ನು ಕೊರೆಸಿ ನೀರಿನ ಬವಣೆ ನೀಗಿಸುವಲ್ಲಿ ಯಶಸ್ವಿಯಾದರು. ಮಾತ್ರವಲ್ಲ, ರಾಜ್ಯಾದ್ಯಂತ ಗೋಶಾಲೆಗಳನ್ನು ತೆರೆದು ಜಾನುವಾರುಗಳ ಸಂರಕ್ಷಣೆ ಮಾಡಿ, ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ದರು.

ಶಾಲಾ ಮಕ್ಕಳಿಗೆ ಉಚಿತ ಬಸ್‌ ಪಾಸ್‌, ವಿಧವಾ ಮಾಸಾಶನ ಹೀಗೆ ಹತ್ತು ಹಲವು ಯೋಜನೆಗಳನ್ನು ಅಮೂಲಾಗ್ರವಾಗಿ ಜಾರಿಗೆ ತರುವ ಮೂಲಕ ನಾಡಿನ ಜನಮನದಲ್ಲಿ ಭದ್ರವಾಗಿ ನೆಲೆಯೂರಿದ್ದರು. ಅವರು ಜಾರಿಗೆ ತಂದ ಪಂಚಾಯತ್‌ ರಾಜ್‌ ವ್ಯವಸ್ಥೆ ಇಡೀ ದೇಶಕ್ಕೇ ಮಾದರಿಯಾಯಿತು.

ಹೆಗಡೆ ಅವರು ಪ್ರತಿಷ್ಠಾಪಿಸಿದ ಲೋಕಾಯುಕ್ತ ಸಂಸ್ಥೆ ಭ್ರಷ್ಟ ಅಧಿಕಾರಿಗಳಿಗೆ ಸಿಂಹಸ್ವಪ್ನವಾಗಿದೆ ಎಂಬುದು ನಿರ್ವಿವಾದದ ಸಂಗತಿ. “ಆಡಿದರೆ ಮುತ್ತಿನ ಹಾರದಂತಿರಬೇಕು, ಲಿಂಗ ಮೆಚ್ಚಿ ಅಹುದಹುದೆನ್ನುವಂತಿರಬೇಕು’ ಎಂಬ ಜಗಜ್ಯೋತಿ ಬಸವಣ್ಣವರ ವಚನದ ಸಾಲಿನಂತೆ ಹೆಗಡೆ ಅವರು ತಮ್ಮ ರಾಜಕೀಯ ಜೀವನದುದ್ದಕ್ಕೂ ಹಿತ-ಮಿತ ನಡೆ-ನುಡಿಯೊಂದಿಗೆ ನಾಡಿನ ಜನರ
ಹೃದಯ ಗೆದ್ದಿದ್ದರು. ಅವರು ಭಾಗವಹಿಸುತ್ತಿದ್ದ ಸಭೆ-ಸಮಾರಂಭಗಳಲ್ಲಿ ಜನಸಾಗರವೇ ಸೇರುತ್ತಿತ್ತು. ಅಂಥ ಧೀಮಂತ ವ್ಯಕ್ತಿತ್ವ ಅವರಲ್ಲಿತ್ತು.

Advertisement

ಇನ್ನು ಎಂತಹ ಸಂದರ್ಭದಲ್ಲೂ ಹೆಗಡೆ ಅವರು ಅಸಾಂವಿಧಾನಿಕ ಭಾಷೆ ಪ್ರಯೋಗಿಸಿದ ಉದಾಹರಣೆಗಳು ತೀರಾ ವಿರಳ ಎನ್ನಬಹುದು. ಅವರನ್ನು ಜನತಾದಳದಿಂದ ಹೊರ ಹಾಕಿದಾಗಲೂ ತಮ್ಮ ಗರಡಿಯಲ್ಲೇ ಬೆಳೆದ, ಜತೆಗಿದ್ದ ಕೆಲ ನಾಯಕರು
ತಮ್ಮಿಂದ ದೂರವಾಗುತ್ತಿದ್ದಾರೆ ಎಂಬ ಸುಳಿವು ದೊರೆತಾಗ ತೀರಾ ನೊಂದುಕೊಂಡಿದ್ದರು.  ಆಗ ಮನನೊಂದು ತೀರಾ ಭಾವುಕರಾಗಿ ಸಾತ್ವಿಕ ಆಕ್ರೋಶ ಹೊರಹಾಕಿದ್ದರು. ಆದರೆ, ತಮ್ಮ ರಾಜಕೀಯ ಕಡುವೈರಿಯನ್ನೂ ಕೂಡ ಎಂದೂ ನಿಂದಿಸಿ ಮಾತನಾಡಿದವರಲ್ಲ. ಅಂಥ ರಾಜಕೀಯ ಸಂಸ್ಕಾರ ಅವರಲ್ಲಿತ್ತು. ಇಂತಹ ಆದರ್ಶ ರಾಜಕಾರಣಿಯಾಗಿದ್ದ ಹೆಗಡೆ ಅವರ
ರಾಜಕೀಯ ಮೌಲ್ಯಗಳು ಹಾಗೂ ಚಿಂತನೆಗಳನ್ನು ಯುವಜನತೆಗೆ ತಿಳಿಸಲು ರಾಜ್ಯದ ವಿವಿಯೊಂದರಲ್ಲಿ ಅಧ್ಯಯನ ಪೀಠ
ಸ್ಥಾಪಿಸುವ ಭರವಸೆ ಸಾಕಾರವಾಗಿಲ್ಲ. ಹೆಗಡೆಯವರ ರಾಜಕೀಯ ಗರಡಿಯಲ್ಲೇ ಬೆಳೆದ ಸಿದ್ದರಾಮಯ್ಯ ಈಗ ಮುಖ್ಯಮಂತ್ರಿ ಆಗಿದ್ದಾರೆ. ಅವರು ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ, ಅಧ್ಯಯನ ಪೀಠ ಸ್ಥಾಪಿಸಿದ್ದೇ ಆದಲ್ಲಿ, ಭವಿಷ್ಯದ ಪೀಳಿಗೆಗೆ ಹೆಗಡೆ ಅವರ ರಾಜಕೀಯ ವಿಚಾರಧಾರೆಗಳ ಪರಿಚಯವಾಗಿ, ರಾಜಕಾರಣದಲ್ಲಿ ಮೌಲ್ಯಗಳ ಸಂರಕ್ಷಣೆಗೆ ಸಹಕಾರಿಯಾಗಬಲ್ಲದು.

*ಅಶೋಕ ಸ. ಬೆಳಗಲಿ (ಕುದರಿ), ಹುಬ್ಬಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next