Advertisement

ಮೌಲ್ಯಾಧಾರಿತ ರಾಜಕಾರಣದ ಧ್ರು‌ತಾರೆ

12:57 AM Aug 29, 2019 | mahesh |

ಇಂದು ಮಾಜಿ ಮುಖ್ಯಮಂತ್ರಿ ದಿ|ರಾಮಕೃಷ್ಣ ಹೆಗಡೆ ಅವರ 94ನೇ ಜನ್ಮದಿನ ತನ್ನಿಮಿತ್ತ ಈ ಲೇಖನ

Advertisement

80ರ ದಶಕದಲ್ಲಿ ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಿಸಿದ್ದ ಮುತ್ಸದ್ದಿ ನಾಯಕ, ಮಾಜಿ ಮುಖ್ಯಮಂತ್ರಿ ದಿ|ರಾಮಕೃಷ್ಣ ಹೆಗಡೆ ಅವರು ಪ್ರತಿಪಾದಿಸಿದ್ದ ಹಾಗೂ ಪಾಲಿಸಿಕೊಂಡು ಬಂದಿದ್ದ ಮೌಲ್ಯಾಧಾರಿತ ರಾಜಕಾರಣದ ಸಿದ್ಧಾಂತಗಳು ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಪಾಲನೆಯಾಗುತ್ತಿವೆಯೇ ಎಂಬುದು ಪ್ರಶ್ನೆಯಾಗಿ ಕಾಡತೊಡಗಿದೆ.

ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಹಿಡಿದು 1983ರವರೆಗೆ ಕಾಂಗ್ರೆಸ್‌ ಪಕ್ಷದ ಕಪಿಮುಷ್ಟಿಯಲ್ಲಿದ್ದ ರಾಜ್ಯದ ಚುಕ್ಕಾಣಿಯನ್ನು ‘ನೇಗಿಲು ಹೊತ್ತ ರೈತ’ನ ಚಿಹ್ನೆಯ ಅಂದಿನ ಜನತಾ ಪಕ್ಷದ ವಶಕ್ಕೆ ಪಡೆದು, ಸೊಗಸಾದ ಆಡಳಿತ ನಡೆಸಿದ ಹೆಗಡೆ ಅವರು ಇಂದು ದೈಹಿಕವಾಗಿ ನಮ್ಮ ಮಧ್ಯದಲ್ಲಿಲ್ಲ. ಆದರೆ, ಸಾರ್ವಜನಿಕ ಬದುಕಿನಲ್ಲಿ ಅವರು ಹಾಕಿಕೊಟ್ಟ ಹಲವು ಸತ್‌ಸಂಪ್ರದಾಯಗಳ ಹೆಜ್ಜೆ ಗುರುತುಗಳು ಮಾತ್ರ ಹಸಿರಾಗಿವೆ.

ಇತ್ತೀಚಿನ ವರ್ಷಗಳಲ್ಲಿ ರಾಜ್ಯ ರಾಜಕಾರಣವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಸಹಜವಾಗಿಯೇ ಹೆಗಡೆ ಅವರ ಕಾಲದ ಪ್ರಬುದ್ಧ ರಾಜಕೀಯ ವ್ಯವಸ್ಥೆ, ಅಂದಿನ ರಾಜಕಾರಣಿಗಳು ನಡೆದುಕೊಳ್ಳುತ್ತಿದ್ದ ರೀತಿ-ರಿವಾಜುಗಳು ನೆನಪಿಗೆ ಬರುತ್ತವೆ.

ಅಂದು ಅಧಿಕಾರ ಎಂಬುದು ಕೇವಲ ಜನಪರ ಯೋಜನೆಗಳ ಜಾರಿಗೆ ಜನತೆ ನೀಡಿದ ಸದವಕಾಶ ಎಂದು ಭಾವಿಸಲಾಗುತ್ತಿತ್ತು. ಹಾಗಾಗಿ, ಅಂದಿನವರಿಗೆ ಅಧಿಕಾರವೇ ಮುಖ್ಯವಾಗಿರಲಿಲ್ಲ. ಸಂದರ್ಭ ಬಂದಾಗ ಎಂತಹ ತ್ಯಾಗಕ್ಕೂ ಸಿದ್ಧರಾಗಿರುತ್ತಿದ್ದರು. ಆದರೆ, ಇಂದು ಪ್ರಳಯವಾದರೂ ಸರಿ ಅಧಿಕಾರವೇ ಸರ್ವಸ್ವ ಎಂಬ ಮನಃಸ್ಥಿತಿ ರಾಜಕಾರಣಿಗಳನ್ನು ಆವರಿಸಿಬಿಟ್ಟಿದೆ. ‘ಉದರ ನಿಮಿತ್ತಂ ಬಹುಕೃತ ವೇಷಂ’ ಎನ್ನುವ ಹಾಗೆ, ಇಂದಿನ ರಾಜಕಾರಣದಲ್ಲಿ ‘ಪದವಿ ನಿಮಿತ್ತಂ ಬಹುಕೃತ ವೇಷಂ’ ಎನ್ನುವಂತಹ ವಾತಾವರಣ ಬಂದಿದೆ.

Advertisement

ಹಿರಿಯ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ ರಾಜಕೀಯ ಗರಡಿಯಲ್ಲಿ ಬೆಳೆದಿದ್ದ ರಾಮಕೃಷ್ಣ ಹೆಗಡೆ ಅವರು ನಾಡಿನ ಗ್ರಾಮೀಣ ಜನರ ಕೈಗೆ ಆಡಳಿತದ ಅಧಿಕಾರ ನೀಡಬೇಕೆಂಬ ಉದ್ದೇಶದಿಂದ ಪಂಚಾಯತ್‌ ರಾಜ್‌ ವ್ಯವಸ್ಥೆಯನ್ನು ಅಮೂಲಾಗ್ರವಾಗಿ ಜಾರಿಗೆ ತಂದ ಹಿರಿಮೆಗೆ ಪಾತ್ರರು. ನಾಡಿನ ಪ್ರತಿ ಕುಗ್ರಾಮಕ್ಕೂ ರಸ್ತೆ, ಬಸ್‌, ವಿದ್ಯುತ್‌ ಹಾಗೂ ನೀರಿನ ಸೌಲಭ್ಯ ಕಲ್ಪಿಸಿದ ದೂರದೃಷ್ಟಿಯ ನೇತಾರ. ಮಾತ್ರವಲ್ಲ, ನಾಡಿನ ಗ್ರಾಮೀಣ ಪ್ರದೇಶ ಸೇರಿದಂತೆ ಎಲ್ಲಾ ಭಾಗಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ಸೌಲಭ್ಯವನ್ನು ಮೊದಲ ಬಾರಿಗೆ ಜಾರಿಗೊಳಿಸಿ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಿದವರು.

ಜನತಾದಳದಿಂದ ತಮ್ಮನ್ನು ಉಚ್ಚಾಟನೆ ಮಾಡಿದಾಗ ತೀರಾ ನೊಂದುಕೊಂಡಿದ್ದ ರಾಮಕೃಷ್ಣ ಹೆಗಡೆ ಅವರು, ನಂತರ ‘ಲೋಕಶಕ್ತಿ’ ಪಕ್ಷವನ್ನು ಕಟ್ಟಿ, ಬಿಜೆಪಿಯೊಂದಿಗೆ ಕೈಜೋಡಿಸಿದರು. ತದನಂತರ ನಡೆದ ಲೋಕಸಭೆ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಲೋಕಶಕ್ತಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರಿಂದ ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ವಾಣಿಜ್ಯ ಸಚಿವರಾಗಿ ಉತ್ತಮ ಆಡಳಿತ ನಡೆಸಿದರು. ಈ ಅವಧಿಯಲ್ಲಿ ಮಲೆನಾಡಿನ ರೈತರ ಪ್ರಮುಖ ಬೆಳೆಯಾದ ಅಡಕೆಗೆ ಉತ್ತಮ ಮಾರುಕಟ್ಟೆ ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಅಡಕೆ ಬೆಳೆಗಾರರ ಮನ ಗೆದ್ದಿದ್ದರು.

ರಾಮಕೃಷ್ಣ ಹೆಗಡೆ ಅವರದ್ದು ಅತ್ಯುತ್ತಮ ಸಚಿವ ಸಂಪುಟ ವಾಗಿತ್ತು. ಸರಕಾರ ನಡೆಸುವ ಸಂದರ್ಭ ನಡೆದ ಕೆಲವು ಪ್ರಮಾದಗಳ ಬಗ್ಗೆ ಪ್ರಾಂಜಲ ಮನಸ್ಸಿನಿಂದಲೇ ತಪ್ಪನ್ನು ಒಪ್ಪಿಕೊಂಡಿದ್ದರು.

ಹೆಗಡೆ ಸಂಪುಟದಲ್ಲಿ ಘಟಾನುಘಟಿಗಳ ಪಡೆಯೇ ಇತ್ತು. ಎಸ್‌.ಆರ್‌.ಬೊಮ್ಮಾಯಿ, ಎಚ್.ಡಿ.ದೇವೇಗೌಡ, ಜೆ.ಎಚ್. ಪಟೇಲ್, ನಜೀರ್‌ಸಾಬ್‌(ನೀರುಸಾಬ್‌), ಸಿ.ಭೈರೇಗೌಡ, ಸಿದ್ದರಾಮಯ್ಯ, ಎಂ.ಪಿ.ಪ್ರಕಾಶ್‌, ಬಿ.ರಾಚಯ್ಯ, ಡಾ| ಜೀವರಾಜ್‌ ಆಳ್ವ, ಆರ್‌.ವಿ.ದೇಶಪಾಂಡೆ, ಪಿ.ಜಿ.ಆರ್‌.ಸಿಂಧ್ಯಾ, ವಿಶ್ವನಾಥರೆಡ್ಡಿ ಮುದ್ನಾಳ್‌, ಎಂ.ರಘುಪತಿ, ಪ್ರೊ|ಲಕ್ಷ್ಮೀಸಾಗರ್‌, ಜೀವಿಜಯ, ಎಂ.ಸಿ.ನಾಣಯ್ಯ, ಅಮರನಾಥಶೆಟ್ಟಿ ಇನ್ನೂ ಮುಂತಾದವರು ಜನತಾ ಸರಕಾರದ ಸಂಪುಟದಲ್ಲಿ ವಿಜೃಂಭಿಸುತ್ತಿದ್ದರು. ಹೆಗಡೆ ಸಿಎಂ ಆಗಿದ್ದಾಗ ಹಿರೇಕೆರೂರಿನ ಬಿ.ಜಿ.ಬಣಕಾರ ಅವರು ವಿಧಾನಸಭಾಧ್ಯಕ್ಷರಾಗಿದ್ದರು. ಅವರು ಕೂಡ ತೂಕದ ನಾಯಕರೇ ಎಂಬುದು ಉಲ್ಲೇಖಾರ್ಹ ಸಂಗತಿ. ಈ ಸಂದರ್ಭದಲ್ಲಿ ಹೆಗಡೆ ಅವರ ಪರಮಾಪ್ತರಾಗಿದ್ದ ಹಿರಿಯ ನಾಯಕ ವಿ.ಎಸ್‌.ಕೃಷ್ಣ ಅಯ್ಯರ್‌ ಅವರನ್ನು ಸಹ ನೆನೆಯಬೇಕಾಗುತ್ತದೆ.

ಹೆಗಡೆ ಅವರನ್ನು ಜನತಾದಳದಿಂದ ಹೊರಹಾಕಿದ ಸಂದರ್ಭ ಅಂದಿನ ಜೆ.ಎಚ್.ಪಟೇಲ್ ಸಂಪುಟದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ಅನಂತನಾಗ್‌ ಸೇರಿದಂತೆ ಅನೇಕ ಸಚಿವರು ಹಾಗೂ ಬಹುತೇಕ ಶಾಸಕರು, ಹೆಗಡೆ ಇಲ್ಲದ ಜನತಾದಳದಲ್ಲಿ ನಾವು ಇರುವುದಾದರೂ ಹೇಗೆ? ಎನ್ನುವ ಮೂಲಕ ಅವರ ಉಚ್ಚಾಟನೆಯನ್ನು ಬಲವಾಗಿಯೇ ವಿರೋಧಿಸಿ ದ್ದರು. ಮಾತ್ರವಲ್ಲ, ಹೆಗಡೆ ಅವರ ಜತೆಯೇ ಹೋಗಲು ಸಿದ್ಧರಾಗಿದ್ದರು. ಆದರೆ, ಆ ಸಂದರ್ಭ ಹೆಗಡೆ ಅವರು ಅಕ್ಷರಶಃ ‘ಮಾತೃ ಹೃದಯ’ವನ್ನು ಪ್ರದರ್ಶಿಸಿದ್ದು ಮಾತ್ರ ಮರೆಯಲಾಗದು.

ಲಾಲೂ ಪ್ರಸಾದ್‌ ಯಾದವ್‌(ಜನತಾದಳದ ಅಂದಿನ ರಾಷ್ಟ್ರೀಯ ಅಧ್ಯಕ್ಷರು) ಪಕ್ಷದಿಂದ ತಮ್ಮನ್ನು ಉಚ್ಚಾಟನೆ ಮಾಡಿದಾಗ ಕಸಿವಿಸಿಗೊಂಡಿದ್ದ ಹೆಗಡೆ ಅವರು, ಮನಸ್ಸು ಮಾಡಿದ್ದರೆ ಕ್ಷಣಾರ್ಧದಲ್ಲಿ ಜೆ.ಎಚ್.ಪಟೇಲರ ಸರ್ಕಾರವನ್ನು ಪತನಗೊಳಿಸಬಹುದಿತ್ತು. ಆದರೆ, ಆಗ ಅವರು ‘ಪಟೇಲ್ ಸರ್ಕಾರ ನನ್ನ ಕೂಸು’ ಎಂದು ಹೇಳುವ ಮೂಲಕ ತಮ್ಮೆಲ್ಲ ಬೆಂಬಲಿಗರಿಗೆ ಪಟೇಲ್ ಸರ್ಕಾರಕ್ಕೆ ಯಾವುದೇ ತೊಂದರೆ ಎದುರಾಗದಂತೆ ನೋಡಿಕೊಳ್ಳಿ ಎಂಬ ಸಂದೇಶವನ್ನು ಸೂಕ್ಷ್ಮವಾಗಿಯೇ ರವಾನಿಸಿದ್ದರು. ಹೆಗಡೆ ಅವರ ಈ ನಡೆಯಿಂದ ದಿಲ್ಖುಷ್‌ ಆಗಿದ್ದ ಪಟೇಲರು, ಮುಂದೆ ತಮ್ಮ ಅಧಿಕಾರವಧಿ ಕೊನೆಗೊಂಡ ತಕ್ಷಣವೇ ದೇವೇಗೌಡರಿಗೆ ಗುಡ್‌ಬೈ ಹೇಳಿ, ತಮ್ಮ ಹಳೆಯ ಸ್ನೇಹಿತ ಜಾರ್ಜ್‌ ಫೆರ್ನಾಂಡಿಸ್‌ ಅವರೊಂದಿಗೆ ಬೆಂಗಳೂರಿನ ರಾಜಮಹಲ್ ವಿಲಾಸ್‌ ಬಡಾವಣೆಯಲ್ಲಿರುವ ರಾಮಕೃಷ್ಣ ಹೆಗಡೆ ಅವರ ಮನೆ ‘ಕೃತಿಕಾ’ಕ್ಕೆ ತೆರಳಿ, ಹೆಗಡೆ ಅವರ ಜತೆ ಸೇರಿದರು.

ಈ ಹಂತದಲ್ಲಿ ಒಂದು ಮಾತು ಹೇಳಲೇಬೇಕಾಗುತ್ತದೆ. ಮುಖ್ಯ ಮಂತ್ರಿಯಾಗಿದ್ದ ಎಚ್.ಡಿ.ದೇವೇಗೌಡರು ಪ್ರಧಾನಿ ಹುದ್ದೆ ಅಲಂಕರಿ ಸಿದ ನಂತರ ತೆರವಾದ ಸಿಎಂ ಸ್ಥಾನ ಸಹಜವಾಗಿಯೇ ಹಿರಿಯರಾಗಿದ್ದ ಜೆ.ಎಚ್.ಪಟೇಲರಿಗೆ ಒಲಿಯಿತು. ಸಿದ್ದರಾಮಯ್ಯ ಉಪ ಮುಖ್ಯ ಮಂತ್ರಿ ಆದರು. ಪಟೇಲರದ್ದೂ ಕೂಡ ಮೇಧಾವಿಗಳ ಸಚಿವ ಸಂಪುಟವೇ ಆಗಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ದೇವೇಗೌಡರು ಪ್ರಧಾನಿ ಸ್ಥಾನದಿಂದ ಕೆಳಗಿಳಿದ ಮೇಲೂ ಪಟೇಲರು ಸಿಎಂ ಸ್ಥಾನದಲ್ಲಿಯೇ ಮುಂದುವರಿದಿದ್ದರ ಹಿಂದಿನ ಕಹಾನಿ ಬಲು ರೋಚಕ.

ಈ ಸಂದರ್ಭದಲ್ಲಿ ಜೆ.ಎಚ್.ಪಟೇಲರ ಮನಸ್ಸೆಲ್ಲ ರಾಮಕೃಷ್ಣ ಹೆಗಡೆ ಅವರ ಕಡೆಗೇ ಇತ್ತು. ದೈಹಿಕವಾಗಿ ಮಾತ್ರ ದೇವೇಗೌಡರ ಜತೆಗಿದ್ದರು ಎಂಬುದು ಪಟೇಲರು ಸಿಎಂ ಸ್ಥಾನದಿಂದ ಕೆಳಗಿಳಿದ ತಕ್ಷಣ ಅಕ್ಷರಶಃ ಗೋಚರವಾಯಿತು. ಸಿಎಂ ಆಗಿದ್ದಾಗ ಹೆಗಡೆ ಅವರನ್ನು ಆಗಾಗ ಟೀಕಿಸುತ್ತಲೇ ಇದ್ದ ಪಟೇಲರು, ದೇವೇಗೌಡರ ಜತೆ ಅನ್ಯೋನ್ಯತೆ ಕಾಪಾಡಿಕೊಂಡು ಬಂದಿದ್ದರು. ಆದರೆ, ಸಿಎಂ ಹುದ್ದೆಯಿಂದ ಕೆಳಗಿಳಿದ ನಂತರ ಕ್ಷಣವೂ ತಡ ಮಾಡದೇ ಹೆಗಡೆ ಅವರೊಂದಿಗೆ ಕಾಣಿಸಿಕೊಳ್ಳುವ ಮೂಲಕ ಹೆಗಡೆ-ಪಟೇಲ್ ಎರಡು ದೇಹ ಒಂದೇ ಆತ್ಮ ಇದ್ದಂತೆ ಎಂಬುದನ್ನು ಸಾದರಪಡಿಸಿ ಅಚ್ಚರಿ ಮೂಡಿಸಿದರು.

ಮುಂದೆ ಈ ಇಬ್ಬರೂ ನಾಯಕರು ತಮ್ಮ ರಾಜಕಾರಣದ ಕೊನೆಯ ಇನಿಂಗ್ಸ್‌ ಅನ್ನು ಜೆಡಿಯು(ಬಾಣದ ಚಿಹ್ನೆಯ ಸಂಯುಕ್ತ ಜನತಾದಳ)ಮೂಲಕ ಆರಂಭಿಸಿದರು. ನಂತರ 1999ರ ಅಕ್ಟೋಬರ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಜತೆಯಾಗಿಯೇ ಪ್ರಚಾರವನ್ನೂ ನಡೆಸಿದರು. ಆದರೆ, ಬಿಜೆಪಿ ಜತೆಗಿನ ಹೊಂದಾಣಿಕೆಯಲ್ಲಿ ಆದ ಕೆಲವು ಗೊಂದಲಗಳಿಂದಾಗಿ ನಿರೀಕ್ಷಿತ ಯಶ ಸಾಧ್ಯವಾಗಲಿಲ್ಲ. ಇದಾದ ಒಂದು ವರ್ಷದ ನಂತರ 2000ನೇ ಇಸ್ವಿ ಡಿಸೆಂಬರ್‌ 12ರಂದು ಪಟೇಲರು ನಿಧನರಾದರು. ನಂತರ ಹೆಗಡೆ ಅವರ ದೊಡ್ಡ ಶಕ್ತಿಯಾಗಿದ್ದ ಸಂಘಟನಾ ಚತುರ ಡಾ| ಜೀವರಾಜ್‌ ಆಳ್ವ ಅವರು ಸಹ ಅನಾರೋಗ್ಯದಿಂದಾಗಿ ಸಾವನ್ನಪ್ಪಿದರು. ಮುಂದಿನ ದಿನಗಳಲ್ಲಿ ಹೆಗಡೆ ಅವರು ಸಹ ಬೆನ್ನು ನೋವು ಮತ್ತಿತರ ಅನಾರೋಗ್ಯಕ್ಕೆ ತುತ್ತಾದರು. ಸಾಕಷ್ಟು ಚಿಕಿತ್ಸೆ ಪಡೆದರೂ ಫಲಿಸದ ಕಾರಣ 2003ರ ಜನವರಿ 12ರಂದು ಕೊನೆಯುಸಿರೆಳೆದರು. ಅಂದಿನಿಂದ ಇಂದಿನವರಿಗೂ ಕೆಲವರು ಹೆಗಡೆ ಅಭಿಮಾನಿಗಳು ಅನಾಥ ಪ್ರಜ್ಞೆಯಲ್ಲಿಯೇ ಕಾಲ ಕಳೆಯುವಂತಾಗಿದೆ. ಇದು ಅತಿಶಯೋಕ್ತಿ ಎನಿಸಿದರೂ ಕಟುಸತ್ಯ.

 ಅಶೋಕ.ಸ.ಬೆಳಗಲಿ(ಕುದರಿ)

Advertisement

Udayavani is now on Telegram. Click here to join our channel and stay updated with the latest news.

Next