Advertisement

ರಾಮಕೃಷ್ಣ ದ್ವಯರ ರಾಗ, ಭಾವನೆಯ ಬಲೆ ಹೆಣೆದ ಬಾಲೆಯರು

03:45 AM Jul 14, 2017 | Harsha Rao |

ವರ್ಣರಂಜಿತ ವೇದಿಕೆ. ಒಂದು ಬದಿಯಲ್ಲಿ ಸಂಕೀರ್ತನೆ. ಇನ್ನೊಂದು ಬದಿಯಲ್ಲಿ ಭಾಗವತಿಕೆ. ಮಧ್ಯದಲ್ಲಿ ಮನ ಸೆಳೆವ ನಾಟ್ಯ. ಯಕ್ಷಗಂಧರ್ವ ಲೋಕ. ಕಿಕ್ಕಿರಿದ ಪ್ರೇಕ್ಷಕರ ಅಮೋಘ ಕರತಾಡನ. ಭಕ್ತಿ ಭಾವ ಸಂಚಲನ, ರಮ್ಯ ರೋಮಾಂಚನ. ಕೋಟೆಕಣಿ ಶ್ರೀ ರಾಮನಾಥ ದೇವರ ಅಂಗಳದಲ್ಲಿ ಹೀಗೊಂದು ‘ತಿಂಗಳ ಹಬ್ಬ’.

Advertisement

ಸಂಸ್ಕೃತಿ ಸಂವರ್ಧನೆಯಿಂದ ಸ್ವಸ್ಥ, ಸ್ವತ್ಛ ಸಮಾಜ ನಿರ್ಮಾಣ ಸಾಧ್ಯ ಎಂಬ ಧ್ಯೇಯೋದ್ದೇಶದಿಂದ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಆಯೋಜಿಸಿದ ತಿಂಗಳ ಹಬ್ಬದ ತೃತೀಯ ಕಾರ್ಯಕ್ರಮ ದೃಶ್ಯ ಶ್ರವ್ಯದ ಅಪೂರ್ವ ಕಲಾ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಭಾಗವತ ರಾಮಕೃಷ್ಣ ಮಯ್ಯ ಅವರ ನೇತೃತ್ವದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಂಯೋಜನೆಯಲ್ಲಿ “ಯಕ್ಷ-ಗಾನ-ನಾಟ್ಯ-ಸಂಕೀರ್ತನೆ’ ಯಶಸ್ವಿಯಾಗಿ ಜರಗಿತು. ರಾಮಕೃಷ್ಣ ಮಯ್ಯ ಅವರ ಯಕ್ಷಗಾನ ಹಾಡುಗಳು, ರಾಮಕೃಷ್ಣ ಕಾಟುಕುಕ್ಕೆ ಅವರ ದಾಸ ಸಂಕೀರ್ತನೆ ದೈವಿಕ ಮಹತ್ವದ ಪಾವನ ಭೂಮಿಯಲ್ಲಿ ಆಧ್ಯಾತ್ಮ ಜಾಗೃತಿ ಮೂಡಿಸಿತು. ಬಾಲ ಪ್ರತಿಭೆಗಳಾದ ಉಪಾಸನಾ ಪಂಜರಿಕೆ ಮತ್ತು ಕಿಶನ್‌ ನೆಲ್ಲಿಕಟ್ಟೆ ತಮ್ಮ ಅದ್ಭುತ ನಾಟ್ಯ ಕೌಶಲ್ಯದಿಂದ ರಾಮಕೃಷ್ಣದ್ವಯರ ಶ್ರುತಿ ಮಧುರವಾದ ಕಂಠಶ್ರೀಗೆ ಜೀವ ತುಂಬಿ ಭಾವ ಪ್ರಪಂಚವನ್ನು ಸೃಷ್ಟಿಸಿದರು. ಹೆಜ್ಜೆ ಗೆಜ್ಜೆ ಅಂಗಭಂಗಿಗಳ ಮೂಲಕ ಭಾವನೆಯ ಬಲೆ ಹೆಣೆದ ಈ ಇಬ್ಬರು ಬಾಲೆಯರು ರಮ್ಯಾದ್ಭುತ ಸನ್ನಿವೇಶವನ್ನು ರೂಪಿಸಿದರು.

ಗಣೇಶ ಸ್ತುತಿ, ಗೋವಿಂದನ ನಾಮ ಸ್ಮರಣೆಯೊಂದಿಗೆ ಪ್ರಾರಂಭಗೊಂಡ ಯುಗಳ ಗಾನ – ನಾಟ್ಯ ವೈಭವ ಗಂಟೆಗಳ ಕಾಲ ಪ್ರೇಕ್ಷಕರನ್ನು ಮೂಕ ವಿಸ್ಮಿತರನ್ನಾಗಿಸಿತು. ಮುಗ್ಧ ಮಕ್ಕಳು, ಪ್ರಬುದ್ಧ ಪಾಲಕರು, ಕಲಾ ಹೃದಯಿಗಳು ಅಪೂರ್ವ ಪ್ರದರ್ಶನಕ್ಕೆ ಮಾರು ಹೋದರು. ರಾಮಾಯಣ ಮತ್ತು ಮಹಾಭಾರತದ ಶ್ಲೋಕಗಳು ಆಸ್ತಿಕ್ಯ ಭಾವವನ್ನು ಉದ್ದೀಪನಗೊಳಿಸಿತು. ಯಕ್ಷಗಾನ ವಾಲ್ಮೀಕಿ ಪಾರ್ತಿಸುಬ್ಬನ ರಚನೆಗಳಿಗೂ ಗೌರವದ ಸ್ಥಾನ ಕಲ್ಪಿಸಲಾಗಿತ್ತು. ಸಾಹಿತಿ ಹಾಗು ಕಲಾವಿದ ಶ್ರೀಧರ ಡಿ.ಎಸ್‌. ಅವರ ಪದ್ಯಗಳು ರಾಮಕೃಷ್ಣ ಮಯ್ಯರ ಕಂಚಿನ ಕಂಠದಲ್ಲಿ ಹರಿದು ಬಂದಾಗ ರಾಮಕೃಷ್ಣ ಕಾಟುಕುಕ್ಕೆಯವರು ಕನಕದಾಸರ ಕೀರ್ತನೆಗಳಿಗೆ ಸ್ವರ ಮಾಧುರ್ಯ ನೀಡಿ ಜೀವ ತುಂಬಿದರು.
ಶ್ರೀಕೃಷ್ಣನ ಲೀಲಾಮೃತ, ರಾಮಲಕ್ಷ್ಮಣರ ಜನನ, ಬಾಲ್ಯದ ವರ್ಣನೆಗಳು ಭಾಗವತಿಕೆ ಮತ್ತು ಸಂಕೀರ್ತನೆಯ ಮೂಲಕ ನೂತನ ಪ್ರಯೋಗಕ್ಕೆ ಸಾಕ್ಷಿಯಾಯಿತು. ನಂದ ಗೋಕುಲದ ಸಂಭ್ರಮ, ಅಯೋಧ್ಯೆಯ ಸಡಗರ, ಸುಂದರಂಗಾನ ಲೀಲಾ ವಿನೋದ, ರಾಮನಾಡಿದ ಅಂಗಳದ ಮೋದ, ತುಂಟತನ ಸಶಕ್ತ ಪದಬಂಧಗಳಲ್ಲಿ ಸುಶ್ರಾವ್ಯವಾಗಿ ಪ್ರಕಟಗೊಂಡಾಗ ಉಪಾಸನಾ ಮತ್ತು ಕಿಶನ್‌ ಯಕ್ಷ ನಾಟ್ಯ ಪ್ರಸ್ತುತಪಡಿಸಿ ಬೆಡಗಿನೊಳಗೆ ಬೆರಗು ಮೂಡಿಸಿದರು. ರಾಮಕೃಷ್ಣದ್ವಯರು ಕೆಲವು ಹಾಡುಗಳನ್ನು ಜತೆಯಾಗಿ ಹಾಡಿದಾಗ ಕಂಡುಬಂದ ರಾಗ ಸಾಮ್ಯತೆ, ತಾಳಲಯ ಸಾಧ್ಯತೆ, ನಾದ ವೈವಿಧ್ಯತೆ ಅನನ್ಯ ಅನುಭವ ಉಂಟು ಮಾಡಿತು.

ಸಿರಿಬಾಗಿಲು ರಾಮಕೃಷ್ಣ ಮಯ್ಯರು ತೆಂಕು ತಿಟ್ಟಿನ ಪ್ರಸಿದ್ದ ಭಾಗವತರು. ರಾಮಕೃಷ್ಣ ಕಾಟುಕುಕ್ಕೆಯವರು ಸಂಕೀರ್ತನೆಯ ಮೂಲಕ ಗರಿಷ್ಠ ಸಾಧನೆ ಮಾಡಿದವರು. ಪ್ರಚಾರ ಬಯಸದ ಈ ಇಬ್ಬರು ಪ್ರತಿಭಾವಂತರು ಅಭಿಮಾನಿಗಳ ವಲಯವನ್ನೇ ವಿಸ್ತರಿಸಿದ್ದಾರೆ. ಕಾಸರಗೋಡಿಗೆ ಇದು ಅಭಿಮಾನದ ವಿಷಯ. ಯಕ್ಷ-ಗಾನ-ನಾಟ್ಯ-ಸಂಕೀರ್ತನಾ ಕಾರ್ಯಕ್ರಮದ ಯಶಸ್ವಿಗೆ ಹಿಮ್ಮೇಳವೂ ಕಾರಣವೆನ್ನದೆ ನಿರ್ವಾಹವಿಲ್ಲ. ಮಧೂರು ಗೋಪಾಲಕೃಷ್ಣ ನಾವಡ(ಚೆಂಡೆ), ಉದಯ ಕಂಬಾರು ಮತ್ತು ಮುರಲೀಮಾಧವ ಮಧೂರು(ಮದ್ದಳೆ), ಜಗದೀಶ್‌ ಉಪ್ಪಳ(ತಬಲ), ಸತ್ಯನಾರಾಯಣ ಐಲ (ಹಾರ್ಮೋನಿಯಂ) ಕೈಚಳಕದಿಂದ ಗಮನ ಸೆಳೆದಿದ್ದಾರೆ. 

ಬಹುಮುಖ ಪ್ರತಿಭೆಯ ಯುವ ಕಲಾವಿದ ಗುರುರಾಜ ಹೊಳ್ಳ ಬಾಯಾರು ಅವರು ಆಕರ್ಷಕ ಧ್ವನಿಯಲ್ಲಿ ನಿರೂಪಣೆ ಮಾಡಿದ್ದು ಕಾರ್ಯಕ್ರಮಕ್ಕೆ ಮೆರುಗು ತಂದಿದೆ. ಶ್ರೀರಾಮನಾಥ ಸಾಂಸ್ಕೃತಿಕ ಭವನ ಸಮಿತಿಯ ಯೋಜನೆಗಳ  ರೂವಾರಿ ಹಾಗೂ ಪ್ರಧಾನ ಸಂಚಾಲಕ ಗುರುಪ್ರಸಾದ್‌ ಕೋಟೆಕಣಿ, ಸಂದೇಶ್‌ ಕೋಟೆಕಣಿ, ಯೋಗೀಶ್‌ ಕೋಟೆಕಣಿ, ಲತಾ ಪ್ರಕಾಶ್‌ ರಾವ್‌, ಜಗದೀಶ್‌ ಕೂಡ್ಲು, ಸತ್ಯನಾರಾಯಣ ಅಮೈ, ದಿವಾಕರ ಪಿ. ಅಶೋಕನಗರ, ಶ್ರೀಕಾಂತ್‌ ಕಾಸರಗೋಡು, ಹರಿಶ್ಚಂದ್ರ ಸೂರ್ಲು, ಭಾಗ್ಯರಾಜ್‌, ಅಶ್ವಿ‌ನಿ ಪ್ರಸಾದ್‌, ಶಿಲ್ಪಾ ವರಪ್ರಸಾದ್‌, ಕಾವ್ಯ ಕುಶಲ, ದಯಾನಂದ ಬೆಳ್ಳೂರಡ್ಕ, ರಾಜಶೇಖರ್‌ ಮೊದಲಾದವರು ತೃತೀಯ ತಿಂಗಳ ಹಬ್ಬದ ವಿವಿಧ ಕಾರ್ಯಕ್ರಮಗಳನ್ನು ಔಚಿತ್ಯಪೂರ್ಣವಾಗಿ ನಿರ್ವಹಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಹತ್ತು ಹಲವು ಯೋಜನೆಗಳನ್ನು ರೂಪಿಸಿ ಮುನ್ನಡೆಯುತ್ತಿರುವ ಶ್ರೀರಾಮನಾಥ ಸಾಂಸ್ಕೃತಿಕ ಭವನ ಸಮಿತಿಗೆ ಅಭಿನಂದನೆಗಳು ಸಲ್ಲಲೇಬೇಕಾಗಿದೆ.

Advertisement

– ರಾಧಾಕೃಷ್ಣ  ಕೆ. ಉಳಿಯತ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next