Advertisement
ಕುಂದಾಪುರ: ಹೈನುಗಾರಿಕೆ ಒಂಥರಾ ಎಟಿಎಂ ಇದ್ದಂತೆ. ಪ್ರತಿದಿನ ಅಥವಾ 10 ದಿನಗಳಿ ಗೊಮ್ಮೆ ಹಣ ದೊರೆಯುತ್ತಿರುತ್ತದೆ. ಮಿಶ್ರಕೃಷಿ ಎಂದರೆ ಮಾಸಿಕ ವೇತನ ಪಡೆದಂತೆ. ಪ್ರತಿ ತಿಂಗಳೂ ಒಂದು ಮೊತ್ತ ದೊರೆಯುತ್ತದೆ. ಅಡಿಕೆ, ತೆಂಗು ಇತ್ಯಾದಿಗಳು ಬೋನಸ್ ಇದ್ದಂತೆ. ವರ್ಷದಲ್ಲಿ ದೊಡ್ಡಮೊತ್ತ ಕಣ್ಣಿಗೆ ಕಾಣಿಸುತ್ತದೆ. 24 ಗಂಟೆಗಳಲ್ಲಿ 15 ಗಂಟೆ ದುಡಿಯಬೇಕಾಗುತ್ತದೆ. ಸಂಬಳಕ್ಕಾಗಿ ದುಡಿದರೆ ಅದರ ಲಾಭ ಸಂಸ್ಥೆಗೆ ಹೋಗುತ್ತದೆ. ಆದರೆ ಇಲ್ಲಿ ಲಾಭ, ನಷ್ಟ ನಮಗೇ. ನಷ್ಟ ಎನ್ನುವುದು ಬರುವುದಿಲ್ಲ. ಲಾಭ ಕಡಿಮೆ ಆಗಬಹುದು ಅಷ್ಟೇ. ಹಾಗಾಗಿ ನಾನು ಕೃಷಿ ಮಾಡು ಖುಷಿ ಪಡು ಎಂದು ನಂಬುತ್ತೇನೆ. ನನ್ನ ವಾಹನದಲ್ಲೂ ಇದನ್ನೇ ಬರೆಸಿದ್ದೇನೆ ಎನ್ನುತ್ತಾರೆ ತೆಕ್ಕಟ್ಟೆ ಸಮೀಪದ ಕೆದೂರಿನ ರಾಮಕೃಷ್ಣ ಬಾಯಿರಿ. ಇವರು ಕೃಷಿ ಇಲಾಖೆಯ ಜಿಲ್ಲಾ, ತಾಲೂಕು ಮಟ್ಟದ ಕೃಷಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಹಟ್ಟಿಯಲ್ಲಿ ವಿವಿಧ ತಳಿಯ 15ರಷ್ಟು ರಾಸುಗಳಿವೆ. ಗೊಬ್ಬರ ಕೃಷಿಗೆ ಬೇಕು. ಗಂಜಲ ತೋಟಕ್ಕೆ ಬೇಕು. ಗೋಮೂತ್ರ ಔಷಧವಾಗಿ ಸಿಂಪಡಿಸಬೇಕು. ಇಷ್ಟಿರಲು ಇನ್ನೇನು ಬೇಕು ಎನ್ನುವ ಬಾಯಿರಿ ಆವರು ದಿನಕ್ಕೆ 130 ಲೀ. ಹಾಲು ಪಡೆಯುತ್ತಾರೆ. ಹಾಲು ಕರೆಯಲು ಯಂತ್ರ, ಹಸುಗಳಿಗೆ ಸೆಖೆಗೆ ನೀರ ಹನಿ ಬೀಳಲು ವ್ಯವಸ್ಥೆ, ತಂಗಾಳಿಗೆ ಫ್ಯಾನ್. ಹದವಾಗಿ ಕೇಳಲು ಹಿತವಾದ ಸಂಗೀತ. ತೆಂಗಿನ ಮರಕ್ಕೆ ಶಬ್ದ
ತೆಂಗಿನಮರ ಶಬ್ದಪ್ರಿಯ!. ಇದು ಬಾಯಿರಿ ಅವರ ಅನುಭವದ ಮಾತು. ತೆಂಗಿನಮರಕ್ಕೆ ಶಬ್ದ ಎಂದರೆ ಬಹಳ ಪ್ರೀತಿ. ಹಾಗಾಗಿ ಪೇಟೆಬದಿಯ, ದೇವಸ್ಥಾನಗಳ ಬದಿಯ ತೆಂಗಿನಮರಗಳಲ್ಲಿ ಫಸಲು ಜಾಸ್ತಿ. ತೆಂಗಿನಮರಕ್ಕೆ ಶಬ್ದ ಕೇಳಿಸಿ ಪ್ರಯೋಗಿಸಿ ನೋಡಿ ಎನ್ನುತ್ತಾರೆ.
Related Articles
2 ಎಕರೆಯಲ್ಲಿ 1,600 ಬಾಳೆ ಬೆಳೆದಿದ್ದಾರೆ. ಗೊನೆ ಮಾಡದೇ ಎಲೆ ಮಾರಾಟ ಮಾಡಿಯೇ ಲಾಭ ಗಳಿಸಬಹುದು ಎಂದು ಲೆಕ್ಕ ಕೊಡುತ್ತಾರೆ ಬಾಯಿರಿ ಅವರು. ಗೊನೆಯಾದರೆ ಒಂದು ಬುಡಕ್ಕೆ 400 ರೂ.ಗಳ ಗೊನೆ ದೊರೆಯಬಹುದು. ಎಲೆಯಾದರೆ 1 ಗಿಡದಲ್ಲಿ 500ರಿಂದ 600 ಎಲೆ ಕಡಿಯಬಹುದು. ಒಂದು ಎಲೆಗೆ 2 ರೂ. ನಿಶ್ಚಿತ. ಗೊನೆ ಬಂದರೆ ಬುಡದಲ್ಲಿ ಬೆಳೆದ ಪುಟ್ಟಪುಟ್ಟ ಗಿಡಗಳನ್ನು ಹೊಸಕಿಹಾಕಬೇಕು. ಬಾಳೆಎಲೆಗಾದರೆ ಎಷ್ಟು ಬುಡಗಿಡ ಬಂದರೂ ಲಾಭವೇ! ತಿಂಗಳಿಗೆ ಕನಿಷ್ಟ 8-10 ಸಾವಿರ ಬಾಳೆಎಲೆ ನೀಡುತ್ತಾರೆ. ಪೂರ್ಣಪ್ರಮಾಣದಲ್ಲಿ ಸಾವಯವ.
Advertisement
ಮಿಶ್ರಕೃಷಿ2 ಎಕರೆಯಲ್ಲಿ ಭತ್ತ ಬೆಳೆದಿದ್ದು ಕಳೆದ ವರ್ಷ 30 ಕ್ವಿಂ.ಈವರ್ಷ 26 ಕ್ವಿಂ. ದೊರೆತಿದೆ. ಮಳೆ ಪರಿಣಾಮ ಕಟಾವು ಸಂದರ್ಭ ಉದುರಿಹೋಗಿದೆ. ಈಗ ಜೋಳ, ಉದ್ದು ಬಿತ್ತಿದ್ದಾರೆ. ಜೋಳ ಕರಾವಳಿಯಲ್ಲಿ ವಿರಳ. ಆದರೆ ಇವರು ಹಸುಗಳಿಗಾಗಿ ಜೋಳ ಬೆಳೆಯುತ್ತಾರೆ. ತೊಂಡೆ, ಬದನೆ, ಸೀಮೆ ಬದನೆ, ಮೆಣಸು, ಹರಿವೆ, ಜೇನು, ಅನನಾಸು, ಪಪ್ಪಾಯಿ, ಗೇರು, ಮಾವು, ಹಲಸು, ಪೇರಳೆ ಹೀಗೆ ತರಹೇವಾರಿ ಬೆಳೆ ಇವರ ಕೃಷಿ ಜಮೀನಿನಲ್ಲಿ ನಳನಳಿಸುತ್ತಿದೆ. 150 ಕೆಜಿಯಷ್ಟು ಪೇರಳೆ ದೊರೆಯುತ್ತದೆ. ಇದೆಲ್ಲವೂ ಅಳಿಲು, ಹಕ್ಕಿಗಳಿಗೇ ಮೀಸಲು. 1,100 ಬುಡ ಮೋಹಿತ್‌ನಗರ ಅಡಿಕೆಯಿದ್ದು, 600 ಬುಡ ಸಿದ್ದಾಪುರ ಅಡಿಕೆಯಿದೆ. ಮೋಹಿತ್‌ನಗರ ಬೆಳೆಜಾಸ್ತಿ, ಬಾಳಿಕೆ ಕಡಿಮೆ. ಸಿದ್ದಾಪುರದ್ದು ಬಾಳಿಕೆ ಜಾಸ್ತಿ, ಬೆಳೆಕಡಿಮೆ. 120 ತೆಂಗಿನಮರಗಳಿದ್ದು 8-10 ಸಾವಿರ ತೆಂಗಿನಕಾಯಿ ದೊರೆಯುತ್ತದೆ. ಕೃಷಿ ಉಸಿರಾಗಿದೆ
ಕೃಷಿಯ ಖುಷಿ ಬೇರೆಲ್ಲೂ ದೊರೆಯದು. ನನ್ನ ತೋಟ ನೋಡಲು ಆಗಮಿಸುವ ಎಲ್ಲರಿಗೂ ನಾನು ಇದೇ ಮಾತು ಹೇಳುತ್ತೇನೆ. ಒಂದು ವರ್ಷ ಕಡಿಮೆ ಫಸಲು ಬಂದರೂ ಮುಂದಿನ ವರ್ಷ ಭರ್ಜರಿ ದೊರೆಯಬಹುದು. ದೇಶ ಸಮೃದ್ಧವಾಗಲು ಕೃಷಿ ಅನಿವಾರ್ಯ. ಪ್ರತಿಯೊಬ್ಬರಿಗೂ ಆಹಾರ ಬೇಕೇಬೇಕು. ಎಲ್ಲ ಕೃಷಿಗಳೂ ಪ್ರಕೃತಿ ಅವಲಂಬಿತ. ಮಳೆ ಹೆಚ್ಚಾದರೆ ಕೆಲವಕ್ಕೆ ಅನುಕೂಲ, ಕೆಲವಕ್ಕೆ ಅನನುಕೂಲ. ಗಿಡಮರಗಳೆಲ್ಲ ನಮ್ಮ ಮನೆ ಸದಸ್ಯರಿದ್ದಂತೆ. ಪ್ರತಿದಿನ ಅವುಗಳನ್ನು ಮುಟ್ಟಿ ತಟ್ಟಿ ಮಾತನಾಡಿಸದಿದ್ದರೆ ಏನೋ ಕಳೆದುಕೊಂಡಂತಾಗುತ್ತದೆ. ಎಲ್‌ಐಸಿ ಏಜೆಂಟ್ ಆಗಿದ್ದವ ಈಗ ಪೂರ್ಣಪ್ರಮಾಣದ ಕೃಷಿಕನಾಗಿ ಖುಷಿ ಅನುಭವಿಸುತ್ತಿದ್ದೇನೆ. ಸಾಫ್ಟ್ ವೇರ್ ಎಂಜಿನಿಯರ್ ಮಕ್ಕಳಿಗೂ ಇನ್ನು ಕೆಲವೇ ವರ್ಷಗಳಲ್ಲಿ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಸಲಹೆ ನೀಡಿದ್ದು ಅವರೂ ಒಪ್ಪಿದ್ದಾರೆ. 20 ವರ್ಷದ ಹಿಂದೆ ಕೃಷಿ ಜಮೀನು ಖರೀದಿಸಿ 13 ವರ್ಷಗಳಿಂದ ಸತತವಾಗಿ ಕೃಷಿ ಯಲ್ಲಿ ತೊಡಗಿಸಿಕೊಂಡಿದ್ದೇನೆ.
-ರಾಮ ಕೃಷ್ಣ ಬಾಯಿರಿ
ಕೆದೂರು ಹೆಸರು: ರಾಮಕೃಷ್ಣ ಬಾಯಿರಿ, ಕೆದೂರು
ಏನೇನು ಕೃಷಿ: ಬಾಳೆ, ಅಡಿಕೆ, ತೆಂಗು, ಭತ್ತ
ಎಷ್ಟು ವರ್ಷ:13
ಕೃಷಿ ಪ್ರದೇಶ:10 ಎಕರೆ
ಸಂಪರ್ಕ:7019942217 -ಲಕ್ಷ್ಮೀ ಮಚ್ಚಿನ