ಮುಂಬಯಿ: ಕ್ರಿಕೆಟ್ ಜಗತ್ತಿನ ಸರ್ವಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡುಲ್ಕರ್ ಅವರ ಬಾಲ್ಯ ಕಾಲದ ತರಬೇತುದಾರ ರಮಾಕಾಂತ್ ವಿಟuಲ್ ಅಚ್ರೇಕರ್ ಇನ್ನಿಲ್ಲ. 86ರ ಹರೆಯದ ಅಚ್ರೇಕರ್ ಬುಧವಾರ ಮುಂಬಯಿಯಲ್ಲಿ ನಿಧನ ಹೊಂದಿದರು. ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.
ತರಬೇತಿ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಳಿಗಾಗಿ ಅಚ್ರೇಕರ್ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಹಾಗೆಯೇ ಭಾರತದ ಪದ್ಮಶ್ರೀ ಪ್ರಶಸ್ತಿಗೂ ಭಾಜನರಾಗಿದ್ದರು.
ಸಚಿನ್ ತೆಂಡುಲ್ಕರ್ ಜತೆಗೆ ವಿನೋದ್ ಕಾಂಬ್ಳಿ, ಪ್ರವೀಣ್ ಆಮ್ರೆ, ಸಮೀರ್ ದಿಘೆ, ಬಲ್ವಿಂದರ್ ಸಿಂಗ್ ಸಂಧು ಅವರಂತಹ ದಿಗ್ಗಜರೂ ಅಚ್ರೇಕರ್ ಗರಡಿಯಲ್ಲಿ ಬೆಳೆದವರು ಎನ್ನುವುದು ಗಮನಾರ್ಹ.
ಸಚಿನ್ ತೆಂಡುಲ್ಕರ್ ಬಾಲ್ಯದಿಂದದಲೇ ಅಚ್ರೇಕರ್ ಮಾರ್ಗದರ್ಶನದಲ್ಲಿ ಕ್ರಿಕೆಟ್ ಕಲಿಯಲು ಆರಂಭಿಸಿದರು. ಮುಂಬಯಿಯ ದಾದರ್‌ನಲ್ಲಿರುವ ಶಿವಾಜಿ ಪಾರ್ಕ್‌ನಲ್ಲಿ ಅಚ್ರೇಕರ್ ಕ್ರಿಕೆಟ್ ತರಬೇತಿ ನೀಡುತ್ತಿದ್ದರು. ಸಚಿನ್ ಪ್ರತಿಭೆಯನ್ನು ಗುರುತಿಸಿ, ಅವರನ್ನು ತಿದ್ದಿ ತೀಡಿ, ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ಅದ್ಭುತ ರೀತಿಯಲ್ಲಿ ಹೊರ ತೆಗೆದದ್ದು ಅಚ್ರೇಕರ್ ಹೆಗ್ಗಳಿಕೆ. ಕ್ರಿಕೆಟ್ ಪಂದ್ಯಗಳಿರುವಲ್ಲೆಲ್ಲ ಮರಿ ಸಚಿನ್‌ನನ್ನು ತಮ್ಮ ಸ್ಕೂಟರ್ ಮೇಲೆ ಕರೆದುಕೊಂಡು ಹೋಗುತ್ತಿದ್ದುದ್ದು ಅಚ್ರೇಕರ್ ಹಾಗೂ ತೆಂಡುಲ್ಕರ್ ನಂಟಿಗೆ ಸಾಕ್ಷಿ. ಅಚ್ರೇಕರ್ ತರಬೇತಿ ಪರಿಣಾಮ ಸಚಿನ್ 16ನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಲಗ್ಗೆ ಇರಿಸಿದರು. ಮುಂದಿನದು ಇತಿಹಾಸ. ಶಿಕ್ಷಕರ ದಿನದಂದು ತೆಂಡುಲ್ಕರ್ ತಮ್ಮ ಗುರುಗಳನ್ನು ಭೇಟಿಯಾಗಿ ಆಶೀರ್ವಾದ ಪಡೆಯುತ್ತಿದ್ದರು.
ಬಿಸಿಸಿಐ ಸಂತಾಪ
ಅಚ್ರೇಕರ್ ನಿಧನಕ್ಕೆ ಬಿಸಿಸಿಐ ಸಂತಾಪ ಸೂಚಿಸಿದೆ. ಅಚ್ರೇಕರ್ ಕೇವಲ ಖ್ಯಾತನಾಮ ಕ್ರಿಕೆಟಿಗರನ್ನು ಮಾತ್ರ ಸೃಷ್ಟಿಸಲಿಲ್ಲ, ಅವರನ್ನು ಯೋಗ್ಯ ಮನುಷ್ಯರನ್ನಾಗಿಯೂ ಮಾಡಿದರು ಎಂದು ಬಿಸಿಸಿಐ ಬಣ್ಣಿಸಿದೆ.