Advertisement

ಸುನ್ನಾಳದಲ್ಲಿ ಕವಿಯಿತು ಶೂನ್ಯ

02:55 PM Aug 24, 2019 | Naveen |

ಬೆಳಗಾವಿ: ಕಳೆದ ನಾಲ್ಕೈದು ವರ್ಷಗಳಿಂದ ಸತತ ನಮಗೆ ನದಿ ನೀರು ಬಿಡಿ ಎಂದು ಗ್ರಾಮಸ್ಥರು ಗೋಳಿಟ್ಟರೂ ನೀರು ಬರಲಿಲ್ಲ. ಈಗ ದಯಮಾಡಿ ನೀರು ಬಿಡಬೇಡಿ. ನಿಮಗೆ ಕೈಮುಗಿಯುತ್ತೇವೆ. ಬಿಡುವುದೇ ಆಗಿದ್ದರೆ ಮೊದಲೇ ತಿಳಿಸಿಬಿಡಿ ಎನ್ನುತ್ತಿದ್ದಾರೆ.

Advertisement

ಮಲಪ್ರಭೆಯ ಮುನಿಸಿನಿಂದ ಸಂಪೂರ್ಣ ಕಂಗೆಟ್ಟು ಹೋಗಿರುವ ರಾಮದುರ್ಗ ತಾಲೂಕಿನ ಸುನ್ನಾಳ ಗ್ರಾಮದ ಜನರ ರೋದನ ಇದು. ನದಿ ತೀರದ ಈ ಗ್ರಾಮದ ಜನರ ಬದುಕು ನಿಜಕ್ಕೂ ದುರಂತಮಯ. ನೆರೆ ಸಂಪೂರ್ಣ ನಿಂತಿದೆ. ಸಾಕಷ್ಟು ಅವಾಂತರ ಸೃಷ್ಟಿಸಿದ್ದ ಮಲಪ್ರಭೆ ಸಹ ಪೂರ್ಣ ಶಾಂತವಾಗಿದ್ದಾಳೆ. ಆದರೆ ಕನಸಿನಲ್ಲಿ ಊಹಿಸದಷ್ಟು ವಿನಾಶ ಸೃಷ್ಟಿಸಿ ಇಡೀ ಬದುಕೇ ಕೊಚ್ಚಿಕೊಂಡು ಹೋಗುವಂತೆ ಮಾಡಿದೆ.

ಈಗ ಸುನ್ನಾಳ ಗ್ರಾಮದ ಜನರು ಹೆಳುವುದು ಒಂದೇ ಮಾತು. ನಮ್ಮ ಕಥೆ ಭಗವಂತನಿಗೇ ಗೊತ್ತು. ಎರಡು ದಿನ ರಾತ್ರಿ ಬಂದ ನೀರು ನಮ್ಮ ಬದುಕನ್ನೇ ಅಲ್ಲೋಲ ಕಲ್ಲೋಲ ಮಾಡಿತು.

ಬಂದವರಿಗೆ ಏನು ಹೇಳಬೇಕು. ಏನು ತೋರಿಸಬೇಕು ಗೊತ್ತಾಗುತ್ತಿಲ್ಲ. ಎಲ್ಲವೋ ದಿಕ್ಕುತಪ್ಪಿಸಿದೆ ಎಂದು ಗ್ರಾಮದ ಜನರು ಕಣ್ಣೀರು ಹಾಕುತ್ತಲೇ ಗೋಳು ತೋಡಿಕೊಳ್ಳುತ್ತಿದ್ದಾರೆ.

ಇಲ್ಲಿ ಪ್ರಕೃತಿಯ ಮೇಲೆ ಜನರ ಸಿಟ್ಟಿಲ್ಲ. ಮಲಪ್ರಭೆಯ ಬಗ್ಗೆ ಸಹ ಕೋಪವಿಲ್ಲ. ಅಸಮಾಧಾನ ಹಾಗೂ ಬೇಸರ ಇರುವುದು ಮಲಪ್ರಭಾ ಜಲಾಶಯದ ಅಧಿಕಾರಿಗಳ ಮೇಲೆ. ಒಮ್ಮೆಲೇ ಅಪಾರ ಪ್ರಮಾಣದಲ್ಲಿ ನೀರು ಬಿಟ್ಟಿದ್ದು ಇಷ್ಟೆಲ್ಲಾ ಅನಾಹುತಕ್ಕೆ ಕಾರಣ ಎಂಬುದು ಗ್ರಾಮದ ಜನರ ದೂರು.

Advertisement

ಕಳೆದ ನಾಲ್ಕೈದು ವರ್ಷಗಳಿಂದ ನಮಗೆ ನೀರು ಕೊಡಿ ಎಂದು ಕೇಳುತ್ತಲೇ ಬಂದಿದ್ದೆವು. ಶಾಸಕರು ಹಾಗೂ ಅಧಿಕಾರಿಗಳಿಗೆ ಮನವಿ ಮಾಡದ ದಿನಗಳೇ ಇಲ್ಲ. ನೀರು ಬಿಡ್ರಿ ಎಂದು ಗೋಗರೆದೆವು. ಆಗ ಯಾವಾಗ ಕೇಳಿದರೂ ಹುಬ್ಬಳ್ಳಿಗೆ ಬೇಕು ಎಂದು ನಮಗೆ ನೀರು ಕೊಡಲೇ ಇಲ್ಲ. ಈಗ ರಾತೋರಾತ್ರಿ ಮನಸೋ ಇಚ್ಛೆ ನೀರು ಬಿಟ್ಟರು. ಒಂದೇ ಪ್ರಮಾಣದಲ್ಲಿ ನೀರು ಬಿಟ್ಟಿದ್ದರೆ ಏನೂ ಆಗುತ್ತಿರಲಿಲ್ಲ. ಎಲ್ಲವೂ ನಮ್ಮ ದುರ್ದೈವ ಎಂದು ಗ್ರಾಮದ ರೈತ ಶಂಕ್ರಪ್ಪ ನರಗುಂದ ಹೇಳಿದಾಗ ವಾಸ್ತವ ಸ್ಥಿತಿಯ ಪರಿಚಯವಾಗುತ್ತದೆ.

ಒಮ್ಮೆಲೇ ಭಾರೀ ನೀರು ಬಿಟ್ಟರು. ಎರಡು ದಿನಗಳಲ್ಲಿ ಎಲ್ಲ ಅನಾಹುತಗಳು ನಡೆದುಹೋದವು. ಈಗ ಹೊಳೆಯಲ್ಲಿ ಮೊಣಕಾಲು ನೀರೂ ಇಲ್ಲ. ತುಂಬಿದ್ದ ಹೊಳೆ ಖಾಲಿಯಾಗಿದೆ. ನೀರಿನ ಜೊತೆ ಮನೆಯೂ ಹೋಯಿತು. ಬೆಳೆಯೂ ಕೊಚ್ಚಿ ಹೋಯಿತು. ಮುಂದಿನ ದಾರಿ ಕಾಣಿಸುತ್ತಿಲ್ಲ ಎಂದು ವೀರೇಂದ್ರ ಪಾಟೀಲ ಆತಂಕದಿಂದಲೇ ನೋವು ಬಿಚ್ಚಿಡುತ್ತಾರೆ.

400 ಕ್ಕೂ ಹೆಚ್ಚು ಮನೆಗಳಿರುವ ಸುನ್ನಾಳ ಗ್ರಾಮದ ಜನ ಒಮ್ಮೆಯೂ ಇಷ್ಟೊಂದು ಪ್ರಮಾಣದಲ್ಲಿ ನೀರು ನೋಡಿಲ್ಲ. ಪ್ರತಿ ವರ್ಷ ಪ್ರವಾಹದ ಸ್ಥಿತಿ ಬಂದರೂ ಯಾವತ್ತೂ ಆತಂಕ ಸೃಷ್ಟಿಮಾಡಿರಲಿಲ್ಲ. 2005 ರಲ್ಲಿ ಸಾಕಷ್ಟು ನೀರು ಬಂದಿತ್ತು. ಆಗಲೂ ನೆರೆ ಹಾವಳಿ ಉಂಟಾಗಿತ್ತು. ಆದರೆ ಯಾವುದೇ ಅನಾಹುತವಾಗಿರಲಿಲ್ಲ. ಈ ಹಿಂದೆ ಯಾವತ್ತೂ ನಮಗೆ ಹೆದರಿಕೆ ಆಗಿರಲೇ ಇಲ್ಲ. ಆದರೆ ಈ ಬಾರಿ ಎಲ್ಲವೂ ನಾಶವಾಗಿದೆ. ನೆರೆ ಹೊಡೆತಕ್ಕೆ ಇಡೀ ಗ್ರಾಮವೇ ಮುಳುಗಿ ಹೋಗಿತ್ತು. ಆಧಿಕಾರಿಗಳಿಗೆ ನಮ್ಮ ಮನೆಯಲ್ಲಿ ಏನಿತ್ತು ಇಲ್ಲ ಎಂದು ತೋರಿಸಲು ಏನೂ ಉಳಿದೇ ಇಲ್ಲ ಎಂದು ಕಾಶಪ್ಪ ಬಳಿಗೇರ ಹೇಳುತ್ತಾರೆ.

ಊರಿಗೇ ಊರೇ ಕೊಚ್ಚಿಕೊಂಡು ಹೋಗಿದೆ. ಗ್ರಾಮದ ಹನುಮಂತ ದೇವರ ದೇವಸ್ಥಾನದ ಕಳಸ ತೇಲಿಕೊಂಡು ಹೋಗಿದೆ. ಊರಿನ ಮುಂಭಾಗದಲ್ಲಿದ್ದ ಬೃಹತ್‌ ಮರ ಧರೆಗೆ ಉರುಳಿದೆ. ಮನೆಯಲ್ಲಿದ್ದ ಪಾತ್ರೆ ಸಾಮಾನುಗಳು ನೀರು ಪಾಲಾಗಿವೆ. ನೀರಿನಲ್ಲಿ ಮನೆ ಎಲ್ಲಿದೆ. ರಸ್ತೆ ಎಲ್ಲಿದೆ ಎಂಬುದು ಏನೂ ಕಾಣಿಸುತ್ತಿರಲಿಲ್ಲ ಎಂದು ಗ್ರಾಮದ ಜನ ತಮ್ಮ ಅನುಭವಗಳನ್ನು ಬಿಚ್ಚಿಡುತ್ತಾರೆ.

ಗ್ರಾಮದ ಕೆಲ ಮನೆಗಳನ್ನು ಬಿಟ್ಟರೆ ಎಲ್ಲವೂ ನೀರು ಪಾಲಾಗಿವೆ. ಇರುವ ಮನೆಗಳು ಅಷ್ಟು ಸುರಕ್ಷಿತವಾಗಿಲ್ಲ. ಗ್ರಾಮದ ಬೀದಿಗಳು ಕೆಸರಿನಿಂದ ತುಂಬಿಕೊಂಡು ಓಡಾಡದ ಸ್ಥಿತಿ ಇದೆ. ಮನೆಯಲ್ಲಿದ್ದ ಒಂದೇ ಒಂದ ವಸ್ತು ಈಗ ಕಾಣುತ್ತಿಲ್ಲ. ನೀರು ಬಂದಾಗ ನಾವೂ ಸಹ ಜೀವ ಉಳಿದರೆ ಸಾಕು ಎಂದು ಉಟ್ಟ ಬಟ್ಟೆಯ ಮೇಲೆ ಓಡೋಡಿ ಬಂದೆವು. ವಾರಗಟ್ಟಲೇ ಮರಳಿ ಹೋಗಲಾರದ

ಸ್ಥಿತಿ. ಎಲ್ಲವನ್ನೂ ಕಳೆದುಕೊಂಡು ನಿರ್ಗತಿಕರಾಗಿದ್ದೇವೆ ಎಂದು ಗ್ರಾಮದ ಹುಸೇನಬಿ ಮುಲ್ಲಾ ಹೇಳಿದಾಗ ಕೊಚ್ಚೆಗಳಂತಾಗಿದ್ದ ಗ್ರಾಮದ ಒಳಗಿನ ರಸ್ತೆಗಳು ಕಣ್ಣಿಗೆ ರಾಚಿದವು.

ಆರೇಳು ವರ್ಷಗಳ ನಂತರ ಮಲಪ್ರಭಾ ನದಿಯಲ್ಲಿ ನೀರು ಕಂಡಿದ್ದೇವೆ. ಇಷ್ಟು ವರ್ಷಗಳ ನಂತರ ಈ ಹೊಳೆಯ ನೀರು ಕುಡಿಯುತ್ತಿದ್ದೇವೆ. ಹಾಗೆಂದು ನಾವು ನದಿ ತೀರದಲ್ಲೇ ಇರಬೇಕು ಎಂದು ಬಯಸುವುದಿಲ್ಲ. ಅಪಾಯದ ಅರಿವಾಗಿದೆ. ಸುರಕ್ಷಿತ ಹಾಗೂ ಎಲ್ಲ ಸೌಲಭ್ಯಗಳ ಪ್ರದೇಶ ನಮಗೂ ಬೇಕು. ಅದಕ್ಕಿಂತ ಮೊದಲು ಈಗ ಆಗಿರುವ ಅನಾಹುತಗಳನ್ನು ಸರಿಪಡಿಸಲು ನೆರವಾಗಬೇಕು ಎಂದು ಶಂಕ್ರಪ್ಪ ಹೇಳಿದರು.

ಈಗ ನಾವಂತೂ ಸಂಪೂರ್ಣ ಸರಕಾರವನ್ನೇ ನಂಬಿಕೊಂಡಿದ್ದೇವೆ. ಪರಿಹಾರದ ಜೊತೆಗೆ ನಮಗೆ ನೆಮ್ಮದಿಯ ಭರವಸೆ ಬೇಕು. ಈಗ ಕೊಡುವ ಪರಿಹಾರ ಎಷ್ಟು ದಿನ ಸಾಲುತ್ತದೆ. ಶಾಶ್ವತ ಸೂರು ಹಾಗೂ ಉದ್ಯೋಗ ಬೇಕು ಎಂಬುದು ಗ್ರಾಮದ ಜನರ ಕಳಕಳಿಯ ಮನವಿ.

Advertisement

Udayavani is now on Telegram. Click here to join our channel and stay updated with the latest news.

Next