ರಾಮದುರ್ಗ: ಮದ್ಯದಂಗಡಿ ಬಂದ ಮಾಡುವಂತೆ ಆಗ್ರಹಿಸಿ ತಾಲೂಕಿನ ಗುತ್ತಿಗೋಳಿ-ಹೊಸಕೋಟಿ ಗ್ರಾಮಸ್ಥರು ಹಾಗೂ ಮಹಿಳಾ ಸ್ವಸಹಾಯ ಸಂಘಗಳ ಸ್ತ್ರೀಯರು, ಯುವಕ ಮಂಡಳದ ಸದಸ್ಯರು ಮಂಗಳವಾರ ಸಂಜೆ ಮದ್ಯದಂಗಡಿ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಗ್ರಾಮಸ್ಥರು ಮಾತನಾಡಿ, ಗುತ್ತಿಗೋಳಿ-ಹೊಸಕೋಟಿಯಲ್ಲಿ 3 ವರ್ಷಗಳಿಂದ ಮದ್ಯದಂಗಡಿ ಇದ್ದು, ಅದನ್ನು ಸಂಪೂರ್ಣ ಬಂದ್ ಮಾಡುವಂತೆ ಹಲವು ಬಾರಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಶೀಘ್ರವೇ ಮದ್ಯಂದಗಡಿ ಬಂದ್ ಮಾಡುವಂತೆ ಒತ್ತಾಯಿಸಿದರು.
ಗುತ್ತಿಗೋಳಿ -ಹೊಸಕೋಟಿ ಗ್ರಾಮವು ಬಹುದೊಡ್ಡ ಗ್ರಾಮವಾಗಿದ್ದು, ಸ್ಥಳೀಯವಾಗಿಯೇ ಮದ್ಯ ದೊರೆಯುವುದರಿಂದ ಚಿಕ್ಕ ಮಕ್ಕಳು ಸಹ ಮದ್ಯದ ಚಟಕ್ಕೆ ಅಂಟಿಕೊಂಡು ಅನೇಕ ಕುಟುಂಬಗಳು ಬೀದಿಗೆ ಬಂದಿವೆ. ಕುಡುಕರು ಕುಡಿದು ಬಂದ್ ಅಮಲಿನಲ್ಲಿ ಪತ್ನಿ ಮಕ್ಕಳೊಂದಿಗೆ ಜಗಳವಾಡಿಕೊಂಡು ಅನೇಕ ಕುಟುಂಬಗಳಲ್ಲಿ ನೆಮ್ಮದಿ ಮಾಯವಾಗಿ ಹಲವು ಕುಟುಂಬಗಳು ಬೀದಿಗೆ ಬಂದಿವೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಗ್ರಾಮದಲ್ಲಿ ಕುಡುಕರ ಅತೀರೇಕಕ್ಕೇರಿದ್ದು, ಗ್ರಾಮದಲ್ಲಿ ನೆಮ್ಮದಿ ಮಾಯವಾಗಿದೆ. ಕಾರಣ ಗ್ರಾಮದಲ್ಲಿರುವ ಮದ್ಯದಂಗಡಿಯ ಪರವಾನಿಗೆ ಬಂದ್ ಮಾಡಬೇಕೆಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಲಿಖೀತ ಹಾಗೂ ಮೌಖೀಕ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಮುಂದಾದರು ಸಂಬಂಧಪಟ್ಟ ಇಲಾಖೆಯವರು ಎಚ್ಚೆತ್ತುಕೊಂಡು ಮದ್ಯದಂಗಡಿ ಬಂದ್ ಮಾಡಬೇಕು. ಇಲ್ಲವಾದಲ್ಲಿ ಗ್ರಾಮದ ಮಹಿಳೆಯರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಮಹಿಳೆಯರು ಎಚ್ಚರಿಕೆ ನೀಡಿದರು.
ಪ್ರತಿಭಟನಾ ಸ್ಥಳಕ್ಕಾಗಮಿಸಿದ ಅಬಕಾರಿ ಇಲಾಖೆಯ ಡಿವೈಏಸ್‌ಪಿ ಶಿವಲಿಂಗಪ್ಪ ಬನಹಟ್ಟಿ, ಪಿಎಸ್‌ಐ ಮಲ್ಲಪ್ಪ ಪಡಸಲಗಿ ಇಲಾಖೆ ಹಾಗೂ ಸರಕಾರದ ನೀತಿ ನಿಯಮಗಳಿಗೆ ತಕ್ಕಂತೆ ಗ್ರಾಮದ ಮಹಿಳೆಯರ ಒತ್ತಾಯ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲು ಮೇಲಧಿಕಾರಿಗಳಿಗೆ ವರದಿ ನೀಡಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿ , ಇಲಾಖೆಯ ಮುಂದಿನ ಆದೇಶದವರೆಗೆ ಅಂಗಡಿಗೆ ಬಿಗ್ ಹಾಕುವಂತೆ ಸೂಚಿಸಿದರು.
ಪ್ರತಿಭಟನೆಯಲ್ಲಿ ಗ್ರಾಮದ ಮಹಿಳಾ ಸಂಘಗಳ ಮುಖಂಡೆ ಹಾಗೂ ತಾಪಂ ಸದಸ್ಯೆ ವಿಜಯಲಕ್ಷ್ಮೀ ನಾಡಗೌಡರ, ಮುಖಂಡರಾದ ಈರಯ್ಯ ಮಠಪತಿ, ಹಣಮಂತಗೌಡ ಕೃಷ್ಣಗೌಡರ, ಗಿರೀಶ ನಾಡಗೌಡರ, ಬಸವರಾಜ ನಾಡಗೌಡರ, ಮಹಾಲಿಂಗಪ್ಪ ಕೃಷ್ಣಗೌಡರ, ಕೃಷ್ಣಾ ಈರಡ್ಡಿ, ಇಂದಿರಾಬಾಯಿ ನಾಯಕ, ಶಂಕ್ರಯ್ಯ ವಿರಕ್ತಮಠ, ಲಕ್ಷ್ಮಣ ದಳವಾಯಿ ಸೇರಿದಂತೆ ಇತರರು ಇದ್ದರು.