ರಾಮದುರ್ಗ: ದಲಿತ ಹಕ್ಕು ಸಂರಕ್ಷಣೆಯ ತ್ರೈಮಾಸಿಕ ಸಭೆಯಲ್ಲಿ ದಲಿತ ಸಮುದಾಯದವರ ತೊಂದರೆಗಳನ್ನು ನಿವಾರಿಸದಿದ್ದರೆ ಸಭೆ ನಡೆಸಿ ಪ್ರಯೋಜನವಿಲ್ಲ. ಮುಂದಿನ ತ್ರೈಮಾಸಿಕ ಸಭೆಯ ಒಳಗಾಗಿ ಎಲ್ಲ ಸಮಸ್ಯೆಗಳನ್ನು ಬಗೆ ಹರಿಸದಿದ್ದರೆ ಮುಂದಿನ ಸಭೆ ಬಹಿಷ್ಕರಿಸುವುದಾಗಿ ದಲಿತ ಸಂಘಟನೆಯ ಪದಾಧಿಕಾರಿಗಳು ಎಚ್ಚರಿಕೆ ನೀಡಿದರು.
ಸ್ಥಳೀಯ ಮಿನಿ ವಿಧಾನ ಸೌಧದ ಸಭಾಭವನದಲ್ಲಿ ಬುಧವಾರ ಜರುಗಿದ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದ ದಲಿತ ಸಮುದಾಯದ ನಾಯಕರು, ಕಳೆದ ಮೂರು ಸಭೆಗಳಲ್ಲಿ ಹಳೇ ಪೊಲೀಸ್ ಠಾಣೆಯಿಂದ ಪೂರ್ವದ ಅಂಬೇಡ್ಕರ್ ಕಾಲೋನಿವರೆಗಿನ ರಸ್ತೆಗೆ ಡಾ| ಬಾಬಾ ಸಾಹೇಬ ಅಂಬೇಡ್ಕರ ರಸ್ತೆ ಎಂದು ನಾಮಕರಣ ಮಾಡಿದ್ದರೂ ಅಲ್ಲಿರುವ ವ್ಯಾಪಾರ ಮಳಿಗೆಗಳ ಮೇಲೆ ಅಂಬೇಡ್ಕರ ರಸ್ತೆ ಎಂದು ಬರೆಯಿಸಿರುವುದಿಲ್ಲ. ಈ ಕುರಿತು ಅನೇಕ ಸಭೆಗಳಲ್ಲಿ ಚರ್ಚೆಯಾದರೂ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಿಲ್ಲ. ಹೀಗಾದರೆ ಮುಂದೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಎಲ್ಲ ವ್ಯಾಪಾರಸ್ಥರಿಗೆ ಪುರಸಭೆಯಿಂದ ನೋಟಿಸ್ ಜಾರಿ ಮಾಡಲಾಗಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸುತ್ತಿದ್ದಂತೆ ಸ್ವಲ್ಪ ಗದ್ದಲದ ವಾತಾವರಣ ನಿರ್ಮಾಣಗೊಂಡಿತು. ಕೇವಲ ನೋಟಿಸ್ ಜಾರಿ ಮಾಡಿದರೆ ಸಾಲದು ನಾಮಫಲಕದಲ್ಲಿ ಅಂಬೇಡ್ಕರ್ ಬೀದಿ ಎಂದು ಬರೆಯಿಸದ ವ್ಯಾಪಾರಸ್ಥರ ಪರವಾನಿಗೆ ರದ್ದು ಪಡಿಸಬೇಕು ಎಂದು ದಲಿತ ನಾಯಕರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ, ಕಳೆದ ಸಭೆಗಳಲ್ಲಿ ಚರ್ಚಿಸಿದಂತೆ ಪುರಸಭೆಯು ನೀಡಿದ ನೋಟಿಸ್‌ಗೆ ವ್ಯಾಪಾರಸ್ಥರು ಸ್ಪಂದಿಸುತ್ತಿಲ್ಲ. ತಹಶೀಲ್ದಾರರು ಮತ್ತು ಮುಖ್ಯಾಧಿಕಾರಿಗಳು ಮುತುವರ್ಜಿ ವಹಿಸಿ ಅಧಿಕಾರಿಗಳೇ ನಾಮಫಲಕಗಳ ಮೇಲೆ ಡಾ| ಬಾಬಾ ಸಾಹೇಬ ಅಂಬೇಡ್ಕರ್ ರಸ್ತೆ ಎಂದು ಬರೆಯಿಸಲು ಸಭೆಯು ಒಪ್ಪಿಗೆ ನೀಡಿತು.
ತಾಲೂಕಿನ ಒಟ್ಟು 18 ಲಂಬಾಣಿ ತಾಂಡಾಗಳಲ್ಲಿ ಐದಾರು ತಾಂಡಾಗಳು ಮಾತ್ರ ಕಂದಾಯ ಗ್ರಾಮಗಳಾಗಿ ಪರಿವರ್ತನೆಗೊಂಡಿವೆ. ಉಳಿದಂತೆ ತಾಂಡೆಗಳು ಕಂದಾಯ ಗ್ರಾಮ ಆಗಿರದೇ ಇರುವುದರಿಂದ ಮನೆ ನಿರ್ಮಿಸಿಕೊಳ್ಳಲು ಅರಣ್ಯ ಇಲಾಖೆಯ ಕಾನೂನುಗಳು ತೊಡಕಾಗಿವೆ. ಅರಣ್ಯ ಇಲಾಖೆಯ ಪರವಾನಿಗೆ ನೀಡಿ ತಾಂಡಾ ವಾಸಿಗಳಿಗೆ ಮನೆ ನಿರ್ಮಿಸಿಕೊಳ್ಳಲು ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಗಡದಗಲ್ಲಿಯ ಏಳು ಕುಟುಂಬಗಳಿಗೆ ತೊಂದರೆಯಾಗುವ ನಿಟ್ಟಿನಲ್ಲಿ ಕಟ್ಟಡವೊಂದು ನಿರ್ಮಾಣಗೊಳ್ಳುತ್ತಿದೆ. ದಲಿತರಿಗೆ ತೊಂದರೆಯಾಗದ ರೀತಿಯಲ್ಲಿ ಕಟ್ಟಡ ಕಟ್ಟಲು ಸೂಚಿಸಬೇಕು.
ಎಸ್ಸಿ-ಎಸ್ಟಿ ಜನರಿಗೆ ಬ್ಯಾಂಕುಗಳಲ್ಲಿ ಸಾಲ ನೀಡಲು ವ್ಯವಸ್ಥಾಪಕರು ನಿರಾಕರಿಸುತ್ತಿದ್ದಾರೆ. ದಲಿತ ಜನಾಂಗಕ್ಕೆ ಸಕಾಲದಲ್ಲಿ ಸಾಲ ನೀಡುವಂತೆ ಸೂಚಿಸಬೇಕು ಎಂದು ಮನವಿ ಮಾಡಿದರು. ವೇದಿಕೆ ಮೇಲೆ ಶಾಸಕ ಮಹಾದೇವಪ್ಪ ಯಾದವಾಡ, ತಹಶೀಲ್ದಾರ್ ಬಸನಗೌಡ ಕೋಟೂರ, ತಾಪಂ ಇಒ ಎ.ಜಿ. ಪಾಟೀಲ, ಸಿಪಿಐ ಶ್ರೀನಿವಾಸ ಹಂಡಾ, ಸಮಾಜ ಕಲ್ಯಾಣ ಇಲಾಖೆಯ ಎಡಿ ಕೆ.ಎಸ್.ಕರ್ಕಿ, ನ್ಯಾಯವಾದಿಗಳಾದ ಎಸ್.ಎಸ್. ಮಾತನವರ, ವಜ್ರಮಟ್ಟಿ ಇದ್ದರು.
ಸಭೆಯಲ್ಲಿ ದಲಿತ ಮುಖಂಡರಾದ ಡಿ.ಎಲ್. ದೊಡಮನಿ, ಮುರಗೇಶ ಕಂಬಣ್ಣವರ, ಪ್ರಕಾಶ ಹಲಗಿ, ಸಿದ್ದು ಮೇತ್ರಿ ಮುಂತಾದವರು ಉಪಸ್ಥಿತರಿದ್ದರು.