Advertisement

ರಾಮಮಂದಿರ, ಬಿಜೆಪಿ ಒಂದೇ ನಾಣ್ಯದ 2 ಮುಖಗಳು

10:36 AM Oct 01, 2020 | mahesh |

ರಾಮಮಂದಿರ ಹಾಗೂ ಬಾಬರಿ ಮಸೀದಿ ಎಂಬ ಎರಡು ಪದಗಳು ಹಿಂದೂವಾದಿಗಳಿಗೆ, ಅದರಲ್ಲೂ ವಿಶೇಷವಾಗಿ ಬಿಜೆಪಿಗೆ ಬಹುದೊಡ್ಡ ರಾಜಕೀಯ ಶಕ್ತಿಯನ್ನು ತಂದಂಥ ವಿಚಾರಗಳು. ಬಿಜೆಪಿಯ ಮೂಲ ಸ್ವರೂಪವಾದ ಜನಸಂಘದಿಂದ ಹಿಡಿದು, 1990ರವರೆಗೆ ದಶಕಗಳ ಕಾಲ ಜನಸೇವೆಯಲ್ಲಿ ನಿರತವಾಗಿದ್ದರೂ ಅಲ್ಲಿಯವರೆಗೆ ಸಿಗದಂಥ ರಾಜಕೀಯ ಪ್ರಾಬಲ್ಯ ಬಿಜೆಪಿಗೆ ಸಿಗುವಂತೆ ಮಾಡಿದ್ದೇ ಈ ಎರಡು ವಿಚಾರಗಳು…

Advertisement

“ಸಿಬಿಐ ವಿಶೇಷ ಕೋರ್ಟ್‌ನ ಈ ತೀರ್ಪು ರಾಮಮಂದಿರ ಹೋರಾಟದಲ್ಲಿ ಬಿಜೆಪಿ ಇಟ್ಟಿದ್ದ ನಂಬಿಕೆಯನ್ನು ನಿರೂಪಿಸಿದೆ’..
ಇದು, ಬಾಬರಿ ಮಸೀದಿ ಧ್ವಂಸ ಪ್ರಕರಣ ಕುರಿತಾದ ತೀರ್ಪು ಹೊರಬೀಳುತ್ತಿದ್ದಂತೆ ಬಿಜೆಪಿ ಧುರೀಣ, ಈ ಪ್ರಕರಣದ ಆರೋಪಿಯಾಗಿದ್ದ ಎಲ್‌.ಕೆ. ಅಡ್ವಾಣಿಯವರ ಹೇಳಿಕೆ. ಅವರ ಈ ಮಾತು, ಶ್ರೀರಾಮ ಮಂದಿರಕ್ಕಾಗಿ ಬಿಜೆಪಿ ನಡೆಸಿದ ದಶಕಗಳ ಹೋರಾಟ ಹಾಗೂ ಅದರಿಂದ ಬಿಜೆಪಿ ಬೆಳೆದು ಬಂದ ಪರಿಯನ್ನು ಸೂಕ್ಷ್ಮವಾಗಿ ವಿವರಿಸುತ್ತದೆ.

ಭಾರತದಲ್ಲಿ ದೇವರು, ದೇವರ ಅವತಾರಗಳು, ಅವಕ್ಕೆ ಸಂಬಂಧಿಸಿದ ಪುರಾಣಗಳು, ದೃಷ್ಟಾಂತಗಳು ಹಾಗೂ ಅಧ್ಯಾತ್ಮ ಜನಜೀವನದ ಅವಿಭಾಜ್ಯ ಅಂಗ. ರಾಮ, ಕೃಷ್ಣ, ಈಶ್ವರ, ಪಾರ್ವತಿ, ದುರ್ಗೆ, ಗಣೇಶ, ಸುಬ್ರಹ್ಮಣ್ಯ ದೇವರುಗಳ ಸ್ವರೂಪಗಳು, ಪುಣ್ಯ ಸ್ಥಳಗಳು, ಪೂಜೆ-ಪುನಸ್ಕಾರಗಳು, ವ್ರತಗಳು, ಆಚರಣೆಗಳು, ಭಜನೆಗಳು, ಕೀರ್ತನೆಗಳು, ಉಪವಾಸ, ಜಾತ್ರೆಗಳು, ಉತ್ಸವಗಳು… ಕೇವಲ ದೇವಸ್ಥಾನಗಳಿಗೆ ಮಾತ್ರ ಸೀಮಿತವಾದಂಥವಲ್ಲ. ಜನಜೀವನದಲ್ಲಿ ಅಡಕವಾಗಿರುವಂಥವು. ಜನರ ದಿನನಿತ್ಯದ ಕಾಯಕಗಳಲ್ಲಿ ಬೇರೂರಿರುವಂಥವು.

ಭಾರತೀಯರ ಮೇಲೆ ಶ್ರೀರಾಮನ ಛಾಯೆ
ಭಾರತೀಯ ಮನಸ್ಸುಗಳ ಮೇಲೆ ದೇವರು-ಅಧ್ಯಾತ್ಮದ ಛಾಯೆ ಅಪಾರ. ಅದರಲ್ಲೂ ಶ್ರೀರಾಮನಂತೂ ಹಿಂದೂಗಳ ಪಾಲಿಗೆ ರೋಲ್‌ ಮಾಡೆಲ್‌. ಹಾಗಾಗಿಯೇ, ರಾಮ ಹಾಗೂ ರಾಮನಿಗೆ ಸಂಬಂಧಿಸಿದ ಎಲ್ಲ ಪಾತ್ರಗಳ ಗುಣವಿಶೇಷತೆಗಳಾದ ರಾಮರಾಜ್ಯ, ರಾಮಬಾಣ, ಲಕ್ಷ್ಮಣ ರೇಖೆ, ದಶಮುಖ… ಇಂಥ ಹತ್ತು ಹಲವು ಪದಗಳು ಜನರ ಮಾತುಗಳಲ್ಲಿ, ಸಾಹಿತ್ಯದಲ್ಲಿ ಹಾಸುಹೊಕ್ಕಾಗಿವೆ.

ನಮ್ಮ ಜನ ಎಷ್ಟು ಶ್ರೀರಾಮನ ಆರಾಧಕರೆಂದರೆ, ಟಿವಿಗಳಲ್ಲಿ ರಾಮಾಯಣ ಬರುವಾಗಲೇ ಟಿವಿಗೆ ಆರತಿ ಮಾಡಿ, ಕುಂಕುಮ ಇಡುತ್ತಿದ್ದರು! ಆಂಧ್ರಪ್ರದೇಶದಲ್ಲಿ ಎನ್‌ಟಿಆರ್‌ ಶ್ರೀರಾಮನ ಪಾತ್ರ ಮಾಡುತ್ತಿದ್ದ ಕಾಲದಲ್ಲಿ ಅವರು ಶ್ರೀರಾಮನ ವೇಷದಲ್ಲಿರುವ ಫೋಟೋಗಳೇ ಮಾರುಕಟ್ಟೆಗಳಲ್ಲಿ ಶ್ರೀರಾಮನ ಫೋಟೋಗಳೆಂದು ಮಾರಲ್ಪಡುತ್ತಿದ್ದವು. ಜನರೂ ಅವನ್ನು ದೇವರ ಗೂಡಿನಲ್ಲಿಟ್ಟು ಪೂಜಿಸುತ್ತಿದ್ದರು! ಅಲ್ಲಿ, ಯಾರೋ ಒಬ್ಬ ವ್ಯಕ್ತಿ ಶ್ರೀರಾಮನ ಪಾತ್ರ ಮಾಡಿದ್ದು ಅನ್ನೋ ಭೇದಕ್ಕಿಂತ ಶ್ರೀರಾಮನನ್ನು ಆ ವ್ಯಕ್ತಿಯಲ್ಲಿ ಕಾಣುತ್ತಿದ್ದ ಭಾವವದು.

Advertisement

ರಥಯಾತ್ರೆಯ ಮಹತ್ವ
ಹೀಗೆ, ಜಾತಿ-ಕುಲ ಬೇಧಗಳನ್ನೂ ಮೀರಿ ಒಬ್ಬ ಆದರ್ಶ ಪುರುಷನಾಗಿ ಭಾರತೀಯ ಸಂಸ್ಕೃತಿಯಲ್ಲಿ, ಭಾರತದ ಜನಜೀವನದಲ್ಲಿ ಹಾಸುಹೊಕ್ಕಾಗಿದ್ದ, ಜನರ ಮಾತು-ಕತೆಯಲ್ಲಿ, ಕಾಯಕದಲ್ಲಿ, ಸಾಹಿತ್ಯದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಅಭಿವ್ಯಕ್ತಗೊಳ್ಳುತ್ತಿದ್ದ ಶ್ರೀರಾಮ, ಜನ್ಮಸ್ಥಳದ ಮೇಲೆ ಪರಕೀಯರ ದಬ್ಟಾಳಿಕೆ ನಡೆದಿದ್ದನ್ನು ಶತಮಾನಗಳಿಂದ ಸಹಿಸಿಕೊಂಡಿದ್ದ ಅಯೋಧ್ಯೆಯ ಹಿಂದೂಗಳ ನೋವನ್ನು, ಅವರ ಅಸಹಾಯಕತೆಯನ್ನು ಭಾರತದಾದ್ಯಂತ ಇರುವ ಹಿಂದೂಗಳ ಮನಸ್ಸಿಗೆ ತಾಗುವಂತೆ ಮಾಡಿದ್ದು ಬಿಜೆಪಿ.

ಸಾರ್ವಜನಿಕ ಸಭೆಗಳಲ್ಲಿ, ಆಂದೋಲನಗಳಲ್ಲಿ ಈ ವಿಚಾರವನ್ನು ಬಿಜೆಪಿ ಉಲ್ಲೇಖೀಸದೇ ಹೋಗಿದ್ದರೆ, ಆಡ್ವಾಣಿ ರಥಯಾತ್ರೆ ನಡೆಸದೇ ಇದ್ದಿದ್ದರೆ ಬಹುಶಃ ಹಿಂದೂ ಸಮಾಜ ಇಷ್ಟರ ಮಟ್ಟಿಗೆ ಜಾಗೃತವಾಗಿರುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಎಲ್ಲ ಹಿಂದೂಗಳ ನರನಾಡಿಗಳಲ್ಲಿ ಶ್ರೀರಾಮನಿಗಾದ ಅನ್ಯಾಯದ ವಿರುದ್ಧ ಸಿಡಿದೇಳುವ ಶಕ್ತಿ ಹಾಗೂ ಛಾತಿಯನ್ನು ತುಂಬಿಸಿದ್ದು ಬಿಜೆಪಿ. ಈ ಛಾತಿಯನ್ನು, ಸಿಡಿದೇಳುವ ಶಕ್ತಿಯನ್ನು ಮುಗಿಲೆತ್ತರಕ್ಕೆ ಎಬ್ಬಿಸಿದ್ದು ಆಡ್ವಾಣಿ ರಥಯಾತ್ರೆ. 1990ರ ಸೆಪ್ಟಂಬರ್‌-ಅಕ್ಟೋಬರ್‌ನಲ್ಲಿ ಗುಜರಾತ್‌ನ ಸೋಮನಾಥಪುರದಿಂದ ಹೊರಟು, ಅಯೋಧ್ಯೆಯಲ್ಲಿ ಅಂತ್ಯ ಕಂಡಿದ್ದ ಈ ರಥಯಾತ್ರೆ ಭಾರತದ ಇತಿಹಾಸದಲ್ಲಿ ಕಂಡುಬಂದ ಒಂದು ಮಹತ್ವದ ಜನಾಂದೋಲನ. ಭಾರತೀಯ ಸ್ವಾತಂತ್ರ್ಯ ಹೋರಾಟದ ಅನಂತರ ಒಂದಿಡೀ ದೇಶ ಹೀಗೆ ನಿರ್ದಿಷ್ಟ ಉದ್ದೇಶಕ್ಕಾಗಿ ಎದ್ದಿದ್ದ ಮತ್ತೂಂದು ಉದಾಹರಣೆ ಇಲ್ಲ.

ಇದು ಮುಂದೆ ಬಾಬರಿ ಮಸೀದಿ ಧ್ವಂಸ ಪ್ರಕರಣ ಹಾಗೂ ಆನಂತರದ ದಿನಗಳಲ್ಲಿ ಬಿಜೆಪಿಗೆ ರಾಜಕೀಯ ಮೈಲೇಜ್‌ ನೀಡಿತು. ಕೇಂದ್ರದಲ್ಲಿ ವಾಜಪೇಯಿ ನೇತೃತ್ವದಲ್ಲಿ ಬಿಜೆಪಿ ಸಮ್ಮಿಶ್ರ ಸರಕಾರ ರಚಿಸಲು ಕಾರಣವಾಯಿತು. ಇತರ ರಾಜ್ಯಗಳಲ್ಲಿ ತನ್ನ ಬೇರುಗಳನ್ನು ಗಟ್ಟಿಗೊಳಿಸಿ, ಅಲ್ಲಿಯೂ ಅಧಿಕಾರಕ್ಕೆ ಬರಲು ಹಾಗೂ ಇಡೀ ರಾಷ್ಟ್ರದಲ್ಲಿ ಹಿಂದುತ್ವದ ಸಂಕೇತವಾಗಿ ಹೆಮ್ಮರವಾಗಿ ಬೆಳೆಯಲು ಕಾರಣವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next