ಬೇತಮಂಗಲ: ಗ್ರಾಮದ ಪ್ರಮುಖ ಬೀದಿಗಳು ಹಾಗೂ ಬಸ್ ನಿಲ್ದಾಣದಲ್ಲಿ ಖರ್ಜೂರ್, ನಾನಾ ಬಗೆಯ ಹಣ್ಣುಗಳು, ಖಾದ್ಯಗಳ ಖದರ್ ದಾರಿ ಹೋಕರ ಕಣ್ಮನ ಸೆಳೆಯುತ್ತಿದ್ದರೆ ಸಂಜೆ ವೇಳೆಗೆ ಸಮೋಸಾ ಸೇರಿ ಇತರೆ ತಿಂಡಿ ತಿನಿಸುಗಳ ವಾಸನೆ ಪ್ರತಿಯೊಬ್ಬರ ಬಾಯಲ್ಲಿ ನೀರು ತರಿಸುತ್ತಿವೆ.
ಹಿಜರಿ ತಿಂಗಳಲ್ಲಿ ಅತ್ಯಂತ ಶ್ರೆಷ್ಠ ತಿಂಗಳಾಗಿರುವ ರಂಜಾನ್ ಮಾಸ ಆರಂಭವಾಗಿದೆ. ಈ ತಿಂಗಳಲ್ಲಿ ಪ್ರತಿಯೊಬ್ಬ ಮುಸ್ಲಿಂರಿಗೂ ಉಪವಾಸ ಕಡ್ಡಾಯ. ವರ್ಷದ 11 ತಿಂಗಳು ಕಾಯಕಕ್ಕೆ ಮೀಸಲಾಗಿಟ್ಟು, ಒಂದು ತಿಂಗಳು ಪೂರ್ತಿ ಉಪವಾಸ ಮಾಡುವ ಮೂಲಕ ಅಲ್ಲಾನ ಸ್ಮರಣೆ ಮಾಡುವ, ಎಲ್ಲರೂ ಸಂಭ್ರಮಿಸುವ ಬಹುದೊಡ್ಡ ಹಬ್ಬ ರಂಜಾನ್.
ಹಬ್ಬಕ್ಕೆ ಭರ್ಜರಿ ಸಿದ್ಧತೆ: ಬೆಲೆ ಏರಿಕೆ ಬಿಸಿಯ ಮಧ್ಯೆಯೂ ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಹಬ್ಬ ಆಚರಣೆಗೆ ಸಜ್ಜಾಗುತ್ತಿದ್ದಾರೆ. ಗ್ರಾಮದ ಪ್ರಮುಖ ಪ್ರಾರ್ಥನಾ ಮಂದಿರಗಳ ಸುತ್ತಮುತ್ತಲಿನ ಪ್ರದೇಶ, ಮಾರುಕಟ್ಟೆ ಹಾಗೂ ಬೀದಿ ಬದಿಗಳ ತಳ್ಳುಬಂಡಿ ತರಹೇವಾರಿ ಹಣ್ಣುಗಳು, ತಿಂಡಿ, ತಿನಿಸುಗಳು ಮಾರಾಟ ಮಾಡುವವರು, ವ್ಯಾಪಾರಿಗಳು ಸಹ ಹಬ್ಬಕ್ಕೆ ಭರ್ಜರಿ ಸಿದ್ಧತೆಗಳನ್ನು ಕೈಗೊಳ್ಳುತ್ತಿದ್ದಾರೆ.
ಬಿಡುವಿಲ್ಲದ ಕೆಲಸ: ಗ್ರಾಮದ ಪ್ರಮುಖ ಮಸೀದಿ ಇರುವ ಸುತ್ತಮುತ್ತಲ ಪ್ರದೇಶಗಳ ಹೊಟೇಲ್ಗಳಲ್ಲಿ, ತಳ್ಳುವ ಗಾಡಿಗಳಲ್ಲಿ ರಂಜಾನ್ ತಿಂಡಿತಿನಿಸುಗಳ ಜತೆಗೆ ಹಣ್ಣಿನ ಅಂಗಡಿಗಳ ಸಾಲುಗಳು ಮೇಳೈಸಿವೆ. ಸಮೋಸ ಮತ್ತು ಕರ್ಜೂರದ ಜತೆಗೆ ಹಣ್ಣಿನ ಗಾಡಿಗಳಿಗೆ ಇಫ್ತಾರ್ ಬಿಡುವ ವೇಳೆಯಲ್ಲಿ ಬಿಡುವಿಲ್ಲದ ಕೆಲಸ. ಅದುವರೆಗೂ ಹಸಿದಿದ್ದವರನ್ನು ತಣಿಸುವುದು ಇದೇ ಅಂಗಡಿಗಳು. ಪಪ್ಪಾಯ, ಅನಾನಸು, ಬಾಳೆಹಣ್ಣು, ಮೋಸಂಬಿಗೂ ಬೇಡಿಕೆ ಹೆಚ್ಚಿದೆ.
ಗ್ರಾಮದ ಬಸ್ ನಿಲ್ದಾಣದಲ್ಲಿರುವ ದರ್ಬಾರ್ ಹೋಟಲ್ನಲ್ಲಿ ಸಮೋಸ ಹೆಚ್ಚು ಮಾರಾಟವಾಗುತ್ತದೆ. ಸಂಜೆಯಾದರೆ ಸಮೋಸ, ಬೊಂಡಾ, ವಡೆ, ಉದ್ದಿನ ವಡೆಗಳ ವಾಸನೆ ಗ್ರಾಹಕರ ಕೈಬೀಸಿ ಕರೆಯುತ್ತದೆ. ಬೆಳಗ್ಗೆ 4.30ರ ವೇಳೆಯಲ್ಲಿ ಅಂದರೆ ಸೂರ್ಯ ಹುಟ್ಟವ ಮುನ್ನ ಒಂದಷ್ಟು ಆಹಾರ ಸೇವನೆ ಮಾಡುತ್ತಾರೆ. ಮತ್ತೆ ಸಂಜೆವರೆಗೂ ನೀರೂ ಸಹ ಕುಡಿಯುವುದಿಲ್ಲ. ನಂತರ ಸಂಜೆ 5.20ಕ್ಕೆ ಮಸೀದಿಗೆ ತೆರಳಿ ನಮಾಜ್(ಪ್ರಾರ್ಥನೆ) ಮಾಡಿ, 5.30ಕ್ಕೆ ಉಪವಾಸ ಅಂತ್ಯ ಮಾಡಿ ಸಂಜೆ 6.40ಕ್ಕೆ ಆಹಾರ ಸೇವನೆ ಮಾಡುತ್ತಾರೆ. ಸಂಜೆ ಮಸೀದಿಯಲ್ಲಿ ನಮಾಜ್ ಮಾಡಿ ಉಪವಾಸ ಅಂತ್ಯ ಮಾಡುವ ಮುನ್ನಾ ಮುಸ್ಲಿಮರು ಸಮೋಸ ಇತರೆ ಪದಾರ್ಥಗಳನ್ನು ಸೇವನೆ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಸಮೋಸಗಳಿಗೆ 1 ತಿಂಗಳವರೆಗೂ ಹೆಚ್ಚಿನ ಬೇಡಿಕೆ ಇರುತ್ತದೆ.
ಇಲ್ಲಿನ ದರ್ಬಾರ್ ಹೋಟೆಲ್ ಮಾಲಿಕ ಸೈಯದ್ ನವಾಜ್, ಸಹೋದರ ಸೈಯದ್ ನಜೀರ್, ನೌಕರರಾದ ಆಮೀರ್, ಷರೀಫ್, ರಾಜಾ ರೆಡ್ಡಿ ಬೆಳಗ್ಗೆಯಿಂದಲೇ ಸಮೋಸಗಳನ್ನು ತಯಾರಿ ಮಾಡಿಕೊಂಡು ಸಂಜೆ ವೇಳೆಯಲ್ಲಿ ಮಾರಾಟ ಮಾಡುತ್ತಾರೆ.