Advertisement
1977ರ ಜುಲೈ ತಿಂಗಳು. ವಿದ್ಯಾಭ್ಯಾಸಕ್ಕೆ ಬ್ರೇಕ್ ಹಾಕಿ, ಅನಿವಾರ್ಯತೆಗೆ ತಲೆಬಾಗಿ, ಅಪ್ಪನಿಗೆ ಹೋಟೆಲ್ ಉದ್ಯಮದಲ್ಲಿ ಹೆಗಲು ಕೊಟ್ಟಿದ್ದೆ. ಬಿಸಿರಕ್ತ. ಜೀವಶಾಸ್ತ್ರ, ರಸಾಯನಶಾಸ್ತ್ರಗಳಿಗಿಂತಲೂ ಸಿನಿಮಾ ಶಾಸ್ತ್ರವೇ ಅಪ್ಯಾಯಮಾನವೆನಿಸಿತ್ತು. ಚಲನಚಿತ್ರಗಳ ಕುರಿತು ಟೀಕೆ, ವಿಮರ್ಶೆ, ಕಿರುಲೇಖನವನ್ನು ಬರೆಯುತ್ತಿದ್ದೆ.
Related Articles
ನಿನ್‌ಕೂಟ ಮಾತಾಡ್ಬೇಕೂಂತ ಭೋ ದಿವ್ಸಗಳಿಂದ ಆಸೆ. ಅದ್ಕೆ ಈಗ ಕಾಲ ಕೂಡಿ ಬಂದೈತೆ. ಇಂಗೆಲ್ಲ ಏಕವಚನದಾಗೆ ಬರ್ದೆ ಅಂತ ಕೋಪಿಸ್ಕೋಬ್ಯಾಡ. ನಾವಿಬ್ರೂ ಆತ್ಮೀಯರು ಅಂದಮ್ಯಾಗೆ ಬೋವಚನ ಯಾಕೆ? ಹೆಂಗಿದ್ರೂ ನಾನು ಹಳ್ಳಿಯೋನು…….. ಹರಪನಹಳ್ಳಿಯೋನು……..
ಈ ಪತ್ರ, 1977ರ ಆಗಸ್ಟ್ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ನನ್ನ ಸಂತಸಕ್ಕೆ ಪಾರವೇ ಇಲ್ಲ. ಏನೋ ಸಾಧಿಸಿದ ಗರಿಮೆ. ಹಿಂಬದಿಯ ಕಾಲರ್ ಮೇಲೇರಿತ್ತು.
Advertisement
ಸೆಪ್ಟೆಂಬರ್ ಮೊದಲ ವಾರದಲ್ಲಿ ನನ್ನ ಹೆಸರಿಗೊಂದು ಅಂಚೆಯ ಕವರ್ ಬಂದಿತ್ತು. ಒಡೆದು ನೋಡಿದಾಗ ನನ್ನ ಕಣ್ಣನ್ನು ನಾನೇ ನಂಬದಾದೆ. ವಿಷ್ಣುವರ್ಧನ್‌ರವರು ತಮ್ಮದೇ ಲೆಟರ್‌ಹೆಡ್‌ನಲ್ಲಿ ತಮ್ಮ ಸ್ವಹಸ್ತಾಕ್ಷರದಲ್ಲಿ ಬರೆದ ಪತ್ರ! ಜೊತೆಗೆ ಶುಭಾಶಯ ಕೋರಿದ ಒಂದು ಸುಂದರ ಭಾವಚಿತ್ರ. ನನಗೆ ಗಗನವು ಎಲ್ಲೋ ಭೂಮಿಯು ಎಲ್ಲೋ… ಎಂಬಂಥ ಅನುಭವ. ನಾನು ಕನಸು ಕಾಣುತ್ತಿಲ್ಲ ಎಂಬುದನ್ನು ಕಣ್ಣುಜ್ಜಿ ನೋಡಿ ಖಾತ್ರಿ ಪಡಿಸಿಕೊಂಡೆ. ನನ್ನಂಥ ಹುಲು ಅಭಿಮಾನಿಗೆ ಅವತ್ತಿನ ಯಂಗ್ ಸ್ಟಾರ್ ವಿಷ್ಣು ವರ್ಧನ್ ಪತ್ರ ಬರೆಯುವುದೇ? ಜೀವ ವೀಣೆ ನೀಡು ಮಿಡಿತದ ಸಂಗೀತದ ಅನಿರ್ವಚನೀಯ ಆನಂದ. ನಂತರ ತಿಳಿಯಿತು; ಪತ್ರಿಕೆಯವರಿಂದ ನನ್ನ ವಿಳಾಸ ಪಡೆದು ಪತ್ರ ಕಳಿಸಿದ್ದರಂತೆ ವಿಷ್ಣುವರ್ಧನ್. ಇಂತಹ ಆಪ್ತ ವಿಷಯಗಳಿಂದಲೇ ಸರಳತೆಯ ಸಾಕಾರ ಮೂರ್ತಿ, ಹಸನ್ಮುಖೀ, ಚಿನ್ನದಂಥಾ ಮಗ ವಿಷ್ಣು ಅಂದಿಗೂ ಇಂದಿಗೂ ನನ್ನಂಥ ಕೋಟ್ಯಂತರ ಅಭಿಮಾನಿಗಳ ಹೃದಯ ಸಾಮ್ರಾಜ್ಯದಲ್ಲಿ ನೆಲೆಸಿರುವುದು.
ಆ ಪತ್ರ ಇಂದಿಗೂ ನನ್ನ ಸಂಗ್ರಹದಲ್ಲಿ ಗರಿಗರಿಯಾಗಿದೆ. ಈ ಪತ್ರ ಬಂದ ದಿನದಿಂದಲೇ ನನ್ನ ಗೆಳೆಯರ ಬಳಗದಲ್ಲಿ ನಾನು ಹೀರೋ ಆಗಿದ್ದೆ. ವಿಷ್ಣುವರ್ಧನರ ಪತ್ರಮಿತ್ರ ಎಂಬ ಖ್ಯಾತಿಯೂ ನನ್ನದಾಗಿತ್ತು.
ಅಂದಿನ ಆ ಸವಿಸವಿ ನೆನಪು ಇಂದಿಗೂ ಆಗಾಗ ನನ್ನನ್ನು ಎಬ್ಬಿಸಿ ಮುದಗೊಳಿಸಿ ಹೃದಯದೊಳಗಿನ ಗುಬ್ಬಚ್ಚಿಯನ್ನು ಸವರುತ್ತದೆ.
ಕೆ. ಶ್ರೀನಿವಾಸರಾವ್