ಕನ್ನಡ ಚಿತ್ರರಂಗದಲ್ಲಿ “ನಾಗರಹಾವು’ ಚಿತ್ರದ ನಂತರ ಆ ಚಿತ್ರದಷ್ಟೇ ಜನಪ್ರಿಯತೆ ಪಡೆದುಕೊಂಡ ಹೆಸರು ಸಾಹಸಸಿಂಹ ವಿಷ್ಣುವರ್ಧನ್ ನಿರ್ವಹಿಸಿದ್ದ “ರಾಮಾಚಾರಿ’ ಅನ್ನೋ ಹೆಸರು. “ನಾಗರಹಾವು’ ಚಿತ್ರದ ನಂತರ ರವಿಚಂದ್ರನ್ ಅಭಿನಯದಲ್ಲಿ “ರಾಮಾಚಾರಿ’, ಆ ನಂತರ ರಾಕಿಂಗ್ ಸ್ಟಾರ್ ಯಶ್ ಅಭಿನಯದಲ್ಲಿ “ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿ’ ಹೀಗೆ “ರಾಮಾಚಾರಿ’ ಹೆಸರನ್ನು ಮೆಲುಕು ಹಾಕುತ್ತಾ ಹಲವು ಚಿತ್ರಗಳು ಚಂದನವನದ ತೆರೆಮೇಲೆ ಮಿಂಚಿ ಹೋಗಿವೆ.
ಈಗ ಅದೇ “ರಾಮಾಚಾರಿ’ಯ ಹೆಸರನ್ನು ಇಟ್ಟುಕೊಂಡು ಅಪ್ಡೆಟ್ ವರ್ಶನ್‌ನಲ್ಲಿ ಮತ್ತೂಂದು ಚಿತ್ರ ತಯಾರಾಗುತ್ತಿದೆ. ಅಂದಹಾಗೆ, ಆ ಚಿತ್ರದ ಹೆಸರು “ರಾಮಾಚಾರಿ 2.0′ ತಮಿಳಿನಲ್ಲಿ ಈಗಾಗಲೇ ಐದಾರು ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿ ನಟನಾಗಿ ಗುರುತಿಸಿಕೊಂಡಿರುವ, ಕಳೆದ ವರ್ಷ ಕನ್ನಡದಲ್ಲಿ ತೆರೆಕಂಡಿದ್ದ “ರಿವೈಂಡ್’ ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದ, ತೇಜ್ ಈ ಚಿತ್ರದ ಮೂಲಕ ನಾಯಕನಾಗಿ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ಇತ್ತೀಚೆಗಷ್ಟೇ “ರಾಮಾಚಾರಿ 2.0′ ಚಿತ್ರದ ಫಸ್ಟ್‌ಲುಕ್ ಬಿಡುಗಡೆ ಮಾಡಿರುವ ತೇಜ್, ಚಿತ್ರದ ಬಗ್ಗೆ ಒಂದಷ್ಟು ಮಾತನಾಡಿದ್ದಾರೆ. “ಕಳೆದ ಬಾರಿ ತೆರೆಕಂಡ “ರಿವೈಂಡ್’ ಸಿನಿಮಾಕ್ಕೆ ಆಡಿಯನ್ಸ್ ಮತ್ತು ಚಿತ್ರರಂಗ ಕಡೆಯಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ಅದಾದ ನಂತರ ಮುಂದೆ ಯಾವ ಸಿನಿಮಾ ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಹೊಳೆದ ಐಡಿಯಾ ಇದು. ಇದನ್ನೇ ಇಟ್ಟುಕೊಂಡು ಈಗ “ರಾಮಾಚಾರಿ 2.0′ ಟೈಟಲ್‌ನಲ್ಲಿ ಸಿನಿಮಾ ಮಾಡುತ್ತಿದ್ದೇವೆ.
ನಮ್ಮ ಸಿನಿಮಾಕ್ಕೆ ಇಂಥದ್ದೊಂದು ಟೈಟಲ್ ಇಡೋದಕ್ಕೂ ಒಂದು ಬಲವಾದ ಕಾರಣವಿದೆ. ಈ ಸಿನಿಮಾದ ಹೀರೋ ತುಂಬ ಅಗ್ರೆಸಿವ್ ಆಗಿರುತ್ತಾನೆ. “ನಾಗರಹಾವು’ ಸಿನಿಮಾದಲ್ಲಿ ವಿಷ್ಣುವರ್ಧನ್ ಥರದ ಮ್ಯಾನರಿಸಂ ಇರುವಂಥ ಪಾತ್ರವಿದು. ಆಗಿನ ರಾಮಾಚಾರಿ, ಈಗಿನ ಕಾಲದಲ್ಲಿದ್ದರೆ ಹೇಗಿರಬಹುದು ಅನ್ನೋದನ್ನು ತೋರಿಸುವಂಥ ಪಾತ್ರವಿದೆ. ಒಂಥರಾ “ರಾಮಾಚಾರಿಯ’ ಅಪ್ಡೆಟೆಡ್ ವರ್ಶನ್ ಕ್ಯಾರೆಕ್ಟರ್ ಇದರಲ್ಲಿದೆ.
ಹಾಗಾಗಿ “ರಾಮಾಚಾರಿ 2.0′ ಅಂಥ ಟೈಟಲ್ ಇಟ್ಟುಕೊಂಡಿದ್ದೇವೆ’ ಎಂದು ವಿವರಣೆ ಕೊಡುತ್ತಾರೆ ತೇಜ್. ಇನ್ನು “ರಾಮಾಚಾರಿ 2.0′ ಚಿತ್ರದ ತೆರೆಮುಂದೆ ನಾಯಕನಾಗಿ, ತೆರೆಹಿಂದೆ ನಿರ್ದೇಶಕನಾಗಿ ಸ್ವತಃ ತೇಜ್ ಡಬಲ್ ರೋಲ್ ಮಾಡುತ್ತಿದ್ದಾರೆ. “ಸದ್ಯ ಈ ಸಿನಿಮಾದ ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿದ್ದು, ಸಿನಿಮಾದ ಮೊದಲ ಭಾಗವಾಗಿ ಈಗ ಟೈಟಲ್ ಫಸ್ಟ್‌ಲುಕ್ ರಿಲೀಸ್ ಮಾಡಿದ್ದೇವೆ. ಇನ್ನೂ ಸ್ಕ್ರಿಪ್ಟ್ ಕೆಲಸಗಳಿಗೆ ಕೆಲ ಸಮಯ ಹಿಡಿಯುತ್ತದೆ.
ಅದಾದ ನಂತರ ಸಿನಿಮಾದ ಇತರ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ನಡೆಯಲಿದೆ. ಆದಷ್ಟು ಬೇಗ ಚಿತ್ರದ ಸಿನಿಮಾದ ಮುಹೂರ್ತ ನಡೆಸುವ ಪ್ಲಾನ್ ಇದೆ’ ಎನ್ನುತ್ತಾರೆ ತೇಜ್. ಒಟ್ಟಾರೆ “ರಾಮಾಚಾರಿ’ ಅನ್ನೋ ಕ್ಯಾಚಿ ಟೈಟಲ್ ಅನ್ನು ಇಟ್ಟುಕೊಂಡು, ಅಪ್ಡೆಟೆಡ್ ವರ್ಶನ್ ಅಂಥ ಹೇಳಿಕೊಂಡು ತೆರೆಮೇಲೆ ಬರಲು ತಯಾರಿ ನಡೆಸುತ್ತಿರುವ “ರಾಮಾಚಾರಿ 2.0′ ಪ್ರೇಕ್ಷಕ ಪ್ರಭುಗಳಿಗೆ ಎಷ್ಟರ ಮಟ್ಟಿಗೆ ಇಷ್ಟವಾಗುತ್ತಾನೆ ಅನ್ನೋ ಕುತೂಹಲಕ್ಕೆ ಚಿತ್ರ ತೆರೆಗೆ ಬಂದ ಮೇಲಷ್ಟೇ ಉತ್ತರ ಸಿಗಲಿದೆ.