ಇತ್ತೀಚೆಗಷ್ಟೇ ತೆರೆಕಂಡ “ರಾಮಾಚಾರಿ 2.0′ ಸಿನಿಮಾ ನಿಧಾನವಾಗಿ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದ್ದು, ಚಿತ್ರತಂಡದ ಮೊಗದಲ್ಲಿ ಇದೀಗ ಗೆಲುವಿನ ನಗೆ ಮೂಡುತ್ತಿದೆ.
ಇನ್ನು “ರಾಮಾಚಾರಿ 2.0’ಗೆ ಸಿಗುತ್ತಿರುವ ಪ್ರತಿಕ್ರಿಯೆಗೆ ಸಿನಿಮಾದ ನಾಯಕ ನಟ ಕಂ ನಿರ್ದೇಶಕ ತೇಜ್ ಕೂಡ, ಫುಲ್ ಖುಷಿಯಾಗಿದ್ದಾರೆ.
ಈ ಬಗ್ಗೆ ಮಾತನಾಡುವ ತೇಜ್, “ರಾಜ್ಯಾದ್ಯಂತ ಸುಮಾರು 80ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ “ರಾಮಾಚಾರಿ 2.0′ ಸಿನಿಮಾ ಬಿಡುಗಡೆಯಾಗಿತ್ತು. ಸಿನಿಮಾ ನೋಡಿದ ಆಡಿಯನ್ಸ್ “ರಾಮಾಚಾರಿ 2.0′ ಬಗ್ಗೆ ಮೆಚ್ಚುಗೆಯ ಮಾತನಾಡುತ್ತಿದ್ದಾರೆ. ಪ್ರತಿ ಶೋಗಳಿಗೂ ಆಡಿಯನ್ಸ್ ಸಂಖ್ಯೆ ಕೂಡ ಜಾಸ್ತಿಯಾಗುತ್ತಿದೆ. ಬಿಡುಗಡೆಯಾದ ನಂತರ ದಿನದಿಂದ ದಿನಕ್ಕೆ ಸಿನಿಮಾದ ಗಳಿಕೆ ಕೂಡ ನಿಧಾನವಾಗಿ ಹೆಚ್ಚಾಗುತ್ತಿದೆ. ಅದರಲ್ಲೂ ಥಿಯೇಟರ್ ಗಳ ಕಡೆಯಿಂದಲೇ ಸಿನಿಮಾಕ್ಕೆ ಡಿಮ್ಯಾಂಡ್ ಬರುತ್ತಿದೆ. ಹೀಗಾಗಿ, ಈ ವಾರ ರಾಜ್ಯಾದ್ಯಂತ ಇನ್ನೂ ಸುಮಾರು 50ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ “ರಾಮಾಚಾರಿ 2.0′ ಬಿಡುಗಡೆಯಾಗಲಿದೆ’ ಎಂದು ಮಾಹಿತಿ ನೀಡುತ್ತಾರೆ.
“ನಮ್ಮ ಸಿನಿಮಾದ ಕ್ಲಾಸ್ ಸಬೆjಕ್ಟ್ ಮತ್ತು ಮಾಸ್ ಪ್ರಸೆನ್ಸ್ ಆಡಿಯನ್ಸ್‌ಗೆ ಇಷ್ಟವಾಗುತ್ತಿದೆ. ಮಲ್ಟಿಪ್ಲೆಕ್ಸ್ ಮತ್ತು ಸಿಂಗಲ್ ಸ್ಕ್ರೀನ್ ಎರಡೂ ಕಡೆಗಳಲ್ಲೂ “ರಾಮಾಚಾರಿ’ಗೆ ನಮ್ಮ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್ ಸಿಗುತ್ತಿದೆ. ಒಂದು ಒಳ್ಳೆಯ ಸಿನಿಮಾವನ್ನು ಪ್ರೇಕ್ಷಕರು ಖಂಡಿತವಾಗಿ ಕೈಹಿಡಿಯುತ್ತಾರೆ ಎಂಬುದಕ್ಕೆ “ರಾಮಾಚಾರಿ 2.0’ಸಿನಿಮಾವೇ ಸಾಕ್ಷಿ’ ಎಂಬುದು ತೇಜ್ ಮಾತು.
ಇನ್ನು “ರಾಮಾಚಾರಿ 2.0′ ಸಿನಿಮಾದಲ್ಲಿ ತೇಜ್ ಅವರೊಂದಿಗೆ ಹಿರಿಯ ನಟ ರಾಘವೇಂದ್ರ ರಾಜಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೌಸ್ತುಭ ಮಣಿ, ಚಂದನಾ ನಾಯಕಿಯರಾಗಿದ್ದಾರೆ. ಉಳಿದಂತೆ ಸ್ಪರ್ಶ ರೇಖಾ, ವಿಜಯ್ ಚೆಂಡೂರ್, ಸ್ವಾತಿ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಕರ್ಮಸಿದ್ಧಾಂತ ಎಳೆಯನ್ನು ಇಟ್ಟುಕೊಂಡು ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯಲ್ಲಿ ಸಿನಿಮಾ ಮೂಡಿಬಂದಿದೆ.