“ಕನ್ನಡ ಚಿತ್ರರಂಗದ ಇತಿಹಾಸದಲ್ಲಿ “ರಾಮಾಚಾರಿ’ ಹೆಸರು ಮತ್ತು ಪಾತ್ರವನ್ನು ಇಟ್ಟುಕೊಂಡು ಬಂದಿರುವ ಯಾವುದೇ ಸಿನಿಮಾಗಳು ಇಲ್ಲಿಯವರೆಗೂ ಸೋತಿಲ್ಲ. “ರಾಮಾಚಾರಿ’ಗೆ ಗೆಲುವು ಗ್ಯಾರೆಂಟಿ ಎನ್ನುವುದನ್ನು ಚರಿತ್ರೆ ತೋರಿಸಿದೆ. ಎಂದೆಂದಿಗೂ “ರಾಮಾಚಾರಿ’ಗೆ ಸೋಲಿಲ್ಲ. “ರಾಮಾಚಾರಿ 2.0′ ಸಿನಿಮಾದಲ್ಲಿ ಅದು ಮತ್ತೂಮ್ಮೆ ಸಾಬೀತಾಗಲಿದೆ’ – ಇದು ಇಂದು ತೆರೆಗೆ ಬರುತ್ತಿರುವ “ರಾಮಾಚಾರಿ 2.0′ ಸಿನಿಮಾದ ಬಗ್ಗೆ ನಟ ಕಂ ನಿರ್ದೇಶಕ ತೇಜ್ ಭರವಸೆಯ ಮಾತು.
ಅಂದಹಾಗೆ, “ರಾಮಾಚಾರಿ 2.0′ ಸಿನಿಮಾದ ಬಗ್ಗೆ ತೇಜ್‌ಅವರ ಇಂಥದ್ದೊಂದು ವಿಶ್ವಾಸದ ಮಾತಿಗೆ ಕಾರಣ, ಸಿನಿಮಾದ ಕಥಾಹಂದರ ಮತ್ತು ಅದನ್ನು ತೆರೆಗೆ ತಂದಿರುವ ರೀತಿ. “ಇದೊಂದು ಅಪ್ಪಟ ಮನರಂಜನಾತ್ಮಕ ಸಿನಿಮಾ. ಒಳ್ಳೆಯದು, ಕೆಟ್ಟದ್ದು ಏನೇ ಮಾಡಿದರೂ ಅದರ ಕರ್ಮಫಲ ಅನುಭವಿಸಲೇಬೇಕು. ಇಲ್ಲಿ ಮಾಡುವ ಕರ್ಮಗಳಿಂದ ಯಾರಿಗೂ ವಿನಾಯಿತಿ ಇಲ್ಲ ಎಂಬ ಒಂದು ಎಳೆ, ಗಟ್ಟಿಯಾದ ಸಂದೇಶವನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಎಲ್ಲದಕ್ಕಿಂತ ಹೆಚ್ಚಾಗಿ “ರಾಮಾಚಾರಿ’ ಎಂಬ ಟೈಟಲ್‌ಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಜನರಿಗೆ ಈ ಹೆಸರಿನ ಮೇಲೊಂದು ವಿಶೇಷ ಪ್ರೀತಿಯಿದೆ. ಹಾಗಾಗಿ ಈ “ರಾಮಾಚಾರಿ 2.0’ಗೂ ಅಂಥದ್ದೇ ಓಪನಿಂಗ್ ಸಿಗಬಹುದು ಎಂಬ ನಿರೀಕ್ಷೆಯಿದೆ’ ಎಂಬುದು ತೇಜ್ ಮಾತು.
ಇನ್ನು ಸಿನಿಮಾಕ್ಕೆ “ರಾಮಾಚಾರಿ 2.0′ ಎಂಬ ಟೈಟಲ್ ಆಯ್ಕೆ ಮಾಡಿಕೊಂಡಿರುವುದರ ಬಗ್ಗೆ ಮಾತನಾಡುವ ತೇಜ್, “ಇಲ್ಲಿ ನಾಯಕನ ತಾತನ ಹೆಸರು ರಾಮಾಚಾರಿ. ಸಿನಿಮಾದ ನಾಯಕ ರಾಮಾಚಾರಿಯ ಮೊಮ್ಮಗ ಆ್ಯಂಗ್ರಿ ಯಂಗ್‌ಮ್ಯಾನ್. ಭವಿಷ್ಯವನ್ನು ಹ್ಯಾಕ್ ಮಾಡುವ ಬುದ್ಧಿವಂತನಾದ ಮೊಮ್ಮಗ ಮತ್ತು ತಾತನ ಜೀವನ ಪಯಣ ಹೇಗಿರುತ್ತದೆ ಎಂಬುದು ಸಿನಿಮಾದ ಕಥೆ. ತಾತ, ಅಪ್ಪನಿಂದ ನಮಗೆ ಆಸ್ತಿ, ಮನೆ, ಅಂತಸ್ತು ಸಿಗುತ್ತದೆ. ಅದರ ಜೊತೆಗೆ ಅವರು ಮಾಡಿಟ್ಟ ಕರ್ಮವೂ ಬರುತ್ತದೆ. ಇಂಥದ್ದೇ ವಿಷಯಗಳ ಸುತ್ತ ಸಿನಿಮಾ ಕಥೆ ಸಾಗುತ್ತದೆ. ಸಿನಿಮಾದ ಕಥೆ ಮತ್ತು ಪಾತ್ರಕ್ಕೆ ಸೂಕ್ತವೆಂಬ ಕಾರಣಕ್ಕೆ “ರಾಮಾಚಾರಿ’ ಟೈಟಲ್ ಇಟ್ಟುಕೊಂಡಿದ್ದೇವೆ. ಇಲ್ಲಿ ಇಂದಿನ ಜನರೇಶನ್‌ನ ಅಪ್ಡೆಟ್ ರಾಮಾಚಾರಿಯನ್ನು ನೋಡಬಹುದು’ ಎಂಬ ವಿವರಣೆ ತೇಜ್ ಅವರದ್ದು.
“ರಾಮಾಚಾರಿ 2.0′ ಸಿನಿಮಾದಲ್ಲಿ ತೇಜ್ ಅವರೊಂದಿಗೆ ಹಿರಿಯ ನಟ ರಾಘವೇಂದ್ರ ರಾಜಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಂದನಾ, ಕೌಸ್ತುಭ ಮಣಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.
ಸ್ಪರ್ಶ ರೇಖಾ, ವಿಜಯ್ ಚೆಂಡೂರ್, ಸಂದೀಪ್ ಮಲಾನಿ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಟೀಸರ್, ಟ್ರೇಲರ್ ಮತ್ತು ಹಾಡುಗಳ ಮೂಲಕ ಒಂದಷ್ಟು ಗಮನ ಸೆಳೆದಿರುವ “ರಾಮಾಚಾರಿ 2.0′ ರಾಜ್ಯಾದ್ಯಂತ ಸುಮಾರು 150ಕ್ಕೂ ಹೆಚ್ಚಿನ ಕೆಂದ್ರಗಳಲ್ಲಿ ತೆರೆಗೆ ಬರುವ ಯೋಜನೆಯಲ್ಲಿದೆ.