ಸುಬ್ಟಾ ಭಟ್ಟರು ಮಡಿವಂತ ಕುಟುಂಬದವರು. ನಮ್ಮೂರಿನ ಸಾೖಬರ ಬೀದಿಯಲ್ಲಿ ಇರುವಂತಹ ಹನುಮ ಗುಡಿಯ ಅರ್ಚಕರು.ಯಾವತ್ತಿಗೂ, ತಮ್ಮ ವ್ರತವನ್ನು ಮಡಿವಂತಿಕೆಯನ್ನು ಮುರಿದವರಲ್ಲ. ಕೊರೊನಾ ಕಾರಣದಿಂದ ದೇವಸ್ಥಾನ ಮುಚ್ಚಿ ತಿಂಗಳುಗಳಾಗಿವೆ. ಕೈಯಲ್ಲಿದ್ದ ಚಿಲ್ಲರೆ ಕಾಸು ಅಷ್ಟು ಖಾಲಿಯಾಗಿ ಊಟಕ್ಕೂ ಕಷ್ಟಪಡುವಟತಹ ಪರಿಸ್ಥಿತಿ.
ಕೈಯಲ್ಲಿ ದುಡಿಮೆ ಇಲ್ಲ ಮನೆಯಲ್ಲಿ ದಿನಸಿ ಇಲ್ಲ. ತಲೆಯ ಮೇಲೆ ಕೈಹೊತ್ತು ದೇವಸ್ಥಾನದ ಜಗಲಿ ಮೇಲೆ ಕುಳಿತಿದ್ದರು. ಅತ್ತ ಆಟೋ ರಿಕ್ಷಾದಲ್ಲಿ ಏರಿಯಾದ ಸಮಾಜ ಸೇವಕರಾದ ರಹಿಂ ಬಾಯ್ ದೊಡ್ಡ ಪಾತ್ರೆಯ ತುಂಬಾ ಚಿತ್ರಾನ್ನ ಹಾಗೂ ಮೊಸರನ್ನವನ್ನು ತಂದು ಎಲ್ಲರಿಗೂ ಹಂಚುತ್ತಿದ್ದ.
ಅವನತ್ತ ನೋಡಿದ ಸುಬ್ಟಾಭಟ್ಟರಿಗೆ ಬೇಡವೆಂದರೂ ಕಣ್ಣಲ್ಲಿ ನೀರು ಜಿನುಗುತ್ತದೆ. ಆದರೆ ಸ್ವಾಭಿಮಾನ ಬಿಟ್ಟು ಯಾರ ಮುಂದೆಯೂ ಕೈ ಚಾಚಲು ಮನಸ್ಸು ಹಿಂಜರಿದಿತ್ತು. ಅತ್ತ ಹನುಮ ದೇವರನ್ನು ನೋಡುತ್ತಾ ತಮ್ಮ ಹೆಗಲ ಮೇಲಿದ್ದ ವಸ್ತ್ರದಿಂದ ಕಣ್ಣೊರೆಸಿಕೊಂಡು ಎದ್ದು ನಿಲ್ಲುತ್ತಾರೆ.
ಇದನ್ನೆಲ್ಲ ಓರೆಗಣ್ಣಿನಿಂದ ನೋಡುತ್ತಿದ್ದ ರಹೀಮ್ ಬಾಯ್, ಕೈಯಲ್ಲಿ ಮೂರು ದೊಡ್ಡ ಪೊಟ್ಟಣದ ಊಟವನ್ನು ಹೊತ್ತು ಭಟ್ಟರ ಬಳಿ ಬಂದು ದೂರವೇ ನಿಂತು ಭಟ್ರೆ, ನಿಮ್ಮ ರಾಮ ಬೇರೆಯಲ್ಲ, ನಮ್ಮ ರಹೀಮ ಬೇರೆಯಲ್ಲ. ದೇವನೊಬ್ಬ ನಾಮ ಹಲವು ಯೋಚನೆ ಮಾಡಬೇಡಿ. ಇದನ್ನ ಪಕ್ಕದ ಬೀದಿಯಲ್ಲಿರುವ ಜೋಯಿಸರ ಮನೆಯಲ್ಲಿ ದುಡ್ಡು ಕೊಟ್ಟು ಮಾಡಿಸಿದ್ದು. ಈರುಳ್ಳಿ ಬೆಳ್ಳುಳ್ಳಿ ಇಲ್ಲದ ಚಿತ್ರಾನ್ನ ಹಾಗೂ ಮೊಸರನ್ನ ದಯಮಾಡಿ ತೆಗೆದುಕೊಳ್ಳಿ ಭಟ್ರೆ.
ನಿಮ್ಮ ರಾಮ ನಮ್ಮ ರಹೀಮನ ಸೇವೆಯಿಂದ ತೃಪ್ತನಾಗಲಿ. ಏನು ಯೋಚನೆ ಮಾಡದೆ ಊಟವನ್ನು ಕೈಯಲ್ಲಿ ತೆಗೆದುಕೊಂಡ ಭಟ್ಟರು ಅನ್ನದಾತೋ ಸುಖೀಭವ ಎಂದು ಹೇಳಿ ಹೊರಡುತ್ತಾರೆ.
Masha Allaha ಎಂದು ರಹಿಮ್ ಬಾಯ್ ತಮ್ಮ ಅನ್ನ ದಾನ ಸೇವೆಯನ್ನು ಮುಂದುವರಿಸುತ್ತಾರೆ.
ವೀಣಾ ಧನಂಜಯ,
ದುಬೈ