Advertisement

29 ಸಾವಿರ ಗ್ರಾಮಗಳಲ್ಲಿ ನಿಧಿ ಸಮರ್ಪಣ ಅಭಿಯಾನ

01:08 AM Jan 20, 2021 | Team Udayavani |

ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರದ ನಿರ್ಮಾಣಕ್ಕಾಗಿ ರಾಮ ಭಕ್ತರು ಶ್ರದ್ಧೆಯಿಂದ ನೀಡಲು ದೇಣಿಗೆಯನ್ನು ಅಷ್ಟೇ ಶ್ರದ್ಧಾ  ಪೂರ್ವಕವಾಗಿ ಮಂದಿರ ಕಾರ್ಯಕ್ಕೆ ತಲುಪಿಸುವ ವ್ಯವಸ್ಥೆ ಯಡಿಯಲ್ಲೇ ನಿಧಿ ಸಮರ್ಪಣ ಅಭಿಯಾನ ನಡೆಯುತ್ತಿದೆ. ಮನೆಮನೆಗೆ ಭೇಟಿ, ಗಣ್ಯರ ಸಂಪರ್ಕ, ಸಂತರ ಮಾರ್ಗದರ್ಶನ ಹೀಗೆ ಏಕರೂಪದ ವ್ಯವಸ್ಥೆಯ ಹಲವು ವಿಧಾನಗಳಲ್ಲಿ ನಿಧಿ ಸಮರ್ಪಣ ಅಭಿಯಾನ ದೇಶಾದ್ಯಂತ ಆರಂಭವಾಗಿದೆ.

Advertisement

2020ರ ಆಗಸ್ಟ್‌ 15ರಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿದ ಅನಂತರ ರಾಮಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನಿಂದ ದೇಶದ ರಾಮ ಭಕ್ತರ ಕಾಣಿಕೆಯಿಂದ ಮಂದಿರ ನಿರ್ಮಾಣದ ಸಂಕಲ್ಪ ಮಾಡಲಾಯಿತು. ಅದರಂತೆ ನಿಧಿ ಸಮರ್ಪಣ ಅಭಿಯಾನದ ಉಸ್ತುವಾರಿಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ವಿಶ್ವಹಿಂದು ಪರಿಷತ್‌ಗೆ ಒಪ್ಪಿಸಲಾಗಿದೆ. ಅನಂತರ ಸಂಘದ ಪ್ರಮುಖರು ಅಖೀಲ ಭಾರತ ಮಟ್ಟದಲ್ಲಿ ಕಾರ್ಯಯೋಜನೆ ಸಿದ್ಧಪಡಿಸಿದರು. ದೇಶದ 5 ಲಕ್ಷ ಗ್ರಾಮಗಳನ್ನು ಹಾಗೂ 11 ಕೋಟಿ ಮನೆ ತಲುಪಲು ಎಲ್ಲ ಕಾರ್ಯ ಯೋಜನೆ ತಯಾರಾಯಿತು. ಅಖೀಲ ಭಾರತ ಮಟ್ಟದ ಸೂಚನೆಯಂತೆ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಕರಪತ್ರ, ಪುಸ್ತಕ ನೀಡಿ, ಮಾಹಿತಿ ಒದಗಿಸುವ ಜತೆಗೆ ಬೃಹತ್‌ ಪ್ರಮಾಣದಲ್ಲಿ ಜನ ಸಂಪರ್ಕ ಆರಂಭವಾಗಿದೆ.

ನಿಧಿ ಸಮರ್ಪಣ ಅಭಿಯಾನಕ್ಕೆ ಜ.15ರಂದು ದೇಶದ ಎಲ್ಲ ತಾಲೂಕು ಕೇಂದ್ರಗಳಲ್ಲಿ ಚಾಲನೆ ಸಿಕ್ಕಿದ್ದು, ಫೆ.27ರ ವರೆಗೆ (ಸಂಕ್ರಾಂತಿ ಯಿಂದ ಮಾಘ ಪೂರ್ಣಿಮೆವರೆಗೆ) ಅಭಿಯಾನ ನಡೆಯಲಿದೆ. ಕರ್ನಾಟಕದಲ್ಲಿ ಫೆ.5ರೊಳಗೆ ಅಭಿಯಾನ ಮುಗಿಸುವ ಗುರಿಯಿದೆ. ಅಭಿಯಾನದ ಅಂಗವಾಗಿ ಅಖೀಲ ಭಾರತ ಹಾಗೂ ಪ್ರಾಂತೀಯ ಮಟ್ಟದಲ್ಲಿ ಪ್ರತ್ಯೇಕ ತಂಡ ರಚನೆಯಾಗಿದೆ. ಸಾರ್ವಜನಿಕ ಸಮಿತಿ ರಚನೆ ಮಾಡಲಾಗಿದೆ. ಸಂತರನ್ನು ಒಳಗೊಂಡ ಮಾರ್ಗದರ್ಶನ ಮಂಡಳಿಯನ್ನು ರೂಪಿಸಲಾಗಿದೆ.

ತಂಡಗಳ ರಚನೆ :

ರಾಜ್ಯದಲ್ಲಿ ಸರಿಸುಮಾರು 29 ಸಾವಿರ ಗ್ರಾಮಗಳನ್ನು ಈ ಅಭಿಯಾನದ ಮೂಲಕ ತಲುಪಲಿದ್ದೇವೆ. ರಾಜ್ಯದ ಸುಮಾರು 1.50 ಕೋಟಿ ಮನೆಗಳಲ್ಲಿ 80 ರಿಂದ 90 ಲಕ್ಷ ಮನೆ ತಲುಪಲು ಸಂಘ ಪರಿವಾರದ 40 ಸಂಘಟನೆಗಳ ಕಾರ್ಯಕರ್ತರನ್ನು ಕ್ರೋಡೀಕರಿಸಿ ವಿವಿಧ ತಂಡಗಳ ರಚನೆ ಮಾಡಲಾಗಿದೆ. ಮನೆ ಮನೆಗೆ ಭೇಟಿ ನೀಡಲು ರೂಪಿಸಿರುವ ಕಾರ್ಯಕರ್ತರ ತಂಡವು 10ರೂ., 100 ರೂ., 1,000 ರೂ.ಗಳ ಕೂಪನ್‌ ಮೂಲಕ ದೇಣಿಗೆ ಪಡೆಯಲಿದ್ದಾರೆ. ಸಾವಿರಕ್ಕೂ ಅಧಿಕ ದೇಣಿಗೆ ನೀಡು ವವರಿಗೆ ರಸೀದಿ ನೀಡಲಾಗುತ್ತದೆ. ಅಧಿಕ ಮೊತ್ತದ ದೇಣಿಗೆಯನ್ನು ಚೆಕ್‌ ಮೂಲಕ ಪಡೆಯಲಾಗುತ್ತದೆ. ರಾಮ ಭಕ್ತರು ಶ್ರದ್ಧೆಯಿಂದ ನೀಡುವ ಕಾಣಿಕೆಯನ್ನು ಅಷ್ಟೇ ಶ್ರದ್ಧೆಯಿಂದ ಮಂದಿರ ಕಾರ್ಯಕ್ಕೆ ತಲುಪಿಸುವ ವ್ಯವಸ್ಥೆಯೂ ಆಗಲಿದೆ. ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನಿಂದ ಬಂದಿರುವ ಕೂಪನ್‌, ಕರಪತ್ರ ರಸೀದಿಯನ್ನು ಮಾತ್ರ ಬಳಸಲಾಗುತ್ತದೆ.

Advertisement

ದೇಣಿಗೆ ಸಂಗ್ರಹ ವ್ಯವಸ್ಥೆ  :

ಪ್ರತೀ ಐದು ಕಾರ್ಯಕರ್ತರ ತಂಡಕ್ಕೆ ಒರ್ವ “ಸಂಗ್ರಹ ಕರ್ತ’ನನ್ನು ನೇಮಿಸಲಾಗಿದೆ. ಹಾಗೆಯೇ ಪ್ರತೀ ಐದು ಸಂಗ್ರಹಕರ್ತನ ಅನಂತರ ಓರ್ವ “ಜಮಾ ಕರ್ತ’ನನ್ನು ನೇಮಿಸಲಾಗಿದೆ. ಕಾರ್ಯಕರ್ತರು ಮನೆಮನೆಗೆ ಹೋಗಿ ಸಂಗ್ರಹಿಸಿದ ದೇಣಿಗೆಯನ್ನು ಅಂದೇ ಸಂಗ್ರಹಕರ್ತನಿಗೆ ತಲುಪಿಸುವ ವ್ಯವಸ್ಥೆ ಆಗುತ್ತದೆ. ಸಂಗ್ರಹ ಕರ್ತ ಎಲ್ಲವನ್ನೂ ಲೆಕ್ಕ ಹಾಕಿ ನಿರ್ದಿಷ್ಟ ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಿ, ಜಮಾ ಕರ್ತನಿಗೆ ತಲುಪಿಸುತ್ತಾರೆ. ಜಮಾಕರ್ತ ದೇಣಿಗೆಯ ಹಣವನ್ನು 48 ಗಂಟೆಗಳೊಳಗೆ ನಿರ್ದಿಷ್ಟ ಬ್ಯಾಂಕ್‌ಗೆ ಜಮಾ ಮಾಡಲಿದ್ದಾನೆ.

ಸಮಿತಿ ಮತ್ತು ಮಾರ್ಗದರ್ಶನ ಮಂಡಳಿ  :

ನಿಧಿ ಸಮರ್ಪಣ ಅಭಿಯಾನದ ಅಂಗವಾಗಿ ರಾಜ್ಯ ಮಟ್ಟದ ಸಮಿತಿ ರಚನೆ ಮಾಡಲಾಗಿದೆ. ರಚನೆಯಲ್ಲಿ ಸಂಘ ಪರಿವಾರದ ಪ್ರಮುಖರು ಸೇರಿ ವಿವಿಧ ಕ್ಷೇತ್ರದ ಗಣ್ಯರಿದ್ದಾರೆ. ಸಮಿತಿಯ ಸದಸ್ಯರು ಸಮಾಜದ ಗಣ್ಯರನ್ನು ಭೇಟಿ ಮಾಡಿ ನಿಧಿ ಸಮರ್ಪಣ ಅಭಿಯಾನದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲಿದ್ದಾರೆ. ಹಾಗೆಯೇ 25ರಿಂದ 30 ಸ್ವಾಮೀಜಿಗಳನ್ನು ಒಳಗೊಂಡ ಸಂತರ ಮಾರ್ಗದರ್ಶನ ಮಂಡಳಿ ರಚನೆ ಮಾಡಲಾಗಿದೆ. ಈ ಸಂಬಂಧ ಸಮಾಜಕ್ಕೆ ಸಂದೇಶ ರವಾನೆ ಮಾಡುವುದು, ಸಂತ ಸಮಾವೇಶಗಳಲ್ಲಿ ಭಾಗವಹಿಸುವುದು, ಸಮುದಾಯವನ್ನು ಈ ಕಾರ್ಯದಲ್ಲಿ ಒಗ್ಗೂಡಿಸುವ ಕೆಲಸ ಮಾರ್ಗದರ್ಶನ ಮಂಡಳಿಯ ಮೂಲಕ ಆಗಲಿದೆ.

 

ಕೇಶವ ಹೆಗಡೆ, ಕ್ಷೇತ್ರೀಯ ಸಂಘಟನ ಕಾರ್ಯದರ್ಶಿ, ವಿಶ್ವ ಹಿಂದೂ ಪರಿಷತ್‌.

Advertisement

Udayavani is now on Telegram. Click here to join our channel and stay updated with the latest news.

Next